ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

J & K ಚುನಾವಣೆ: ಬಿರುಸಿನ ಸಿದ್ಧತೆ ಆರಂಭಿಸಿದ ಬಿಜೆಪಿ, ಕಾಂಗ್ರೆಸ್

Published 6 ಜನವರಿ 2024, 13:03 IST
Last Updated 6 ಜನವರಿ 2024, 13:03 IST
ಅಕ್ಷರ ಗಾತ್ರ

ಶ್ರೀನಗರ: ಸಂವಿಧಾನದ 370ನೇ ವಿಧಿಯಡಿ ಜಮ್ಮು–ಕಾಶ್ಮೀರಕ್ಕೆ ಕಲ್ಪಿಸಲಾಗಿದ್ದ ವಿಶೇಷ ಸ್ಥಾನಮಾನ ರದ್ದು ಮಾಡಿದ ಕೇಂದ್ರ ಸರ್ಕಾರದ ತೀರ್ಮಾನವನ್ನು ಎತ್ತಿಹಿಡಿದ ಸುಪ್ರೀಂ ಕೋರ್ಟ್, 2024ರ ಸೆಪ್ಟೆಂಬರ್ ಒಳಗಾಗಿ ಚುನಾವಣೆ ನಡೆಸಲು ನಿರ್ದೇಶಿಸಿದೆ. ಇದರ ಬೆನ್ನಲ್ಲೇ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ರಾಜ್ಯದಲ್ಲಿ ಬಿರುಸಿನ ರಾಜಕೀಯ ಚಟುವಟಿಕೆ ಆರಂಭಿಸಿವೆ.

ವಿಧಾನಸಭಾ ಚುನಾವಣೆಗೆ ಮುನ್ನುಡಿ ಎಂಬಂತೆ ಬರಲಿರುವ ಲೋಕಸಭಾ ಚುನಾವಣೆಯಲ್ಲಿ ಮೈತ್ರಿಯ ಸಾಧ್ಯತೆ ಕುರಿತು ವಿರೋಧ ಪಕ್ಷಗಳ ಇಂಡಿಯಾ ಒಕ್ಕೂಟ ಸಿದ್ಧತೆ ನಡೆಸಿದೆ ಎಂದೆನ್ನಲಾಗಿದೆ. ಕಾಂಗ್ರೆಸ್ ಮುಖಂಡ ಗುಲಾಮ್ ಅಹ್ಮದ್ ಮೀರ್ ಅವರು ಕಣಿವೆ ರಾಜ್ಯಕ್ಕೆ ಭೇಟಿ ನೀಡಿ ಸೀಟು ಹಂಚಿಕೆ ಕುರಿತು ವಿವಿಧ ಪಕ್ಷಗಳೊಂದಿಗೆ ಚರ್ಚೆ ನಡೆಸಿದ್ದಾರೆ.

‘ಜಮ್ಮು, ಕಾಶ್ಮೀರ ಹಾಗೂ ಲಡಾಕ್ ಪ್ರದೇಶದಲ್ಲಿರುವ ಒಟ್ಟು ಆರು ಲೋಕಸಭಾ ಕ್ಷೇತ್ರಗಳಲ್ಲಿ ಇಂಡಿಯಾ ಒಕ್ಕೂಟದ ಅಭ್ಯರ್ಥಿಗಳನ್ನು ಗೆಲ್ಲಿಸುವ ಭರವಸೆಯನ್ನು ಇಲ್ಲಿನ ಜನರು ನೀಡಿದ್ದಾರೆ’ ಎಂದು ಮೀರ್ ಅನಂತನಾಗ್‌ನಲ್ಲಿ ಹೇಳಿದ್ದಾರೆ.

ಭಾನುವಾರ ಭೇಟಿ ನೀಡಲಿರುವ ಜೆ.ಪಿ.ನಡ್ಡಾ

ಇದರ ನಡುವೆ ಜಮ್ಮು ಮತ್ತು ಕಾಶ್ಮೀರಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಭಾನುವಾರ ಭೇಟಿ ನೀಡಲಿದ್ದಾರೆ. ಬರಲಿರುವ ಲೋಕಸಭಾ ಚುನಾವಣೆಯಲ್ಲಿ ಪಕ್ಷ ಕೈಗೊಳ್ಳಬಹುದಾದ ತಂತ್ರಗಾರಿಕೆ ಕುರಿತು ಮುಖಂಡರೊಂದಿಗೆ ಅವರು ಚರ್ಚಿಸಲಿದ್ದಾರೆ ಎಂದು ಪಕ್ಷದ ಮೂಲಗಳು ಹೇಳಿವೆ.

‘ಐತಿಹಾಸಿಕ ರಘುನಾಥ ದೇವಾಲಯಕ್ಕೆ ಭೇಟಿ ನೀಡಿದ ಬಳಿಕ ಪಕ್ಷದ ಹಿರಿಯ ಮುಖಂಡರೊಂದಿಗೆ ಸಭೆ ನಡೆಸಲಿದ್ದಾರೆ. ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ಜಮ್ಮು ಹಾಗೂ ಕಾಶ್ಮೀರದ ಉಸ್ತುವಾರಿ ತರುಣ್ ಚುಗ್ ಅವರೂ ಈ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ’ ಎಂದು ರಾಜ್ಯ ಘಟಕದ ಅಧ್ಯಕ್ಷ ರವೀಂದ್ರ ರೈನಾ ತಿಳಿಸಿದರು.

‘ಪಕ್ಷ ನಡೆಸಿರುವ ಆಂತರಿಕ ಸಮೀಕ್ಷೆಯ ವರದಿಯನ್ನು ಜೆ.ಪಿ. ನಡ್ಡಾ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಇತ್ತೀಚೆಗೆ ಸಲ್ಲಿಸಲಾಗಿತ್ತು. ಈ ವರದಿ ಮತ್ತು ಪಕ್ಷದ ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸುವ ಕುರಿತು ಹಾಗೂ ಇದೇ ತಿಂಗಳು ರಾಜ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡುತ್ತಿದ್ದು, ಆ ಕುರಿತೂ ಸಭೆಯಲ್ಲಿ ಚರ್ಚೆ ನಡೆಯಲಿದೆ’ ಎಂದು ವಿವರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT