ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್, ಕಮಲನಾಥ್ ಕೋಟೆ 'ಛಿಂದ್ವಾರ' ಗೆಲ್ಲಲು ಭಾರಿ ಯೋಜನೆ ರೂಪಿಸಿದ ಬಿಜೆಪಿ

Published 29 ಫೆಬ್ರುವರಿ 2024, 14:16 IST
Last Updated 29 ಫೆಬ್ರುವರಿ 2024, 14:16 IST
ಅಕ್ಷರ ಗಾತ್ರ

ಛಿಂದ್ವಾರ: ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಕಮಲನಾಥ್‌ ಹಾಗೂ ಕಾಂಗ್ರೆಸ್‌ನ ಭದ್ರಕೋಟೆ ಎನಿಸಿರುವ 'ಛಿಂದ್ವಾರ' ಲೋಕಸಭಾ ಕ್ಷೇತ್ರದಲ್ಲಿ ಜಯ ಸಾಧಿಸಲು ನಿರಂತರವಾಗಿ ವಿಫಲವಾಗಿರುವ ಬಿಜೆಪಿ, ಈ ಬಾರಿ ಶತಾಯಗತಾಯ ಗೆಲ್ಲಲೇಬೇಕೆಂದು ಪಣ ತೊಟ್ಟಿದೆ. ಅದಕ್ಕಾಗಿ ಮುಂಬರುವ ಸಾರ್ವತ್ರಿಕ ಚುನಾವಣೆಗೂ ಮುನ್ನ ಕಾಂಗ್ರೆಸ್‌ ಪಕ್ಷದ ಬರೋಬ್ಬರಿ 50,000 ಕಾರ್ಯಕರ್ತರನ್ನೇ ಪಕ್ಷಕ್ಕೆ ಸೇರಿಸಿಕೊಳ್ಳುವ ಯೋಜನೆ ರೂಪಿಸಿದೆ.

ಛಿಂದ್ವಾರ ಸಂಸದರಾಗಿ 9 ಬಾರಿ ಆಯ್ಕೆಯಾಗಿರುವ ಕಮಲನಾಥ್‌, ಕ್ಷೇತ್ರದಾದ್ಯಂತ ಪ್ರಭಾವ ಹೊಂದಿದ್ದಾರೆ. ಸದ್ಯ ಅವರ ಮಗ ನಕುಲ್‌ ನಾಥ್‌ ಇಲ್ಲಿ ಸಂಸದರಾಗಿದ್ದಾರೆ.

2018ರಿಂದ 2022ರ ವರೆಗೆ ಮುಖ್ಯಮಂತ್ರಿಯಾಗಿದ್ದ ಕಮಲನಾಥ್‌ ಅವರು ತಮ್ಮ ಪುತ್ರನೊಂದಿಗೆ ಬಿಜೆಪಿ ಸೇರಲಿದ್ದಾರೆ ಎಂಬ ವದಂತಿ ಇತ್ತೀಚೆಗೆ ಹರಿದಾಡಿತ್ತು.

ಈ ಕ್ಷೇತ್ರಕ್ಕೆ 1997ರಲ್ಲಿ ನಡೆದ ಉಪಚುನಾವಣೆ ಹೊರತುಪಡಿಸಿ, 1952ರಿಂದ ಈವರೆಗೆ ಕಾಂಗ್ರೆಸ್‌ ಪಕ್ಷವೇ ಗೆಲುವು ಸಾಧಿಸಿದೆ. 2019ರ ಸಾರ್ವತ್ರಿಕ ಚುನಾವಣೆ ವೇಳೆ ರಾಜ್ಯದಲ್ಲಿರುವ ಒಟ್ಟು 29 ಸ್ಥಾನಗಳ ಪೈಕಿ 28ರಲ್ಲಿ  ಗೆಲುವು ಕಂಡಿದ್ದ ಬಿಜೆಪಿಗೆ ಛಿಂದ್ವಾರ ಮಾತ್ರ ದಕ್ಕಿರಲಿಲ್ಲ. ಹೀಗಾಗಿ, ಇದು ಕಾಂಗ್ರೆಸ್‌ ಭದ್ರಕೋಟೆಯಾಗಿಯೇ ಉಳಿದಿದೆ.

ಈ ಬಾರಿ ಛಿಂದ್ವಾರದಲ್ಲಿ ಗೆಲ್ಲುವ ಮಹತ್ವಾಕಾಂಕ್ಷೆಯನ್ನು ಈಡೇರಿಸಿಕೊಳ್ಳಲು ಲೋಕಸಭೆ ಚುನಾವಣೆಗೂ ಮುನ್ನ ಎದುರಾಳಿ (ಕಾಂಗ್ರೆಸ್‌) ಪಕ್ಷದ ನಾಯಕರು, ಕಾರ್ಯಕರ್ತರು ಸೇರಿದಂತೆ 50,000 ಮಂದಿಯನ್ನು ಸೇರಿಸಿಕೊಳ್ಳುವ ‌ಯೋಜನೆಯನ್ನು ರೂಪಿಸಲಾಗಿದೆ ಎಂದು ಬಿಜೆಪಿ ನಾಯಕರು ಮಾಹಿತಿ ನೀಡಿದ್ದಾರೆ.

ಇದರ ನಡುವೆ, ಕಾಂಗ್ರೆಸ್‌ನ 50 ಕಾರ್ಯಕರ್ತರು ಛಿಂದ್ವಾರದಲ್ಲಿ ಬುಧವಾರ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ ಎಂದು ಬಿಜೆಪಿ ಹೇಳಿದೆ.

ಕಳೆದವಾರ ಗ್ವಾಲಿಯರ್‌ ಹಾಗೂ ಖಜುರಾಹೊದಲ್ಲಿ ಮಾತನಾಡಿದ್ದ ಕೇಂದ್ರ ಗೃಹ ಸಚಿವರೂ ಆಗಿರುವ ಬಿಜೆಪಿಯು ಮುಖ್ಯ ತಂತ್ರಗಾರ ಅಮಿತ್‌ ಶಾ, ಮಧ್ಯಪ್ರದೇಶದ ಎಲ್ಲ 29 ಕ್ಷೇತ್ರಗಳನ್ನು ಗೆಲ್ಲಲು ಕಾರ್ಯಪ್ರವೃತ್ತರಾಗಬೇಕು ಎಂದು ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.

'ಅಯೋಧ್ಯೆಯ ರಾಮಮಂದಿರದಲ್ಲಿ ಕಳೆದ ತಿಂಗಳು ನಡೆದ ಬಾಲರಾಮನ ಪ್ರಾಣಪ್ರತಿಷ್ಠಾಪನಾ ಕಾರ್ಯಕ್ರಮವನ್ನು ಕಾಂಗ್ರೆಸ್‌ ಬಹಿಷ್ಕರಿಸಿತ್ತು. ಇದರಿಂದ ಬೇಸರಗೊಂಡಿರುವ ಆ ಪಕ್ಷದ ಸುಮಾರು 5,000 ಮುಖಂಡರು ಹಾಗೂ ಕಾರ್ಯಕರ್ತರು ಫೆಬ್ರುವರಿ 1ರಿಂದ ಈಚೆಗೆ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ' ಎಂದು ಬಿಜೆಪಿಯ ಛಿಂದ್ವಾರ ಜಿಲ್ಲಾ ಘಟಕದ ಅಧ್ಯಕ್ಷ ಬಂಟಿ ಸಾಹು ಗುರುವಾರ ತಿಳಿಸಿದ್ದಾರೆ.

'ಚುನಾವಣೆಗೂ ಮುನ್ನ ಕಾಂಗ್ರೆಸ್‌ನ ಸುಮಾರು 50,000 ಕಾರ್ಯಕರ್ತರನ್ನು ಸೇರಿಸಿಕೊಳ್ಳುವ ಹಾಗೂ ಎದುರಾಳಿಯನ್ನು ಮಣಿಸುವ ಗುರಿ ಹಾಕಿಕೊಂಡಿದ್ದೇವೆ. ಆ ಪಕ್ಷದ ಬಗ್ಗೆ ಅಸಮಾಧಾನಗೊಂಡಿರುವವರು ನಮ್ಮ ಪಕ್ಷ ಸೇರುತ್ತಿದ್ದಾರೆ‌' ಎಂದು ಹೇಳಿದ್ದಾರೆ.

'ಈ ಸಲ ಭಾರಿ ಅಂತರದಿಂದ ಗೆಲ್ಲಲಿದ್ದೇವೆ' ಎಂದೂ ವಿಶ್ವಾಸ ವ್ಯಕ್ತಪಡಿಸಿರುವ ಅವರು, ಚುನಾವಣೆಗೂ ಮುನ್ನ ಜಯ ಖಾತ್ರಿಪಡಿಸಿಕೊಳ್ಳಲು ಪಕ್ಷವು ಛಿಂದ್ವಾರದ ಮೂಲೆ ಮೂಲೆ ತಲುಪುತ್ತಿದೆ ಎಂದಿದ್ದಾರೆ.

ಕಾಂಗ್ರೆಸ್‌ನ ಅತೃಪ್ತ ಸದಸ್ಯರನ್ನು ಓಲೈಸಲು ಹಾಗೂ ಪಕ್ಷಕ್ಕೆ ಸೇರಿಸಿಕೊಳ್ಳುವಂತೆ ಛಿಂದ್ವಾರ ಘಟಕಕ್ಕೆ ಬಿಜೆಪಿ ರಾಜ್ಯ ನಾಯಕತ್ವ ಸೂಚನೆ ನೀಡಿದೆ ಎಂದು ಹಿರಿಯ ನಾಯಕರೊಬ್ಬರು ತಿಳಿಸಿದ್ದಾರೆ.

ಕಾಂಗ್ರೆಸ್‌ನ 1,500 ಮಂದಿ ಫೆಬ್ರುವರಿ 21 ರಂದು ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಮಾಜಿ ಸಂಸದ ಹಾಗೂ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿದ್ದ ಉದ್ಯಮಿ ಉಜ್ವಲ್ ಸಿಂಗ್ ಠಾಕೂರ್ ಅಕಾ ಅಜ್ಜು ಅವರೂ ಬಿಜೆಪಿಗೆ ಸೇರಿಕೊಂಡಿದ್ದಾರೆ. ಇನ್ನಷ್ಟು ಮಂದಿ ನಮ್ಮ ಪಕ್ಷ ಸೇರಲಿದ್ದಾರೆ ಎಂದು ಮುಖ್ಯಮಂತ್ರಿ ಮೋಹನ್‌ ಯಾದವ್‌ ಭವಿಷ್ಯ ನುಡಿದಿದ್ದಾರೆ.

'2014ರ ಚುನಾವಣೆಯಲ್ಲಿ 1,16,537 ಮತಗಳಿಂದ ಸೋತಿದ್ದ ನಾವು, 2019ರ ಚುನಾವಣೆಯಲ್ಲಿ ಕೇವಲ 34,953 ಮತಗಳಿಂದ ಛಿಂದ್ವಾರವನ್ನು ಕಳೆದುಕೊಂಡಿದ್ದೆವು. ಸೋಲಿನ ಅಂತರವನ್ನು ಗಣನೀಯವಾಗಿ ಕಡಿಮೆ ಮಾಡುತ್ತಾ ಬಂದಿದ್ದೇವೆ ಎಂಬುದನ್ನು ಈ ಅಂಕಿ–ಅಂಶಗಳೇ ಸ್ಪಷ್ಟಪಡಿಸುತ್ತವೆ. ಕಳೆದ ವರ್ಷ ನಡೆದ ವಿಧಾನಸಭೆ ಚುಣಾವಣೆಯಲ್ಲಿ ನಮ್ಮ ಪಕ್ಷವು ಛಿಂದ್ವಾರದಲ್ಲಿನ ಎಲ್ಲ ಕ್ಷೇತ್ರಗಳನ್ನು ಕಳೆದುಕೊಂಡಿದೆಯಾದರೂ, ಮತ ಗಳಿಕೆ ಪ್ರಮಾಣ ಏರಿಕೆಯಾಗಿದೆ. ನಮ್ಮ ಶಕ್ತಿ ವೃದ್ಧಿಸುತ್ತಿದೆ. ಛಿಂದ್ವಾರವನ್ನು ಗೆಲ್ಲಲು ಸಜ್ಜಾಗಿದ್ದೇವೆ' ಎಂದು ಬಿಜೆಪಿ ನಾಯಕರು ಹೇಳಿದ್ದಾರೆ.

ಬಿಜೆಪಿ ಸುಳ್ಳು ಹೇಳುತ್ತಿದೆ: ಕಾಂಗ್ರೆಸ್‌
ನಮ್ಮ ಪಕ್ಷದ ನಾಯಕರು ಹಾಗೂ ಕಾರ್ಯಕರ್ತರು ಬಿಜೆಪಿ ಸೇರುತ್ತಿದ್ದಾರೆ ಎಂಬುದು ಸುಳ್ಳು. ಆ ಪಕ್ಷವು ಸುಳ್ಳು ಹೇಳಿಕೆಗಳನ್ನು ನೀಡುತ್ತಿದೆ ಎಂದು ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ವಿಶ್ವನಾಥ್‌ ಒಕ್ಟೆ ಹೇಳಿದ್ದಾರೆ. ಅವರ ಪ್ರಕಾರ ಫೆಬ್ರುವರಿ 1ರಿಂದ ಈವರೆಗೆ ಕೇವಲ 24 ಕಾರ್ಯಕರ್ತರಷ್ಟೇ ಬಿಜೆಪಿ ಸೇರಿದ್ದಾರೆ.

'ಅವಕಾಶವಾದಿಗಳಷ್ಟೇ ಕಾಂಗ್ರೆಸ್ ತೊರೆದು ಬಿಜೆಪಿ ಸೇರುತ್ತಿದ್ದಾರೆ. ಪಕ್ಷದ ನಿಜವಾದ ಯೋಧರು ಬದಲಾಗಿಲ್ಲ. ಅಕ್ರಮ ಹಣ ಪಡೆದವರು, ಸ್ವಾರ್ಥಿಗಳು ಮಾತ್ರ ಬಿಜೆಪಿ ಸೇರುತ್ತಿದ್ದಾರೆ' ಎಂದು ಅವರು ಆರೋಪಿಸಿದ್ದಾರೆ.

ಎಚ್ಚೆತ್ತ ಕಮಲನಾಥ್‌
ಬಿಜೆಪಿ ರಣತಂತ್ರದ ಬಗ್ಗೆ ಎಚ್ಚೆತ್ತುಕೊಂಡಿರುವ ಕಮಲನಾಥ್‌, ಸಂಸದರಾದ ತಮ್ಮ ಪುತ್ರ ನಕುಲ್‌ ಪರವಾಗಿ ಕ್ಷೇತ್ರದಾದ್ಯಂತ 5 ದಿನ ಸಂಚರಿಸಲು ಹಾಗೂ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ನಿರ್ಧರಿಸಿದ್ದಾರೆ.

ಛಿಂದ್ವಾರ ಕ್ಷೇತ್ರಕ್ಕೆ ಕಳೆದವಾರ ಭೇಟಿ ನೀಡಿದ್ದ ಕಮಲನಾಥ್‌, ಬಿಜೆಪಿ ಸೇರ್ಪಡೆ ವದಂತಿಯ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ್ದರು. 'ಇಂತಹ ಊಹಾಪೋಹ ಹರಡುತ್ತಿರುವುದು ನೀವು (ಮಾಧ್ಯಮ). ಬೇರೆ ಯಾರೂ ಇದರ ಬಗ್ಗೆ ಮಾತನಾಡಿಲ್ಲ. ಬಿಜೆಪಿ ಸೇರ್ಪಡೆ ವಿಚಾರದ ಬಗ್ಗೆ ನನ್ನನ್ನು ಎಂದಾದರೂ ಕೇಳಿದ್ದೀರಾ? ನೀವೇ ಸುದ್ದಿ ಮಾಡಿ ನಂತರ ನನ್ನ ಬಳಿ ಬಂದಿದ್ದೀರಾ' ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.

'ಹಲವು ವರ್ಷಗಳಿಂದ ನಿಮ್ಮ ಪ್ರೀತಿ ಮತ್ತು ವಿಶ್ವಾಸವನ್ನು ಸ್ವೀಕರಿಸುತ್ತಿದ್ದೇನೆ. ಕಮಲನಾಥ್‌ಗೆ ವಿದಾಯ ಹೇಳುವುದು ನಿಮ್ಮ ಆಯ್ಕೆಯಾಗಿದೆ. ನೀವು ಬಯಸಿದರೆ ನಾನು ಹೊರಡಲು ಸಿದ್ಧ' ಎಂದು ಕಾರ್ಯಕರ್ತರನ್ನು ಉದ್ದೇಶಿಸಿ ಹೇಳಿದ್ದರು.

ಕಮಲನಾಥ್‌ ಅವರು, ಛಿಂದ್ವಾರದಿಂದ ನಕುಲ್‌ ಸ್ಪರ್ಧಿಸಲಿದ್ದಾರೆ ಎಂದು ಈಗಾಗಲೇ ಘೋಷಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT