ಸೋಮವಾರ, 15 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಇವಿಎಂ ಕುರಿತು ಎಲಾನ್ ಮಸ್ಕ್ ಹೇಳಿಕೆ: ರಾಜೀವ್ ಚಂದ್ರಶೇಖರ್ ತಿರುಗೇಟು

Published 16 ಜೂನ್ 2024, 14:45 IST
Last Updated 16 ಜೂನ್ 2024, 15:38 IST
ಅಕ್ಷರ ಗಾತ್ರ

ನವದೆಹಲಿ: ‘ವಿದ್ಯುನ್ಮಾನ ಮತಯಂತ್ರಗಳನ್ನು(ಇವಿಎಂ) ಕಿತ್ತೆಸೆಯಬೇಕಿದೆ’ ಎಂಬ ಟೆಸ್ಲಾ ಮಾಲೀಕ ಎಲಾನ್ ಮಸ್ಕ್ ಹೇಳಿಕೆಗೆ ತಿರುಗೇಟು ನೀಡಿರುವ ಬಿಜೆಪಿ ನಾಯಕ ರಾಜೀವ್ ಚಂದ್ರಶೇಖರ್, ‘ಸುರಕ್ಷಿತ ಹಾರ್ಡ್‌ವೇರ್ ತಯಾರಿಸಲು ಸಾಧ್ಯವಿಲ್ಲ ಎಂಬ ಅಭಿಪ್ರಾಯ ಸರಿಯಲ್ಲ’ ಎಂದು ಹೇಳಿದ್ದಾರೆ.

‘ಇಂದಿನ ಡಿಜಿಟಲ್ ಯುಗದಲ್ಲಿ ಸುರಕ್ಷಿತವಾದ ಡಿಜಿಟಲ್‌ ಹಾರ್ಡ್‌ವೇರ್‌ ಅನ್ನು ಯಾರಿಂದಲೂ ಅಭಿವೃದ್ಧಿಪಡಿಸಲು ಸಾಧ್ಯವಿಲ್ಲ ಎಂಬ ಸಾಮಾನ್ಯವಾದ ಹೇಳಿಕೆಯನ್ನು ಎಲಾನ್ ಮಸ್ಕ್‌ ನೀಡಿದ್ದಾರೆ. ಆದರೆ ಅದು ತಪ್ಪು. ಅಮೆರಿಕ, ಯುರೋಪ್‌ನಲ್ಲಿ ಆ ರೀತಿ ಆಗಬಹುದೇನೊ.. ಆದರೆ ನಮ್ಮಲ್ಲಿ ಅದು ಸಾಧ್ಯವಿಲ್ಲ. ಆ ದೇಶಗಳಲ್ಲಿ ಇಂಟರ್‌ನೆಟ್‌ ಸಂಪರ್ಕದ ಇವಿಎಂ ಅಭಿವೃದ್ಧಿಪಡಿಸುವುದಕ್ಕಾಗಿ ರೂಢಿಯಲ್ಲಿರುವ ಕಂಪ್ಯೂಟರ್‌ ವೇದಿಕೆಗಳನ್ನು ಬಳಸಲಾಗುತ್ತದೆ’ ಎಂದು ತಿರುಗೇಟು ನೀಡಿದ್ದಾರೆ.

‘ಭಾರತದಲ್ಲಿ ಬಳಸುವ ಇವಿಎಂಗಳನ್ನು ನಿರ್ದಿಷ್ಟ ಉದ್ದೇಶಕ್ಕೆ ಅಗತ್ಯವಿರುವಂತೆ ವಿನ್ಯಾಸಗೊಳಿಸಲಾಗಿದೆ. ಇವು ಸಂಪೂರ್ಣ ಸುರಕ್ಷಿತವಾಗಿದ್ದು, ಯಾವುದೇ ನೆಟ್‌ವರ್ಕ್ ಅಥವಾ ಮಾಧ್ಯಮದ ಸಂಪರ್ಕ ಇಲ್ಲದೆ, ಪ್ರತ್ಯೇಕವಾಗಿಯೇ ಇರುತ್ತವೆ. ಬ್ಲೂಟೂಥ್‌, ವೈಫೈ ಸಂಪರ್ಕವೂ ಸಾಧ್ಯವಾಗದಂತೆ ವಿನ್ಯಾಸಗೊಳಿಸಲಾಗಿದೆ’ ಎಂದು ಹೇಳಿದ್ದಾರೆ.

ರಾಜೀವ್‌ ಚಂದ್ರಶೇಖರ್‌ ಅವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಮಸ್ಕ್‌, ‘ಯಾವುದೇ ಯಂತ್ರವನ್ನಾದರೂ ಹ್ಯಾಕ್‌ ಮಾಡಬಹುದು’ ಎಂದಿದ್ದಾರೆ.

ಈ ಮಾತಿಗೆ, ‘ತಾಂತ್ರಿಕವಾಗಿ ನಿಮ್ಮ ವಾದ ಸರಿ. ಕ್ವಾಂಟಮ್ ಕಂಪ್ಯೂಟ್‌ ತಂತ್ರಜ್ಞಾನ ಬಳಸಿ ಎಷ್ಟೇ ಜಟಿಲವಾದ ರಹಸ್ಯವನ್ನು ನಾನು ಭೇದಿಸಬಲ್ಲೆ. ವಿಮಾನವೊಂದರ ಗಾಜಿನ ಕಾಕ್‌ಪಿಟ್‌ನಲ್ಲಿರುವ ವಿಮಾನ ನಿಯಂತ್ರಿಸುವ ಸಾಧನಗಳನ್ನು ಸೇರಿದಂತೆ ಯಾವುದೇ ಡಿಜಿಟಲ್ ಹಾರ್ಡ್‌ವೇರ್/ಸಿಸ್ಟಮ್‌ ಅನ್ನು ನಾನು ಹ್ಯಾಕ್ ಮಾಡಬಲ್ಲೆ’ ಎಂದು ಚಂದ್ರಶೇಖರ್ ಹೇಳಿದ್ದಾರೆ. 

ಪೋರ್ಟೋ ರಿಕೋದಲ್ಲಿ ಇತ್ತೀಚೆಗೆ ನಡೆದ ಪ್ರಾಥಮಿಕ ಚುನಾವಣೆಯಲ್ಲಿ ಅಕ್ರಮಗಳು ನಡೆದಿವೆ ಎಂಬ ಆರೋಪಗಳು ಕೇಳಿಬಂದಿದ್ದು, ಈ ಚುನಾವಣೆಯಲ್ಲಿ ಇವಿಎಂ ಬಳಸಲಾಗಿತ್ತು. ಈ ವಿಚಾರವಾಗಿ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಎಲಾನ್‌ ಮಸ್ಕ್‌, ‘ವಿದ್ಯುನ್ಮಾನ ಮತಯಂತ್ರಗಳನ್ನು ನಾವು ಕಿತ್ತೆಸೆಯಬೇಕಿದೆ. ಮನುಷ್ಯರಿಂದ ಇಲ್ಲವೇ ಎಐನಿಂದ ಇವಿಎಂ ಹ್ಯಾಕ್ ಆಗುವ ಸಣ್ಣ ಸಾಧ್ಯತೆಯಿದ್ದರೂ, ಚುನಾವಣಾ ಫಲಿತಾಂಶದ ಮೇಲೆ ಅದರ ಪರಿಣಾಮ ಅಧಿಕವಾಗಿರುತ್ತದೆ’ ಎಂದು ಕಳವಳ ವ್ಯಕ್ತಪಡಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT