ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Assembly Election Results: ಛತ್ತೀಸಗಢದಲ್ಲಿ ಅಧಿಕಾರಕ್ಕೆ ಮರಳಿದ ಬಿಜೆಪಿ

Published 3 ಡಿಸೆಂಬರ್ 2023, 19:03 IST
Last Updated 3 ಡಿಸೆಂಬರ್ 2023, 19:03 IST
ಅಕ್ಷರ ಗಾತ್ರ

ನವದೆಹಲಿ: ಮತದಾನೋತ್ತರ ಸಮೀಕ್ಷೆಗಳ ಅಂದಾಜನ್ನು ಹುಸಿಗೊಳಿಸಿ ಛತ್ತೀಸಗಢದಲ್ಲಿ ಬಿಜೆಪಿ ಅಧಿಕಾರಕ್ಕೆ ಮರಳಿದೆ. 90 ಸಂಖ್ಯಾಬಲದ ರಾಜ್ಯ ವಿಧಾನಸಭೆಯಲ್ಲಿ 54 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಇಲ್ಲಿ ಕಾಂಗ್ರೆಸ್ 35 ಸ್ಥಾನಗಳನ್ನು ಮಾತ್ರ ಗೆದ್ದುಕೊಂಡಿದೆ.

ಛತ್ತೀಸಗಢದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ತೀವ್ರ ಪೈಪೋಟಿ ಇರುತ್ತದೆಯಾದರೂ, ಕಾಂಗ್ರೆಸ್ ಅಧಿಕಾರ ಉಳಿಸಿಕೊಳ್ಳುತ್ತದೆ ಎಂದು ಹಲವು ಮತದಾನೋತ್ತರ ಸಮೀಕ್ಷೆಗಳು ಹೇಳಿದ್ದವು. ಆದರೆ 2000ನೆಯ ಇಸವಿಯಲ್ಲಿ ರಾಜ್ಯ ರಚನೆಯಾದ ನಂತರದಲ್ಲಿ ಇಲ್ಲಿ ಈ ಬಾರಿಯದ್ದು ಬಿಜೆಪಿ ಸಾಧಿಸಿರುವ ಅತಿದೊಡ್ಡ ಗೆಲುವು.

ಚುನಾವಣಾ ಆಯೋಗ ನೀಡಿರುವ ಮಾಹಿತಿ ಪ್ರಕಾರ, ಛತ್ತೀಸಗಢದಲ್ಲಿ ಬಿಜೆಪಿಯು ಶೇಕಡ 46.27ರಷ್ಟು ಮತಗಳನ್ನು ತನ್ನದಾಗಿಸಿಕೊಂಡಿದೆ. ಕಾಂಗ್ರೆಸ್ ಪಕ್ಷಕ್ಕೆ ಶೇ 42.23ರಷ್ಟು ಮತಗಳು ದೊರೆತಿವೆ. ರಾಜ್ಯದ ಉತ್ತರ ಭಾಗ ಮತ್ತು ಕೇಂದ್ರ ಭಾಗದಲ್ಲಿ, ಬಸ್ತಾರ್ ಪ್ರದೇಶದಲ್ಲಿ ಬಿಜೆಪಿ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗೆಲುವು ಸಾಧಿಸಿದ್ದಾರೆ.

2003ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯು ಛತ್ತೀಸಗಢದಲ್ಲಿ ಶೇ 39.26ರಷ್ಟು ಮತಗಳನ್ನು ಪಡೆದಿತ್ತು, 50 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. 2008 ಮತ್ತು 2018ರಲ್ಲಿ ಕ್ರಮವಾಗಿ 50 ಹಾಗೂ 49 ಸ್ಥಾನಗಳನ್ನು ಪಡೆದಿತ್ತು. ಈ ರಾಜ್ಯದಲ್ಲಿ ಬಿಜೆಪಿಯು ಸತತವಾಗಿ 15 ವರ್ಷ ಆಡಳಿತ ನಡೆಸಿತ್ತು.

2018ರ ಚುನಾವಣೆಯಲ್ಲಿ ಬಿಜೆಪಿ ಭಾರಿ ಸೋಲು ಕಂಡಿತ್ತು. ಆಗ 15 ಸ್ಥಾನಗಳನ್ನು ಮಾತ್ರ ಗೆದ್ದುಕೊಂಡಿತ್ತು. 2003ರಲ್ಲಿ ಕಾಂಗ್ರೆಸ್ ಪಕ್ಷವು 37 ಸ್ಥಾನಗಳನ್ನು ಪಡೆದುಕೊಂಡಿತ್ತು. 2008ರಲ್ಲಿ 38 ಸ್ಥಾನಗಳನ್ನು ಹಾಗೂ 2013ರಲ್ಲಿ 39 ಸ್ಥಾನಗಳನ್ನು ಗೆದ್ದುಕೊಂಡಿತ್ತು. 2018ರಲ್ಲಿ ಪಕ್ಷವು 68 ಸ್ಥಾನಗಳನ್ನು ಗೆದ್ದಿತ್ತು.

ಮುಖ್ಯಮಂತ್ರಿ ಭೂಪೇಶ್ ಬಘೆಲ್ ಅವರು ತಮ್ಮ ಪಾಟನ್ ಕ್ಷೇತ್ರದಲ್ಲಿ ಬಿಜೆಪಿಯ ಲೋಕಸಭಾ ಸದಸ್ಯ ವಿಜಯ್ ಬಘೆಲ್ ವಿರುದ್ಧ ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿಗಳ ಪೈಕಿ ಪ್ರಮುಖರಾದ ಉಪ ಮುಖ್ಯಮಂತ್ರಿ ಟಿ.ಎಸ್. ಸಿಂಹದೇವ್ ಮತ್ತು ಛತ್ತೀಸಗಢ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ದೀಪಕ್ ಬೈಜ್ ಅವರು ಸೋಲುಂಡಿದ್ದಾರೆ. ಜನತಾ ಕಾಂಗ್ರೆಸ್‌ನ ಅಮಿತ್ ಅಜಿತ್ ಜೋಗಿ ಅವರು ಕೂಡ ಸೋಲು ಕಂಡಿದ್ದಾರೆ.

ಬಿಜೆಪಿಯ ಪ್ರಮುಖ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ರಮಣ್ ಸಿಂಗ್ ಅವರು ರಾಜನಂದಗಾಂವ್ ಕ್ಷೇತ್ರದಲ್ಲಿ ಕಾಂಗ್ರೆಸ್ಸಿನ ಗಿರೀಶ್ ದೇವಾಂಗನ್ ಅವರನ್ನು 45,084 ಮತಗಳಿಂದ ಸೋಲಿಸಿದ್ದಾರೆ. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಅರುಣ್ ಕುಮಾರ್ ಸಾವ್ ಅವರು ಲೋರಮಿ ಕ್ಷೇತ್ರದಲ್ಲಿ ಗೆದ್ದಿದ್ದಾರೆ.

ಬಿಜೆಪಿಯ ಹಿರಿಯ ನಾಯಕ ಧರ್ಮಲಾಲ್‌ ಕೌಶಿಕ್‌ ಅವರು ಬಿಲ್ಹಾ ಕ್ಷೇತ್ರದಿಂದ ಮತ್ತು ಮಾಜಿ ಐಎಎಸ್‌ ಅಧಿಕಾರಿ ಒ.ಪಿ.ಚೌಧರಿ ಅವರು ರಾಯಗಢ ಕ್ಷೇತ್ರದಿಂದ ಗೆದ್ದಿದ್ದಾರೆ.

ಚುನಾವಣಾ ಪ್ರಚಾರ ಅಭಿಯಾನದ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯಕ್ಕೆ ಎಂಟು ಬಾರಿ ಭೇಟಿ ಕೊಟ್ಟಿದ್ದರು, ಹಲವು ಪ್ರಚಾರ ಸಭೆಗಳಲ್ಲಿ ಪಾಲ್ಗೊಂಡಿದ್ದರು. ಕೇಂದ್ರದ ಕೆಲವು ಸಚಿವರು ಹಾಗೂ ಬಿಜೆಪಿಯ ಮುಖ್ಯಮಂತ್ರಿಗಳು ಹಲವು ವಾರ ರಾಜ್ಯದಲ್ಲಿದ್ದು, ಪ್ರಚಾರದಲ್ಲಿ ಭಾಗಿಯಾಗಿದ್ದರು. 

‘ಮೋದಿ ಕಿ ಗ್ಯಾರಂಟಿ–2023’ ಹೆಸರಿನಲ್ಲಿ ಬಿಜೆಪಿ ಮುಂದಿಟ್ಟಿದ್ದ ಭರವಸೆಗಳು, ಬುಡಕಟ್ಟು ಜನರ ಪ್ರಾಬಲ್ಯವಿರುವ ಈ ರಾಜ್ಯದಲ್ಲಿ ಪಕ್ಷದ ಪರವಾಗಿ ಕೆಲಸ ಮಾಡಿದೆ. ಬಿಜೆಪಿ ವಿರುದ್ಧ ಆಡಳಿತ ವಿರೋಧ ಅಲೆಯಿದ್ದ ಕಾರಣ ಕಾಂಗ್ರೆಸ್‌, 2018ರ ಚುನಾವಣೆಯಲ್ಲಿ ಗೆದ್ದು ಇಲ್ಲಿ ಅಧಿಕಾರಕ್ಕೇರಿತ್ತು. ಉಚಿತ ಕೊಡುಗೆಗಳ ಭರವಸೆಗಳೂ ಅಂದು ಪಕ್ಷದ ಗೆಲುವಿಗೆ ಕಾರಣವಾಗಿದ್ದವು.

ಆದರೆ ಬಿಜೆಪಿ ಈ ಬಾರಿ ‘ಮೋದಿ ಗ್ಯಾರಂಟಿ’ ಹೆಸರಿನಲ್ಲಿ ಹಲವು ಜನಪ್ರಿಯ ಕೊಡುಗೆಗಳ ಭರವಸೆ ನೀಡಿತು. ಪ್ರತಿ ಎಕರೆಗೆ 21 ಕ್ವಿಂಟಲ್ ಭತ್ತವನ್ನು ಕ್ವಿಂಟಲ್‌ಗೆ ₹3,100ರಂತೆ ಖರೀದಿಸುವುದು, ಮದುವೆ ಆಗಿರುವ ಮಹಿಳೆಯರಿಗೆ ವಾರ್ಷಿಕ ₹12 ಸಾವಿರ ನೆರವು ನೀಡುವುದು ಕೂಡ ಬಿಜೆಪಿ ನೀಡಿದ ಭರವಸೆಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದವು.

ಛತ್ತೀಸಗಢ ವಿಧಾನಸಭೆಯ 90 ಸ್ಥಾನಗಳಲ್ಲಿ 29 ಸ್ಥಾನಗಳು ಪರಿಶಿಷ್ಟ ವರ್ಗ ಹಾಗೂ 10 ಸ್ಥಾನಗಳು ಪರಿಶಿಷ್ಟ ಜಾತಿಗೆ ಮೀಸಲಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT