ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಗಡೆ ಹೇಳಿಕೆಯಲ್ಲಿ ಸಂವಿಧಾನ ನಾಶಪಡಿಸುವ BJP-RSSನ ಕಪಟ ಅಜೆಂಡಾ ಇದೆ: ಕಾಂಗ್ರೆಸ್

Published 10 ಮಾರ್ಚ್ 2024, 12:33 IST
Last Updated 10 ಮಾರ್ಚ್ 2024, 12:33 IST
ಅಕ್ಷರ ಗಾತ್ರ

ನವದಹೆಲಿ: ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಬರೆದ ಸಂವಿಧಾನವನ್ನು ಪರಿಷ್ಕರಿಸುವ ಅಥವಾ ನಾಶಪಡಿಸುವ ಗುಪ್ತ ಮತ್ತು ಕಪಟ ಅಜೆಂಡಾವನ್ನು ಬಿಜೆಪಿ–ಆರ್‌ಎಸ್‌ಎಸ್‌ ಹೊಂದಿವೆ ಎಂದು ಸಂಸದ ಅನಂತಕುಮಾರ್ ಹೆಗಡೆ ಹೇಳಿಕೆಯನ್ನು ಉಲ್ಲೇಖಿಸಿ ಕಾಂಗ್ರೆಸ್ ಹೇಳಿದೆ.

‘ಸಂವಿಧಾನಕ್ಕೆ ತಿದ್ದುಪಡಿ ತರಬೇಕಾದರೆ ಲೋಕಸಭೆಯಲ್ಲಿ ಬಿಜೆಪಿ 400ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಬೇಕಿದೆ’ ಎಂದು ಸಿದ್ದಾಪುರ ತಾಲೂಕಿನ ಹಲಗೇರಿಯ ಬಿಜೆಪಿ ಮಹಾಶಕ್ತಿ ಕೇಂದ್ರದಲ್ಲಿ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುವ ವೇಳೆ ಸಂಸದ ಅನಂತಕುಮಾರ್ ಹೆಗಡೆ ಹೇಳಿದ್ದರು. ಈ ಹೇಳಿಕೆಗೆ ಬಾರಿ ವಿರೋಧ ವ್ಯಕ್ತವಾಗಿತ್ತು.

‘ಬಿಜೆಪಿ ಸಂಸದರ ಈ ಹೇಳಿಕೆ ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಸಂಘ ಪರಿವಾರದ ಗುಪ್ತ ಉದ್ದೇಶಗಳ ಬಹಿರಂಗ ಘೋಷಣೆಯಾಗಿದೆ. ನರೇಂದ್ರ ಮೋದಿ ಮತ್ತು ಬಿಜೆಪಿಯ ಅಂತಿಮ ಗುರಿ ಬಾಬಾ ಸಾಹೇಬರ ಸಂವಿಧಾನವನ್ನು ನಾಶಪಡಿಸುವುದು’ ಎಂದು ಕಾಂಗ್ರೆಸ್ ನಾಯಕ ರಾಹುಲ್‌ ಗಾಂಧಿ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.

‘ಬಿಜೆಪಿ ಮತ್ತು ಆರ್‌ಎಸ್‌ಎಸ್‌ ನ್ಯಾಯ, ಸಮಾನತೆ, ನಾಗರಿಕ ಹಕ್ಕುಗಳು ಮತ್ತು ಪ್ರಜಾಪ್ರಭುತ್ವವನ್ನು ದ್ವೇಷಿಸುತ್ತವೆ. ಸಮಾಜವನ್ನು ವಿಭಜಿಸಿ, ಮಾಧ್ಯಮವನ್ನು ಗುಲಾಮರನ್ನಾಗಿ ಮಾಡಿಕೊಂಡು, ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕನ್ನು ಕಸಿದುಕೊಂಡು, ಸ್ವತಂತ್ರ ಸಂಸ್ಥೆಗಳನ್ನು ದುರ್ಬಲಗೊಳಿಸಿ, ವಿರೋಧ ಪಕ್ಷಗಳನ್ನು ಇಲ್ಲವಾಗಿಸುವ ಮೂಲಕ ಪ್ರಜಾಪ್ರಭುತ್ವ ರಾಷ್ಟ್ರವನ್ನು ಸರ್ವಾಧಿಕಾರದ ರಾಷ್ಟ್ರವಾಗಿ ಪರಿವರ್ತಿಸಲು ಪ್ರಯತ್ನಿಸುತ್ತಿದೆ’ ಎಂದರು.

‘ಸಂವಿಧಾನದ ಪ್ರತಿಯೊಬ್ಬ ಸೈನಿಕರು ವಿಶೇಷವಾಗಿ ದಲಿತರು, ಆದಿವಾಸಿಗಳು, ಹಿಂದುಳಿದವರು ಮತ್ತು ಅಲ್ಪಸಂಖ್ಯಾತರೇ ಎಚ್ಚೆತ್ತುಕೊಳ್ಳಿ.. ನಿಮ್ಮ ಧ್ವನಿ ಎತ್ತಿ... ಭಾರತವು ನಿಮ್ಮೊಂದಿಗಿದೆ’ ಎಂದು ಹೇಳಿದರು.

ಈ ಕುರಿತಂತೆ ಮಾತನಾಡಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ‘ಬಿಜೆಪಿ ಸಂಸದನ ಹೇಳಿಕೆಯು ಸರ್ವಾಧಿಕಾರವನ್ನು ಹೇರುವ ಮೋದಿ-ಆರ್‌ಎಸ್‌ಎಸ್‌ನ ಕಪಟ ಅಜೆಂಡಾವನ್ನು ಮತ್ತೊಮ್ಮೆ ಬಹಿರಂಗಪಡಿಸಿದೆ’ ಎಂದರು.

‘ಬಿಜೆಪಿ ಮತ್ತು ಆರ್‌ಎಸ್‌ಎಸ್‌ ರಹಸ್ಯವಾಗಿ ಸರ್ವಾಧಿಕಾರವನ್ನು ಹೇರಲು ಬಯಸುತ್ತಿವೆ. ಆ ಮೂಲಕ ಅವರು ತಮ್ಮ ಮನುವಾದಿ ಮನಸ್ಥಿತಿಯನ್ನು ಭಾರತದ ಜನರ ಮೇಲೆ ಹೇರಲು ಮುಂದಡಿ ಇಟ್ಟಿವೆ. ಎಸ್‌ಸಿ– ಎಸ್‌ಟಿಗಳು ಮತ್ತು ಒಬಿಸಿಗಳ ಹಕ್ಕುಗಳನ್ನು ಕಸಿದುಕೊಳ್ಳುವ, ದೇಶದ ಜಾತ್ಯತೀತ ಮತ್ತು ವಿವಿಧತೆಯಲ್ಲಿ ಏಕತೆ ತತ್ವವನ್ನು ನಾಶಪಡಿಸುವ ಹುನ್ನಾರ ನಡೆಸುತ್ತಿವೆ. ಇದಕ್ಕೆ ಕಾಂಗ್ರೆಸ್ ಅವಕಾಶ ನೀಡುವುದಿಲ್ಲ’ ಎಂದು ಹೇಳಿದರು.

‘ಮೋದಿ ಅವರ ನೆಚ್ಚಿನ ಅನಂತಕುಮಾರ್ ಹೆಗಡೆ ಅವರು ಈಗಾಗಲೇ ತಮಗೆ ತಿಳಿದಿದ್ದನ್ನು ಮಾತ್ರ ಬಹಿರಂಗಪಡಿಸಿದ್ದಾರೆ. ಆ ಮೂಲಕ ಬಾಬಾಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನವನ್ನು ಬುಡಮೇಲು ಮಾಡುವುದೇ ಬಿಜೆಪಿ ಮತ್ತು ಆರೆಸ್ಸೆಸ್ ಗುರಿಯಾಗಿದೆ ಎಂಬುವುದನ್ನು ಸ್ಪಷ್ಟಪಡಿಸಿದ್ದಾರೆ. ಮೋದಿ ಅವರ ‘400 ಸ್ಥಾನಗಳು’ ಹಿಂದಿನ ರಹಸ್ಯವೇ ಸಂವಿಧಾನವನ್ನು ಕಿತ್ತೊಗೆಯುವುದಾಗಿದೆ. ಸಂವಿಧಾನವನ್ನು ರಕ್ಷಿಸಿ, ಪ್ರಜಾಪ್ರಭುತ್ವವನ್ನು ಉಳಿಸಬೇಕೆಂದರೆ ಮೋದಿ ಸರ್ಕಾರವನ್ನು ಕಿತ್ತೆಸೆಯಬೇಕಿದೆ’ ಎಂದು ಕಾಂಗ್ರೆಸ್‌ ಹಿರಿಯ ನಾಯಕ ಜೈರಾಮ್‌ ರಮೇಶ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT