ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಅಪಶಕುನ, ಜೇಬುಗಳ್ಳತನ ಹೇಳಿಕೆ: ರಾಹುಲ್, ಖರ್ಗೆ ವಿರುದ್ಧ ಆಯೋಗಕ್ಕೆ ಬಿಜೆಪಿ ದೂರು

Published 22 ನವೆಂಬರ್ 2023, 16:03 IST
Last Updated 22 ನವೆಂಬರ್ 2023, 16:03 IST
ಅಕ್ಷರ ಗಾತ್ರ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರನ್ನು ಉದ್ದೇಶಿಸಿ ‘ಪನೌತಿ’ (ಅಪಶಕುನ), ‘ಜೇಬುಗಳ್ಳತನ’ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಜರಿದಿರುವುದರ ವಿರುದ್ಧ ಬಿಜೆಪಿಯು ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದೆ.

ಮೋದಿ ಅವರು ಗುಜರಾತ್‌ನ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಅಲ್ಲಿ ಮೋದಿ ಅವರ ಜಾತಿಯನ್ನು ಒಬಿಸಿ ಪಟ್ಟಿಗೆ ಸೇರಿಸಲಾಗಿತ್ತು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಹೇಳಿರುವುದು ತಪ್ಪು ಮಾಹಿತಿ. ಈ ವಿಚಾರವಾಗಿ ಖರ್ಗೆ ಅವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಕೂಡ ಅದು ಮನವಿ ಮಾಡಿದೆ.

‘ಖರ್ಗೆ ಮತ್ತು ರಾಹುಲ್ ಅವರ ಹೇಳಿಕೆಗಳು ಅವರ ವಿರುದ್ಧ ಕ್ರಿಮಿನಲ್ ಕ್ರಮ ಜರುಗಿಸುವುದಕ್ಕೆ ಸೂಕ್ತವಾಗಿವೆ. ಅವರಿಗೆ ನೈತಿಕ ಮೌಲ್ಯಗಳ ಬಗ್ಗೆ ಗೌರವವಿಲ್ಲ. ಚುನಾವಣಾ ನೀತಿ ಸಂಹಿತೆಯ ಬಗ್ಗೆಯೂ ಗೌರವ ಇಲ್ಲ’ ಎಂದು ಬಿಜೆಪಿ ಸಲ್ಲಿಸಿರುವ ದೂರಿನಲ್ಲಿ ಹೇಳಲಾಗಿದೆ.

ರಾಹುಲ್ ಅವರು ‘ವಿವೇಕವಿಲ್ಲದ, ಅಶಿಕ್ಷಿತ, ಮೌಲ್ಯವಿಲ್ಲದ ವ್ಯಕ್ತಿ, ಅವರದ್ದು ಕೀಳು ಮನಃಸ್ಥಿತಿ’ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಧಾ ಮೋಹನ ದಾಸ್ ಅಗರ್ವಾಲ್ ಅವರು ಆಯೋಗಕ್ಕೆ ಮನವಿ ಸಲ್ಲಿಸಿದ ನಂತರ ವಾಗ್ದಾಳಿ ನಡೆಸಿದರು.

ರಾಜಸ್ಥಾನದಲ್ಲಿ ಮಾಡಿದ ಚುನಾವಣಾ ಭಾಷಣದಲ್ಲಿ ರಾಹುಲ್ ಅವರು ಮೋದಿ ಅವರನ್ನು ಉದ್ದೇಶಿಸಿ ‘ಅಪಶಕುನ’ ಎಂದಿದ್ದರು. ಮಧ್ಯಪ್ರದೇಶದಲ್ಲಿ ಮಾಡಿದ್ದ ಭಾಷಣದಲ್ಲಿ ರಾಹುಲ್ ಅವರು ಮೋದಿ ಅವರನ್ನು ಉದ್ದೇಶಿಸಿ ‘ಜೇಬುಗಳ್ಳತನ’ ಎಂದಿದ್ದರು. ಮೋದಿ ಅವರು ಜನರ ಗಮನವನ್ನು ಬೇರೆಡೆ ಸೆಳೆಯುತ್ತಾರೆ, ಉದ್ಯಮಿ ಗೌತಮ್ ಅದಾನಿ ಅವರು ಜನರ ಜೇಬಿನಿಂದ ಹಣ ಎತ್ತುತ್ತಾರೆ ಎಂದು ರಾಹುಲ್ ಹೇಳಿದ್ದರು.

ಪ್ರಧಾನಿಯನ್ನು ಅಪಶಕುನಕ್ಕೆ ಮತ್ತು ಜೇಬುಗಳ್ಳತನಕ್ಕೆ ಹೋಲಿಸುವುದು ಯಾವುದೇ ನಾಯಕನಿಗೂ ಶೋಭೆ ಅಲ್ಲ ಎಂದು ಬಿಜೆಪಿ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT