ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

4 ರಾಜ್ಯಗಳಲ್ಲಿ CM ಯಾರು? BJPಯಲ್ಲಿ ದ್ವಂದ್ವ, ರೇವಂತ್‌ರತ್ತ ‘ಕೈ’ ಒಲವು

Published 3 ಡಿಸೆಂಬರ್ 2023, 16:06 IST
Last Updated 3 ಡಿಸೆಂಬರ್ 2023, 16:06 IST
ಅಕ್ಷರ ಗಾತ್ರ

ನವದೆಹಲಿ: ಮೂರು ರಾಜ್ಯಗಳಲ್ಲಿ ಭಾರಿ ಬಹುಮತದಿಂದ ಗೆದ್ದು ಬೀಗುತ್ತಿರುವ ಬಿಜೆಪಿ ಮುಂದೆ ಈಗ ನೂತನ ಮುಖ್ಯಮಂತ್ರಿಗಳ ಆಯ್ಕೆ ಮತ್ತೊಂದು ಸವಾಲಾಗಿ ನಿಂತಿದೆ.

ಮಧ್ಯಪ್ರದೇಶದಲ್ಲಿ ಅಧಿಕಾರ ಉಳಿಸಿಕೊಂಡಿರುವ ಬಿಜೆಪಿ, ಛತ್ತೀಸಗಢ ಮತ್ತು ರಾಜಸ್ಥಾನದಲ್ಲಿ ಕಾಂಗ್ರೆಸ್‌ನ ಆಡಳಿತವನ್ನು ಕೊನೆಗೊಳಿಸಿ ಅಧಿಕಾರದ ಚುಕ್ಕಾಣಿ ಹಿಡಿಯುತ್ತಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವಕ್ಕೆ ಜನರು ಬೆಂಬಲಿಸಲಿದ್ದಾರೆ ಎಂಬ ಬಲವಾದ ನಂಬಿಕೆಯಿಂದ ಬಿಜೆಪಿ ಕೇಂದ್ರ ನಾಯಕರು, ಚುನಾವಣೆಗೂ ಮುನ್ನ ಈ ಮೂರು ರಾಜ್ಯಗಳಲ್ಲಿ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸಿರಲಿಲ್ಲ. ಈಗ, ಈ ಮೂರು ರಾಜ್ಯಗಳಲ್ಲಿ ಪಕ್ಷಕ್ಕೆ ಸಿಕ್ಕಿರುವ ಗೆಲುವು ಮುಖ್ಯಮಂತ್ರಿ ಯಾರಾಗಬೇಕು ಎಂಬುದನ್ನು ನಿರ್ಧರಿಸುವಲ್ಲಿ ಕೇಂದ್ರ ನಾಯಕತ್ವಕ್ಕೆ ಮುಕ್ತ ಅವಕಾಶ ನೀಡಲಿದೆ’ ಎಂದು ಬಿಜೆಪಿಯ ಹಿರಿಯ ನಾಯಕರೊಬ್ಬರು ಹೇಳಿದರು.

ಪಕ್ಷವು ಮಧ್ಯಪ್ರದೇಶದಲ್ಲಿ ಪರ್ಯಾಯ ನಾಯಕತ್ವದ ಹುಡುಕಾಟದಲ್ಲಿತ್ತು. ಹಾಲಿ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್ ಅವರು ಆಡಳಿತ ವಿರೋಧಿ ಅಲೆ ನಡೆವೆಯೂ ಪ್ರಚಂಡ ಬಹುಮತದೊಂದಿಗೆ ಪಕ್ಷವನ್ನು ಗೆಲುವಿನ ದಡಕ್ಕೆ ಸೇರಿಸಿ, ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ.

ಚೌಹಾಣ್‌ ಅವರು, ಬಿಜೆಪಿಯ ಕೇಂದ್ರ ನಾಯಕರು ಮಧ್ಯಪ್ರದೇಶದಲ್ಲಿ ಪರ್ಯಾಯ ನಾಯಕತ್ವದ ಕುರಿತು ಮರುಚಿಂತನೆ ಮಾಡುವಂತೆ ಮಾಡಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.

ಕೇಂದ್ರ ಸಚಿವರಾದ ನರೇಂದ್ರ ಸಿಂಗ್‌ ತೋಮರ್‌ ಹಾಗೂ ಪ್ರಹ್ಲಾದ್‌ ಪಟೇಲ್‌ ಸೇರಿದಂತೆ ಕೆಲ ಸಂಸದರನ್ನು ಕಣಕ್ಕಿಸಲಾಗಿತ್ತು. ಕೇಂದ್ರ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಸ್ಪರ್ಧಿಸಿರಲಿಲ್ಲ. ಆದರೂ, ಸಿಂಧಿಯಾ ಮುಖ್ಯಮಂತ್ರಿಯಾಗುವರು ಎಂಬ ವದಂತಿಗಳು ಕೇಳಿಬರುತ್ತಿವೆ. 

ಚೌಹಾಣ್‌ ಅವರು ಒಬಿಸಿ ಸಮುದಾಯಕ್ಕೆ ಸೇರಿದವರು. ಚುನಾವಣೆಗೂ ಮುನ್ನ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಣೆ ಮಾಡಿರದಿದ್ದರೂ, ಮಧ್ಯಪ್ರದೇಶದಲ್ಲಿ ಸಿಕ್ಕ ಭಾರಿ ಗೆಲುವು ಚೌಹಾಣ್‌ ಅವರನ್ನು ಕಡೆಗಣಿಸುವ ಸ್ಥಿತಿಯಲ್ಲಿ ಬಿಜೆಪಿ ಇಲ್ಲ. 

ರಾಜಸ್ಥಾನದಲ್ಲಿ ಬಿಜೆಪಿಯು ಹೊಸ ಮುಖಕ್ಕೆ ಮಣೆ ಹಾಕುವ ಸಾಧ್ಯತೆಯೇ ಹೆಚ್ಚು ಎಂಬುದು ರಾಜಕೀಯ ತಜ್ಞರ ವಿಶ್ಲೇಷಣೆ. ಎರಡು ಬಾರಿ ಮುಖ್ಯಮಂತ್ರಿಯಾಗಿದ್ದ ವಸುಂಧರ ರಾಜೇ ಅವರು ಮುಖ್ಯಮಂತ್ರಿ ಸ್ಥಾನದ ಪ್ರಬಲ ಆಕಾಂಕ್ಷಿ. ಅವರಿಗೆ ತಮ್ಮದೇ ಆದ ವರ್ಚಸ್ಸು ಹಾಗೂ ಜೊತೆಗೆ ಗಟ್ಟಿ ನೆಲೆ ಹೊಂದಿರುವುದು ಗಮನಾರ್ಹ.

ಮತ್ತೊಂದೆಡೆ, ಕೇಂದ್ರ ಸಚಿವರಾದ ಗಜೇಂದ್ರ ಸಿಂಗ್‌ ಶೆಖಾವತ್, ಅರ್ಜುನ್‌ ಸಿಂಗ್‌ ಮೇಘವಾಲ್‌, ಪಕ್ಷದ ರಾಜ್ಯದ ಘಟಕದ ಅಧ್ಯಕ್ಷ ಸಿ.ಪಿ.ಜೋಶಿ ಹಾಗೂ ದಿಯಾ ಕುಮಾರಿ ಅವರು ಕೂಡ ರಾಜ್ಯದ ತುಂಬ ಸುತ್ತಾಡಿ ಪಕ್ಷದ ಗೆಲುವಿಗೆ ಬೆವರು ಹರಿಸಿದ್ದಾರೆ. ಹೀಗಾಗಿ, ಮುಖ್ಯಮಂತ್ರಿ ಸ್ಥಾನಕ್ಕೆ ಈ ನಾಯಕರ ಹೆಸರುಗಳೂ ಕೇಳಿ ಬರುತ್ತಿವೆ.

ಮುಖ್ಯಮಂತ್ರಿ ಗದ್ದುಗೆ ಏರುವ ಸಂಭಾವ್ಯರ ಚರ್ಚೆ ವೇಳೆ ಮಹಂತ ಬಾಲಕನಾಥ ಅವರ ಹೆಸರು ಸಹ ಪ್ರಬಲವಾಗಿ ಕೇಳಿ ಬರುತ್ತಿದೆ. ಬಾಲಕನಾಥ ಅವರು ಯಾದವ ಸಮುದಾಯದಕ್ಕೆ ಸೇರಿದ್ದರೆ, ಮೇಘವಾಲ್ ಪರಿಶಿಷ್ಟ ಜಾತಿಗೆ ಸೇರಿದವರು. ಹಿಂದುತ್ವ ಮುಖಕ್ಕೆ ಮಣೆ ಹಾಕಿದಲ್ಲಿ ಬಾಲಕನಾಥ ಹಾಗೂ ಮೇಘವಾಲ್ ಅವರ ಪರ ಒಲವು ಹೆಚ್ಚಾದರೂ ಅಚ್ಚರಿ ಇಲ್ಲ.

ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರ ಹೆಸರೂ ಕೇಳಿಬರುತ್ತಿದೆ ಎಂದು ಮೂಲಗಳು ಹೇಳಿವೆ. ಮೂರು ಬಾರಿ ಶಾಸಕರಾಗಿದ್ದ ಬಿರ್ಲಾ ಅವರಿಗೆ ತಮ್ಮ ಮೇಲೆ ಹೈಕಮಾಂಡ್‌ ಹೊಂದಿರುವ ನಂಬಿಕೆಯೂ ಅನುಕೂಲಕರವಾಗಲಿದೆ ಎಂದು ಇವೇ ಮೂಲಗಳು ಹೇಳುತ್ತವೆ.

ಛತ್ತೀಸಗಢದಲ್ಲಿ ಮಾಜಿ ಮುಖ್ಯಮಂತ್ರಿ ರಮಣ್‌ ಸಿಂಗ್, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಅರುಣಕುಮಾರ್‌ ಸಾವೊ, ವಿರೋಧ ಪಕ್ಷದ ನಾಯಕ ಧರಮ್‌ಲಾಲ್ ಕೌಶಿಕ್‌ ಹಾಗೂ ಮಾಜಿ ಐಎಎಸ್‌ ಅಧಿಕಾರಿ ಒ.ಪಿ.ಚೌಧರಿ ಅವರ ಹೆಸರುಗಳು ಮುಂಚೂಣಿಯಲ್ಲಿವೆ. ಸಿಂಗ್‌ ಅವರನ್ನು ಹೊರತುಪಡಿಸಿದರೆ ಉಳಿದ ನಾಯಕರು ಒಬಿಸಿಗೆ ಸೇರಿದವರು. 

ಲೋಕಸಭಾ ಚುನಾವಣೆಗೆ ಇನ್ನೂ ನಾಲ್ಕು ತಿಂಗಳಷ್ಟೆ ಬಾಕಿ ಇರುವ ಈ ಹೊತ್ತಿನಲ್ಲಿ, ಸಾಮಾಜಿಕ ನೆಲೆಗಟ್ಟಿನಲ್ಲಿ ಹೆಚ್ಚು ಲಾಭ ತರಬಲ್ಲಂತಹ ವ್ಯಕ್ತಿಗಳನ್ನೇ ಬಿಜೆಪಿಯು ಮೂರು ರಾಜ್ಯಗಳಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಆಯ್ಕೆ ಮಾಡುವ ಸಾಧ್ಯತೆಯೇ ಎಂದು ವಿಶ್ಲೇಷಿಸಲಾಗುತ್ತಿದೆ. 

ರೆಡ್ಡಿ ಮುಂಚೂಣಿಯಲ್ಲಿ

ತೆಲಂಗಾಣದಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಕಾಂಗ್ರೆಸ್‌ ಪಕ್ಷ ಯಾರನ್ನು ಮುಖ್ಯಮಂತ್ರಿ ಗಾದಿಯಲ್ಲಿ ಕೂರಿಸಲಿದೆ ಎಂಬ ಕುತೂಹಲವೂ ಇದೆ. ಎ.ರೇವಂತ ರೆಡ್ಡಿ ಅವರ ಹೆಸರು ಮುಂಚೂಣಿಯಲ್ಲಿದೆ. ಪಕ್ಷದ ರಾಜ್ಯ ಘಟಕದ ಮಾಜಿ ಅಧ್ಯಕ್ಷ ಉತ್ತಮಕುಮಾರ್ ರೆಡ್ಡಿ ಅವರೂ ಪ್ರಬಲ ಆಕಾಂಕ್ಷಿಯಾಗಿದ್ದಾರೆ.

ಮತ್ತೊಬ್ಬ ಪ್ರಬಲ ನಾಯಕ ಭಟ್ಟಿ ವಿಕ್ರಮಾರ್ಕ ಅವರನ್ನು ಉಪ ಮುಖ್ಯಮಂತ್ರಿಯನ್ನಾಗಿ ಮಾಡಬಹುದು ಎಂಬ ಮಾತುಗಳು ಕೇಳಿ ಬರುತ್ತಿವೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT