ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಬಿಐ, ಮಹಾರಾಷ್ಟ್ರ ಸರ್ಕಾರಕ್ಕೆ ಬಾಂಬೆ ಹೈಕೋರ್ಟ್ ಸಮನ್ಸ್‌

ತನಿಖೆ ಬಗ್ಗೆ ಹೈಕೋರ್ಟ್‌ ಅತೃಪ್ತಿ
Last Updated 28 ಜೂನ್ 2018, 17:59 IST
ಅಕ್ಷರ ಗಾತ್ರ

ಮುಂಬೈ: ವಿಚಾರವಾದಿಗಳಾದ ನರೇಂದ್ರ ದಾಭೋಲ್ಕರ್‌ ಮತ್ತು ಗೋವಿಂದ ಪಾನ್ಸರೆ ಹತ್ಯೆ ಪ್ರಕರಣಗಳ ತನಿಖೆ ನಡೆಸುತ್ತಿರುವ ಅಧಿಕಾರಿಗಳನ್ನು ಗುರುವಾರ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿರುವ ಬಾಂಬೆ ಹೈಕೋರ್ಟ್‌, ‘ತನಿಖೆ ತೃಪ್ತಿದಾಯಕವಾಗಿಲ್ಲ’ ಹಾಗೂ ‘ಪ್ರಾಮಾಣಿಕವಾಗಿ ನಡೆಸಿಲ್ಲ’ ಎಂದು ಅಭಿಪ್ರಾಯಪಟ್ಟಿದೆ.

ನ್ಯಾಯಮೂರ್ತಿ ಎಸ್‌.ಸಿ.ಧರಮಾಧಿಕಾರಿ ಹಾಗೂ ಭಾರತಿ ಡಾಂಗ್ರೆ ಅವರನ್ನು ಒಳಗೊಂಡ ಪೀಠ ಈ ಸಂಬಂಧ ಸಿಬಿಐ ಹಾಗೂ ಮಹಾರಾಷ್ಟ್ರ ಸರ್ಕಾರಕ್ಕೆ ಸಮನ್ಸ್‌ ಜಾರಿ ಮಾಡಿದೆ. ಜುಲೈ 12ರಂದು ಕೋರ್ಟ್‌ಗೆ ಹಾಜರಾಗುವಂತೆ ಸಿಬಿಐನ ಜಂಟಿ ನಿರ್ದೇಶಕ ಹಾಗೂ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ನಿರ್ದೇಶನ ನೀಡಿದೆ.

‘ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವು ವ್ಯಕ್ತಿಗಳು, ಸಂಸ್ಥೆಗಳ ಮೇಲೆ ಕಣ್ಣಿಟ್ಟಿರುವುದಾಗಿ ಸಿಬಿಐ ಮತ್ತು ಸಿಐಡಿ ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ, ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆಗೆ ಸಂಬಂಧಿಸಿದಂತೆ ಆರೋಪಿಯೊಬ್ಬನನ್ನು ಬಂಧಿಸಲು ಕರ್ನಾಟಕದ ತನಿಖಾಧಿಕಾರಿಗಳಿಗೆ ಸಾಧ್ಯವಾಗುವುದಾದರೆ ಮಹಾರಾಷ್ಟ್ರದ ಅಧಿಕಾರಿಗಳಿಗೆ ಏಕೆ ಆಗುತ್ತಿಲ್ಲ’ ಎಂದು ಪೀಠ ಪ್ರಶ್ನಿಸಿದೆ.

‘ತನಿಖೆಗೆ ಸಂಬಂಧಿಸಿದಂತೆ ಉಭಯ ಸಂಸ್ಥೆಗಳ ನಡುವೆ ಸಮನ್ವಯದ ಕೊರತೆ ಇದೆಯೇ? ಅಥವಾ ಮೊಬೈಲ್‌ ಸಂಭಾಷಣೆ ಪರಿಶೀಲನೆಗೆ ಮಾತ್ರ ತನಿಖೆಯನ್ನು ಸೀಮಿತಗೊಳಿಸಲಾಗಿದೆ’ ಎಂದೂ ಪೀಠ ಪ್ರಶ್ನಿಸಿದೆ.

‘ತನಿಖೆ ನಡೆಸುವಲ್ಲಿ ಕರ್ನಾಟಕದ ಅಧಿಕಾರಿಗಳಿರುವ ಗಂಭೀರತೆ, ಪ್ರಾಮಾಣಿಕತೆಯನ್ನು ಮಹಾರಾಷ್ಟ್ರದ ಸಿಐಡಿ ಮತ್ತು ಸಿಬಿಐ ಅಧಿಕಾರಿಗಳು ಮೈಗೂಡಿಸಿಕೊಳ್ಳುವ ಅಗತ್ಯ ಇದೆ’ ಎಂದು ಪೀಠ ಅಭಿಪ್ರಾಯಪಟ್ಟಿದೆ.

ತನಿಖೆಯಲ್ಲಿ ವಿಳಂಬವಾಗುತ್ತಿದೆ ಎಂದು ದೂರಿರುವ ದಾಭೋಲ್ಕರ್‌ ಪುತ್ರಿ ಮುಕ್ತಾ, ‘ಇಬ್ಬರ (ದಾಭೋಲ್ಕರ್‌ ಮತ್ತು ಪಾನ್ಸರೆ) ಹತ್ಯೆ ಕುರಿತಂತೆ ತನಿಖೆ ನಡೆಸಲು ಪ್ರಾಮಾಣಿಕ ಅಧಿಕಾರಿಗಳನ್ನು ಒಳಗೊಂಡ ತಂಡವನ್ನು ನಿಯೋಜಿಸಬೇಕು’ ಎಂದು ಕೋರಿ ಕೋರ್ಟ್‌ಗೆ ಗುರುವಾರ ಅಫಿಡವಿಟ್‌ ಸಲ್ಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT