ಭಾನುವಾರ, 14 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

Pune Porsche Crash: ಆರೋಪಿ ಬಾಲಕನ ಪೋಷಕರ ನ್ಯಾಯಾಂಗ ಬಂಧನ ವಿಸ್ತರಣೆ

Published 14 ಜೂನ್ 2024, 12:56 IST
Last Updated 14 ಜೂನ್ 2024, 12:56 IST
ಅಕ್ಷರ ಗಾತ್ರ

ಪುಣೆ: ಪೋಶೆ ಕಾರು ಅಪಘಾತ ಪ್ರಕರಣದಲ್ಲಿ ಭಾಗಿಯಾಗಿದ್ದ 17 ವರ್ಷದ ಬಾಲಕನ ಪೋಷಕರು ಹಾಗೂ ಮತ್ತೊಬ್ಬ ಆರೋಪಿಯ ನ್ಯಾಯಾಂಗ ಬಂಧನ ಅವಧಿಯನ್ನು ಮತ್ತೆ 14 ದಿನಗಳ ವರೆಗೆ ವಿಸ್ತರಿಸಲಾಗಿದೆ.

ಮೇ 19 ರಂದು ಪುಣೆಯ ಕಲ್ಯಾಣಿ ನಗರದಲ್ಲಿ ನಡೆದ ಅಪಘಾತದಲ್ಲಿ ಇಬ್ಬರು ಟೆಕ್ಕಿಗಳು ಮೃತಪಟ್ಟಿದ್ದರು. ಕಾರು ಚಾಲನೆ ಮಾಡುತ್ತಿದ್ದ ಬಾಲಕ ಪಾನಮತ್ತನಾಗಿದ್ದ ಎನ್ನಲಾಗಿದೆ. ಸಾಕ್ಷ್ಯ ನಾಶಕ್ಕೆ ಯತ್ನಿಸಿದ ಆರೋಪದ ಮೇಲೆ ಮೂವರನ್ನು ಬಂಧಿಸಲಾಗಿದೆ.

ಸಾಕ್ಷ್ಯ ನಾಶ ಹಾಗೂ ಅಪರಾಧದ ಹೊಣೆ ಹೊರುವಂತೆ ಕುಟುಂಬದ ಚಾಲಕನನ್ನು ಅಪಹರಿಸಿ, ಒತ್ತಡ ಹೇರಿದ ಆರೋಪದ ಮೇಲೆ ಬಾಲಕನ ತಂದೆ ವಿಶಾಲ್ ಅಗರ್ವಾಲ್ ಅವರನ್ನು ಮೇ 31ರಂದು ಬಂಧಿಸಲಾಗಿದೆ.

ಬಾಲಕನನ್ನು ರಕ್ಷಿಸುವ ಉದ್ದೇಶದಿಂದ ಆತನ ರಕ್ತದ ಮಾದರಿಯ ಬದಲು ತನ್ನ ರಕ್ತದ ಮಾದರಿಯನ್ನು ಇರಿಸಿದ ಆರೋಪದಲ್ಲಿ, ಬಾಲಕನ ತಾಯಿ ಶಿವಾನಿ ಅಗರ್ವಾಲ್ ಅವರನ್ನು ಜೂನ್ 1 ರಂದು ಬಂಧಿಸಲಾಗಿದೆ. ಈ ಕೃತ್ಯಕ್ಕೆ ನೆರವಾದ 'ಮಧ್ಯವರ್ತಿ' ಅಷ್ಪಕ್‌ ಮಕಂದರ್‌ ಎಂಬಾತನನ್ನೂ ಸೆರೆ ಹಿಡಿಯಲಾಗಿದೆ.

ರಕ್ತದ ಮಾದರಿ ಬದಲಾವಣೆಗೆ ಸಂಬಂಧಿಸಿದಂತೆ, ಸಸ್ಸೂನ್‌ ಆಸ್ಪತ್ರೆಯ ವಿಧಿವಿಜ್ಞಾನ ಔಷಧಗಳ ವಿಭಾಗದ ಮುಖ್ಯಸ್ಥರಾಗಿದ್ದ ಡಾ. ಅಜಯ್ ತವಾರೆ, ವೈದ್ಯಕೀಯ ಅಧಿಕಾರಿ ಡಾ. ಶ್ರೀಹರಿ ಹಲ್ನೋರ್, ನೌಕರ ಅತುಲ್ ಘಟಕಾಂಬ್ಳೆ ಹಾಗೂ ಇನ್ನೊಬ್ಬ ಮಧ್ಯವರ್ತಿ ಅಮರ್‌ ಗಾಯಕವಾಡ್‌ ಎಂಬುವವರನ್ನೂ ಬಂಧಿಸಲಾಗಿದೆ.

17 ವರ್ಷದ ಬಾಲಕನ ಗೃಹಬಂಧನ ಅವಧಿಯನ್ನು ಬಾಲ ನ್ಯಾಯ ಮಂಡಳಿಯು ಜೂನ್ 25ರವರೆಗೆ ವಿಸ್ತರಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT