ಸೋಮವಾರ, 7 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವಿನೇಶ್ ‘ದಬಂಗ್ ಲೇಡಿ’; ಆಕೆಯನ್ನೇ ಸಿ.ಎಂ ಅಭ್ಯರ್ಥಿಯನ್ನಾಗಿಸಿ: ಬ್ರಿಜ್‌ಭೂಷಣ್‌

Published : 9 ಸೆಪ್ಟೆಂಬರ್ 2024, 15:38 IST
Last Updated : 9 ಸೆಪ್ಟೆಂಬರ್ 2024, 15:38 IST
ಫಾಲೋ ಮಾಡಿ
Comments

ಲಖನೌ: ಕಾಂಗ್ರೆಸ್‌ ಅಭ್ಯರ್ಥಿ, ಮಾಜಿ ಕುಸ್ತಿಪಟು ವಿನೇಶ್‌ ಫೋಗಾಟ್‌ ಹಾಗೂ ಇತರ ಕುಸ್ತಿಪಟುಗಳ ವಿರುದ್ಧ ಯಾವುದೇ ಹೇಳಿಕೆ ನೀಡದಂತೆ ಭಾರತೀಯ ಕುಸ್ತಿ ಫೆಡರೇಷನ್‌ನ ಮಾಜಿ ಅಧ್ಯಕ್ಷ, ಬಿಜೆಪಿ ನಾಯಕ ಬ್ರಿಜ್‌ಭೂಷಣ್‌ ಶರಣ್‌ ಸಿಂಗ್‌ ಅವರಿಗೆ ಹೈಕಮಾಂಡ್‌ ಖಡಕ್‌ ಸೂಚನೆ ನೀಡಿದೆ. ಆದರೂ ಸೋಮವಾರ ಬ್ರಿಜ್‌ಭೂಷಣ್‌ ಅವರು ವಿನೇಶ್‌ ಅವರನ್ನು ‘ದಬಂಗ್‌ ಲೇಡಿ’ ಎಂದು ವ್ಯಂಗ್ಯವಾಡಿ, ಹೊಸ ಹೇಳಿಕೆ ನೀಡಿದ್ದಾರೆ.

ಹರಿಯಾಣ ವಿಧಾನಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಹೈಕಮಾಂಡ್‌ ಈ ಸೂಚನೆ ನೀಡಿತ್ತು.

‘ಅವರಿಗೆ (ಕಾಂಗ್ರೆಸ್‌) ಇಂಥ ದಬಂಗ್‌ ಲೇಡಿ (ಸರ್ವಾಧಿಕಾರಿ, ಅಧಿಕಾರಯುತ ವ್ಯಕ್ತಿತ್ವ) ಎಲ್ಲಿಯೂ ಸಿಗುವುದಿಲ್ಲ. ವ್ಯವಸ್ಥೆಯನ್ನು ತನ್ನ ಕೈವಶ ಮಾಡಿಕೊಳ್ಳುವ ಶಕ್ತಿ ಆಕೆಗಿದೆ... ಸೋತ ಕುಸ್ತಿ ಪಂದ್ಯವನ್ನೂ ಗೆಲ್ಲುವ ಶಕ್ತಿ ಇದೆ... ಫೆಡರೇಷನ್‌ನ ಪದಾಧಿಕಾರಿಗಳನ್ನು ಫೆಡರೇಷನ್‌ನಿಂದಲೇ ಓಡಿಸಲು ಆಕೆಗೆ ಸಾಧ್ಯವಿದೆ... ಆಯ್ಕೆ ಟ್ರಯಲ್ಸ್‌ ಅನ್ನು ನಡೆಯದಂತೆ ಈಕೆ ನಿಲ್ಲಿಸಬಲ್ಲಳು... ನೋಡಿ ನಿಮಗೆ (ವರದಿಗಾರರಿಗೆ) ಇಂಥ ದಬಂಗ್‌ ಲೇಡಿ ಎಲ್ಲಾದರೂ ಸಿಗುತ್ತಾರೆಯೇ?’ ಎಂದು ಉತ್ತರ ಪ್ರದೇಶದ ಗೊಂಡಾದಲ್ಲಿ ಬ್ರಿಜ್‌ಭೂಷಣ್‌ ಮಾತನಾಡಿದರು.

‘ಈಕೆಯನ್ನು ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಕಾಂಗ್ರೆಸ್‌ ಯಾಕೆ ಘೋಷಿಸುತ್ತಿಲ್ಲ?... ಆಕೆಯನ್ನೇ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿಸಿ ಕಾಂಗ್ರೆಸ್‌ ಚುನಾವಣೆ ಎದುರಿಸಬೇಕು. ಕಾಂಗ್ರೆಸ್‌ ಅನ್ನೇ ಸೇರಬೇಕು ಎಂದಿದ್ದರೆ ಇಷ್ಟೆಲ್ಲಾ ನಾಟಕ ಯಾಕೆ ಆಡಬೇಕಿತ್ತು’ ಎಂದರು.

ಬ್ರಿಜ್‌ಭೂಷಣ್ ಅವರು ವಿನೇಶ್‌ ಅವರನ್ನು ದ್ರೌಪದಿಗೆ ಹೋಲಿಸಿ ಇತ್ತೀಚೆಗೆ ಹೇಳಿಕೆ ನೀಡಿದ್ದರು. ‘ಪಾಂಡವರು ದ್ರೌಪದಿಯನ್ನು ಪಣಕ್ಕಿಟ್ಟಂತೆಯೇ ಹೂಡಾ ಕುಟುಂಬವು ವಿನೇಶ್‌ ಅವರನ್ನು ಪಣಕ್ಕಿಟ್ಟು ರಾಜಕೀಯವಾಗಿ ಬಳಸಿಕೊಂಡಿದೆ. ಪಾಂಡವರ ಈ ನಡೆಯನ್ನು ಜನರು ಹೇಗೆ ಕ್ಷಮಿಸುವುದಿಲ್ಲವೋ ಹೂಡಾ ಅವರ ಕುಟುಂಬವನ್ನೂ ಜನರು ಕ್ಷಮಿಸಲಾರರು’ ಎಂದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT