ಜಮ್ಮು: ಇಲ್ಲಿನ ಅಂತರರಾಷ್ಟ್ರೀಯ ಗಡಿಯಲ್ಲಿ ಉಗ್ರರ ಒಳನುಸುಳುವಿಕೆ ಪ್ರಯತ್ನವನ್ನು ವಿಫಲಗೊಳಿಸಿರುವ ಗಡಿ ಭದ್ರತಾ ಪಡೆಯ (ಬಿಎಸ್‌ಎಫ್) ಅಧಿಕಾರಿಗಳು ಅಪಾರ ಪ್ರಮಾಣದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಶನಿವಾರ ತಡರಾತ್ರಿ ಆರ್.ಎಸ್. ಪುರ ಗಡಿ ಪ್ರದೇಶದಲ್ಲಿ ಉಗ್ರರ ಒಳನುಸುಳುವಿಕೆ ಪ್ರಯತ್ನವನ್ನು ಯೋಧರು ವಿಫಲಗೊಳಿಸಿದ್ದಾರೆ ಎಂದು ಬಿಎಸ್ಎಫ್ ವಕ್ತಾರರು ತಿಳಿಸಿದ್ದಾರೆ.
ಇಂದು ಬೆಳಗ್ಗೆ ಪ್ರದೇಶದಲ್ಲಿ ಶೋಧ ನಡೆಸಿದಾಗ ಎಕೆ–47 ಬಂದೂಕುಗಳು (ಅಸಾಲ್ಟ್ ರೈಫಲ್ಸ್), ನಾಲ್ಕು ಮ್ಯಾಗಜೀನ್‌ಗಳು, ಮದ್ದುಗುಂಡುಗಳು, ಎರಡು ಪಿಸ್ತೂಲ್‌ಗಳು ಸೇರಿದಂತೆ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳು ಪತ್ತೆಯಾಗಿದ್ದು, ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸ್ಥಳದಲ್ಲಿ ಪಾಕಿಸ್ತಾನ ನಿರ್ಮಿತ ಬ್ಯಾಗ್, ಸಿಗರೇಟ್ ಪ್ಯಾಕೆಟ್ ಮತ್ತು ಇತರ ಕೆಲವು ವಸ್ತುಗಳು ಪತ್ತೆಯಾಗಿವೆ ಎಂದು ಅವರು ವಿವರಿಸಿದ್ದಾರೆ.
ಗಡಿಯೊಳಗೆ ಒಳನುಸುಳಲು ಯತ್ನಿಸುತ್ತಿದ್ದ ಉಗ್ರನ ಚಲನವಲನಗಳನ್ನು ಗಮನಿಸಿದ ಯೋಧರು ಮೆಷಿನ್ ಗನ್‌ನಿಂದ ಕೆಲವು ಸುತ್ತು ಗುಂಡು ಹಾರಿಸಿದ್ದಾರೆ. ಆದರೆ, ಆತ ಶಸ್ತ್ರಾಸ್ತ್ರಗಳನ್ನು ಬಿಟ್ಟು ಪರಾರಿಯಾಗಿದ್ದಾನೆ ಎಂದು ಮೂಲಗಳು ತಿಳಿಸಿವೆ.