ಶುಕ್ರವಾರ, 29 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪಿಎಂ–ಪ್ರಣಾಮ್’ಗೆ ಕೇಂದ್ರ ಸಂಪುಟ ಒಪ್ಪಿಗೆ

ಪರ್ಯಾಯ ಗೊಬ್ಬರಗಳ ಬಳಕೆ ಉತ್ತೇಜನ ಉದ್ದೇಶ
Published 28 ಜೂನ್ 2023, 17:07 IST
Last Updated 28 ಜೂನ್ 2023, 17:07 IST
ಅಕ್ಷರ ಗಾತ್ರ

ನವದೆಹಲಿ: ರಾಸಾಯನಿಕ ಗೊಬ್ಬರಗಳ ಉಪಯೋಗ ಕಡಿಮೆ ಮಾಡಿ, ಪರ್ಯಾಯ ರಸಗೊಬ್ಬರಗಳ ಬಳಕೆ ಹೆಚ್ಚಿಸುವ ನಿಟ್ಟಿನಲ್ಲಿ ರಾಜ್ಯಗಳನ್ನು ಉತ್ತೇಜಿಸುವುದಕ್ಕಾಗಿ ‘ಪಿಎಂ–ಪ್ರಣಾಮ್’ ಎಂಬ ನೂತನ ಯೋಜನೆಗೆ ಕೇಂದ್ರ ಸಚಿವ ಸಂಪುಟ ಬುಧವಾರ ಒಪ್ಪಿಗೆ ನೀಡಿದೆ.

ಅಲ್ಲದೇ, ಪ್ರತಿ ಕ್ವಿಂಟಲ್‌ ಕಬ್ಬಿಗೆ ನೀಡುವ ಎಫ್‌ಆರ್‌ಪಿಯನ್ನು ₹ 10ರಷ್ಟು ಹೆಚ್ಚಿಸುವುದಕ್ಕೆ ಆರ್ಥಿಕ ವ್ಯವಹಾರಗಳ ಕುರಿತ ಸಂಪುಟ ಸಮಿತಿಯು ಅನುಮೋದನೆ ನೀಡಿದೆ.

ಕೇಂದ್ರ ರಸಗೊಬ್ಬರ ಸಚಿವ ಮನ್ಸುಖ್‌ ಮಾಂಡವಿಯಾ, ಮಾಹಿತಿ ಮತ್ತು ಪ್ರಸಾರ ಸಚಿವ ಅನುರಾಗ್‌ ಠಾಕೂರ್‌ ಸಭೆ ಬಳಿಕ ಸುದ್ದಿಗಾರರಿಗೆ ಮಾಹಿತಿ ನೀಡಿದರು.

‘ಭೂಮಿಯಲ್ಲಿನ ಪೋಷಕಾಂಶಗಳ ಪ್ರಮಾಣ ಹೆಚ್ಚಿಸುವುದು ಹಾಗೂ ಈ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಸಂಕ್ಷಿಪ್ತವಾಗಿ ‘ಪಿಎಂ–ಪ್ರಣಾಮ್’ (ಪಿಎಂ ಪ್ರೊಗ್ರಾಂ ಫಾರ್ ರಿಸ್ಟೋರೇಷನ್, ಅವೇರ್‌ನೆಸ್, ಜನರೇಷನ್, ನೌರಿಷ್‌ಮೆಂಟ್‌ ಅಂಡ್ ಅಮಿಲಿಯೋರೇಷನ್ ಆಫ್‌ ಮದರ್‌ ಅರ್ತ್‌) ಎಂದು ಕರೆಯಲಾಗುತ್ತದೆ.  ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫೆಬ್ರುವರಿ 1ರಂದು ಬಜೆಟ್‌ ಮಂಡನೆ ವೇಳೆ ಈ ಯೋಜನೆಯನ್ನು ಘೋಷಿಸಿದ್ದರು.

‘ಪರ್ಯಾಯ ಗೊಬ್ಬರಗಳನ್ನು ಬಳಕೆಯನ್ನು ಉತ್ತೇಜಿಸುವ ಹಾಗೂ ರಾಸಾಯನಿಕ ಗೊಬ್ಬರದ ಬಳಕೆಯನ್ನು ಕಡಿಮೆ ಮಾಡುವ ರಾಜ್ಯಗಳಿಗೆ ಕೇಂದ್ರ ಸರ್ಕಾರ ಪ್ರೋತ್ಸಾಹ ನೀಡುವುದು’ ಎಂದು ಸಚಿವ ಮಾಂಡವಿಯಾ ಹೇಳಿದರು.

‘ರಾಜ್ಯವೊಂದು 10 ಲಕ್ಷ ಟನ್‌ ರಸಗೊಬ್ಬರ ಬಳಸುತ್ತದೆ ಎಂದು ಭಾವಿಸೋಣ. ಈ ಪ್ರಮಾಣವನ್ನು 3 ಲಕ್ಷ ಟನ್‌ಗೆ ಇಳಿಸಿದಲ್ಲಿ  ಸಬ್ಸಿಡಿಯಲ್ಲಿ ₹ 3 ಸಾವಿರ ಕೋಟಿ ರೂಪಾಯಿ ಉಳಿತಾಯ ಮಾಡಿದಂತಾಗುತ್ತದೆ. ಈ ಹಣದ ಪೈಕಿ ಕೇಂದ್ರ ಸರ್ಕಾರವು ಶೇ 50ರಷ್ಟು ಅಂದರೆ, ₹ 1,500 ಕೋಟಿಯನ್ನು ರಾಜ್ಯಗಳಿಗೆ ನೀಡುತ್ತದೆ. ಈ ಹಣವನ್ನು ಪರ್ಯಾಯ ಗೊಬ್ಬರಗಳ ಬಳಕೆಯನ್ನು ಉತ್ತೇಜಿಸುವುದಕ್ಕಾಗಿ ಹಾಗೂ ಇತರ ಅಭಿವೃದ್ಧಿ ಕಾರ್ಯಗಳಿಗೆ ರಾಜ್ಯಗಳು ಬಳಕೆ ಮಾಡಿಕೊಳ್ಳಬೇಕು’ ಎಂದು ಮಾಂಡವಿಯಾ ವಿವರಿಸಿದರು.

ಹೆಚ್ಚಳ: ಬರುವ ಅಕ್ಟೋಬರ್‌ನಿಂದ ಆರಂಭವಾಗುವ ಹಂಗಾಮಿಗೆ ಅನ್ವಯಿಸುವಂತೆ, ಕಬ್ಬಿಗೆ ನೀಡುವ ಎಫ್‌ಆರ್‌ಪಿಯಲ್ಲಿ ₹ 10 ಹೆಚ್ಚಳಕ್ಕೆ ಅನುಮೋದನೆ ನೀಡಲಾಗಿದೆ. ಇದರಿಂದಾಗಿ ಪ್ರತಿ ಕ್ವಿಂಟಲ್‌ಗೆ ನೀಡುವ ಎಫ್‌ಆರ್‌ಪಿ ₹ 315 ಆಗಲಿದೆ ಎಂದು ಸಚಿವ ಅನುರಾಗ್‌ ಠಾಕೂರ್‌ ವಿವರಿಸಿದರು.

ಪ್ರಧಾನಿ ನರೇಂದ ಮೋದಿ ನೇತೃತ್ವದ ಆರ್ಥಿಕ ವ್ಯವಹಾರಗಳ ಕುರಿತ ಸಂಪುಟ ಸಮಿತಿ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಠಾಕೂರ್‌ ಹೇಳಿದರು.

‘ಕಳೆದ ವರ್ಷ ಪ್ರತಿ ಕ್ವಿಂಟಲ್‌ ಕಬ್ಬಿಗೆ ₹ 305 ಎಫ್‌ಆರ್‌ಪಿ ನಿಗದಿ ಮಾಡಲಾಗಿತ್ತು. ಈಗ, ₹ 315ಕ್ಕೆ ಹೆಚ್ಚಿಸಲಾಗಿದೆ. ಕಳೆದ ಸಾಲಿಗೆ ಹೋಲಿಸಿದಲ್ಲಿ ಶೇ 3.28ರಷ್ಟು ಹೆಚ್ಚಳ ಮಾಡಿದಂತಾಗಿದೆ’ ಎಂದು ಹೇಳಿದರು.

ಮನ್ಸುಖ್ ಮಾಂಡವಿಯಾ
ಮನ್ಸುಖ್ ಮಾಂಡವಿಯಾ

ರಾಷ್ಟ್ರೀಯ ಸಂಶೋಧನಾ ಪ್ರತಿಷ್ಠಾನ

ಮಸೂದೆಗೆ ಅಸ್ತು ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಸಂಶೋಧನೆಗೆ ಪ್ರೋತ್ಸಾಹ ನೀಡುವ ಉದ್ದೇಶದ ‘ರಾಷ್ಟ್ರೀಯ ಸಂಶೋಧನಾ ಪ್ರತಿಷ್ಠಾನ ಮಸೂದೆ–2023’ಕ್ಕೆ ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದೆ. ಸಂಪುಟ ಸಭೆ ಬಳಿಕ ಈ ಕುರಿತು ಮಾಹಿತಿ ನೀಡಿದ ಸಚಿವ ಅನುರಾಗ್‌ ಠಾಕೂರ್‌ ‘ಬರುವ ಸಂಸತ್‌ ಅಧಿವೇಶನದಲ್ಲಿ ಈ ಮಸೂದೆಯನ್ನು ಮಂಡಿಸಲಾಗುವುದು. ಮಸೂದೆ ಅಂಗೀಕಾರ ದೊರೆತ ನಂತರ ವಿಜ್ಞಾನ ಮತ್ತು ಎಂಜಿನಿಯರಿಂಗ್‌ ಸಂಶೋಧನಾ ಮಂಡಳಿ ಕಾಯ್ದೆ2008 ರದ್ದಾಗುವುದು’ ಎಂದು  ಹೇಳಿದರು. ‘2027–28ರವರೆಗೆ ಸಂಶೋಧನೆಗಾಗಿ ಕೇಂದ್ರ ಸರ್ಕಾರ ₹ 50 ಸಾವಿರ ಕೋಟಿ ತೆಗೆದಿರಿಸಿದೆ. ಈ ಪೈಕಿ ಮುಂದಿನ ಐದು ವರ್ಷಗಳ ವರೆಗೆ ₹ 14 ಸಾವಿರ ಕೋಟಿಯನ್ನು ಸರ್ಕಾರವೇ ಒದಗಿಸುವುದು. ಉಳಿದ ಮೊತ್ತವನ್ನು ಸಾರ್ವಜನಿಕ ಉದ್ದಿಮೆಗಳು ಕೈಗಾರಿಕೆಗಳು ಪ್ರತಿಷ್ಠಾನಗಳು ಅಂತರರಾಷ್ಟ್ರೀಯ ಸಂಶೋಧನಾ ಸಂಘಟನೆಗಳಿಂದ ಸಂಗ್ರಹಿಸಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT