ಗುರುವಾರ, 13 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿ ಸರ್ಕಾರದಲ್ಲಿ ಸಂಪುಟ ದರ್ಜೆಗೆ ಪಟ್ಟು: ಕಾದುನೋಡಲು ಎನ್‌ಸಿಪಿ ತೀರ್ಮಾನ

Published 9 ಜೂನ್ 2024, 23:30 IST
Last Updated 9 ಜೂನ್ 2024, 23:30 IST
ಅಕ್ಷರ ಗಾತ್ರ

ನವದೆಹಲಿ: ನರೇಂದ್ರ ಮೋದಿ ನೇತೃತ್ವದ ಸರ್ಕಾರದಲ್ಲಿ ಸಂಪುಟ ದರ್ಜೆಯ ಸ್ಥಾನ ಬೇಕು ಎಂದು ಪಟ್ಟು ಹಿಡಿದಿರುವ ಎನ್‌ಸಿಪಿ, ರಾಜ್ಯ ಸಚಿವ (ಸ್ವತಂತ್ರ) ಸ್ಥಾನವನ್ನು ಒಪ್ಪದೆ ಇರಲು ಭಾನುವಾರ ತೀರ್ಮಾನಿಸಿದೆ.

ಆದರೆ, ಈ ವಿಷಯವನ್ನು ಇನ್ನಷ್ಟು ವಿಷಮಗೊಳಿಸದೆ ಇರಲು ಬಿಜೆಪಿ ಹಾಗೂ ಎನ್‌ಸಿಪಿ ತೀರ್ಮಾನಿಸಿವೆ. ಭಾನುವಾರ ನಡೆದ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮದಲ್ಲಿ ಎನ್‌ಸಿಪಿ ಪ್ರತಿನಿಧಿಗಳು ಭಾಗಿಯಾಗಿದ್ದರು. ಅಲ್ಲದೆ, ಇನ್ನೂ ಕೆಲವು ದಿನಗಳವರೆಗೆ ಕಾಯಲು ಸಿದ್ಧವಿರುವುದಾಗಿ ಎನ್‌ಸಿಪಿ ಹೇಳಿದೆ. ಇತ್ತ ಬಿಜೆಪಿಯು ಎನ್‌ಸಿಪಿ ವಿಚಾರವಾಗಿ ಪರಿಹಾರಾತ್ಮಕ ಕ್ರಮಗಳನ್ನು ಕೈಗೊಳ್ಳಲು ಸಿದ್ಧವಿರುವುದಾಗಿ ತಿಳಿಸಿದೆ.

ಕೇಂದ್ರದಲ್ಲಿ ಸಚಿವ ಸ್ಥಾನ ಪಡೆಯಬೇಕಿದ್ದ ಎನ್‌ಸಿಪಿ ಪ್ರತಿನಿಧಿ ಪ್ರಫುಲ್ಲ ಪಟೇಲ್ ಅವರು ಈಗಾಗಲೇ ಸಂಪುಟ ದರ್ಜೆಯ ಸಚಿವ ಸ್ಥಾನವನ್ನು ಹೊಂದಿದ್ದವರು. ಅವರು ಈಗ ಅದಕ್ಕಿಂತ ಕೆಳಹಂತದ ಸ್ಥಾನವನ್ನು ಒಪ್ಪುವುದಿಲ್ಲ ಎಂದು ಎನ್‌ಸಿಪಿ ಮುಖ್ಯಸ್ಥ ಅಜಿತ್ ಪವಾರ್ ಅವರು ಬಿಜೆಪಿಯ ನಾಯಕರಿಗೆ ತಿಳಿಸಿದ್ದಾರೆ.

ಎನ್‌ಸಿ‍ಪಿ ನಾಯಕರು ತಮ್ಮ ಪಟ್ಟು ಬಿಗಿಗೊಳಿಸಿದಾಗ ಬಿಜೆಪಿಯು ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಮತ್ತು ಪಕ್ಷದ ಪ್ರಧಾನ ಕಾರ್ಯದರ್ಶಿ ವಿನೋದ್ ತಾವಡೆ ಅವರನ್ನು ಪವಾರ್ ಹಾಗೂ ಇತರರ ಜೊತೆ ಮಾತುಕತೆಗೆ ಕಳುಹಿಸಿತು.

‘ಕೆಲವು ದಿನಗಳವರೆಗೆ ಕಾಯಲು ನಾವು ಸಿದ್ಧರಿದ್ದೇವೆ ಎಂಬುದನ್ನು ಅವರಿಗೆ ತಿಳಿಸಿದ್ದೇವೆ. ನಮಗೆ ಕ್ಯಾಬಿನೆಟ್ ದರ್ಜೆಯೇ ಬೇಕು’ ಎಂದು ಪವಾರ್ ಅವರು ಸುದ್ದಿಗಾರರ ಬಳಿ ಹೇಳಿದರು.

‘ಇಂದು ನಾವು ಒಬ್ಬ ರಾಜ್ಯಸಭಾ ಸದಸ್ಯ, ಒಬ್ಬ ಲೋಕಸಭಾ ಸದಸ್ಯರನ್ನು ಹೊಂದಿದ್ದೇವೆ. ಆದರೆ ಇನ್ನು ಎರಡರಿಂದ ಮೂರು ತಿಂಗಳಲ್ಲಿ ರಾಜ್ಯಸಭೆಯಲ್ಲಿ ನಮ್ಮ ಸದಸ್ಯರ ಸಂಖ್ಯೆ ಮೂರು ಆಗಲಿದೆ. ಇದರಿಂದ, ಸಂಸತ್‌ನಲ್ಲಿ ನಮ್ಮ ಸದಸ್ಯರ ಸಂಖ್ಯೆ ನಾಲ್ಕು ಆಗಲಿದೆ. ಹೀಗಾಗಿ ನಮಗೆ ಸಂಪುಟದಲ್ಲಿ ಒಂದು ಸ್ಥಾನ ಬೇಕು ಎಂದು ಹೇಳಿದ್ದೇವೆ’ ಎಂದರು.

ಆದರೆ, ಈ ಬಾರಿ ಮಿತ್ರಪಕ್ಷಗಳಿಗೆ ಹೆಚ್ಚಿನ ಪ್ರಾತಿನಿಧ್ಯ ಕಲ್ಪಿಸಬೇಕಿರುವ ಕಾರಣ ಎನ್‌ಸಿಪಿಗೆ ಒಂದು ರಾಜ್ಯ ಖಾತೆ (ಸ್ವತಂತ್ರ) ಸ್ಥಾನವನ್ನು ಮಾತ್ರ ನೀಡಲು ಸಾಧ್ಯ ಎಂದು ಬಿಜೆಪಿ ನಾಯಕರು ಸ್ಪಷ್ಟಪಡಿಸಿದರು. ಶಿವಸೇನಾ (ಶಿಂದೆ ಬಣ) ಪಕ್ಷಕ್ಕೆ ಕೂಡ ಒಂದು ರಾಜ್ಯ ಖಾತೆ (ಸ್ವತಂತ್ರ) ಮಾತ್ರ ನೀಡಲಾಗಿದೆ.

‘ರಾಜ್ಯ ಖಾತೆ ಒಪ್ಪಿಕೊಳ್ಳುವಲ್ಲಿ ನನಗೆ ಕೆಲವು ಮಿತಿಗಳಿವೆ. ನಮ್ಮ ಸಮಸ್ಯೆಯನ್ನು ಬಿಜೆಪಿಗೆ ತಿಳಿಸಲಾಗಿದೆ. ಕೆಲವು ದಿನಗಳವರೆಗೆ ಕಾಯಿರಿ, ಪರಿಹಾರ ರೂಪದಲ್ಲಿ ಏನಾದರೂ ಮಾಡೋಣ ಎಂದು ಅವರು ಹೇಳಿದ್ದಾರೆ. ಹಾಗೆ ಆಗುವುದಿದ್ದರೆ, ಸಮಸ್ಯೆ ಇದೆ ಎಂದು ಹೇಳಲು ಆಗದು’ ಎಂದು ಪಟೇಲ್ ತಿಳಿಸಿದರು.

‘ಮೈತ್ರಿಯ ಸೂತ್ರ ಮುರಿಯಲಾಗದು’

ಮುಂಬೈ: ‘ರಾಜ್ಯಸಭಾ ಸದಸ್ಯ ಪ್ರಫುಲ್ಲ ಪಟೇಲ್ ಅವರನ್ನೇ ಸಂಪುಟಕ್ಕೆ ಸೇರಿಸಿಕೊಳ್ಳಬೇಕು ಎಂದು ಎನ್‌ಸಿಪಿ ಪಟ್ಟುಹಿಡಿದಿತ್ತು. ಪಟೇಲ್ ಅವರು ಹೊಂದಿರುವ ಅನುಭವ ಪರಿಗಣಿಸಿ ಅವರಿಗೆ ರಾಜ್ಯ ಖಾತೆ (ಸ್ವತಂತ್ರ) ನೀಡುವುದು ಸರಿಯಲ್ಲ ಎಂಬ ನಿಲುವನ್ನು ಎನ್‌ಸಿಪಿ ಹೊಂದಿದೆ’ ಎಂದು ದೇವೇಂದ್ರ ಫಡಣವೀಸ್ ತಿಳಿಸಿದರು. ‘ಮೈತ್ರಿಕೂಟದ ಸರ್ಕಾರದಲ್ಲಿ ಒಂದು ಸೂತ್ರವನ್ನು ರೂಪಿಸಿಕೊಳ್ಳಬೇಕಾಗುತ್ತದೆ. ಅದನ್ನು ಒಂದು ಪಕ್ಷಕ್ಕಾಗಿ ಮುರಿಯಲು ಸಾಧ್ಯವಿಲ್ಲ. ಆದರೆ ಸಂಪುಟದ ವಿಸ್ತರಣೆ ಆದಾಗ ಕೇಂದ್ರ ಸರ್ಕಾರವು ಎನ್‌ಸಿಪಿಯನ್ನು ಪರಿಗಣಿಸಲಿದೆ ಎಂಬುದನ್ನು ನಾನು ವಿಶ್ವಾಸದಿಂದ ಹೇಳಬಲ್ಲೆ. ನಾವು ಈಗಲೇ ಎನ್‌ಸಿಪಿಯನ್ನು ಸೇರಿಸಿಕೊಳ್ಳಲು ಪ್ರಯತ್ನಿಸಿದೆವು. ಆದರೆ ಅವರು ಸಂಪುಟ ದರ್ಜೆಗೆ ಪಟ್ಟುಹಿಡಿದರು’ ಎಂದು ಫಡಣವೀಸ್ ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT