ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಶ್ಚಿಮ ಬಂಗಾಳ ಪಂಚಾಯತ್‌ ಚುನಾವಣೆ ಅಸಿಂಧುಗೊಳಿಸಲು ಕೋರಿದ್ದ ಅರ್ಜಿ ವಜಾ

Published 12 ಜುಲೈ 2023, 13:51 IST
Last Updated 12 ಜುಲೈ 2023, 13:51 IST
ಅಕ್ಷರ ಗಾತ್ರ

ಕೋಲ್ಕತ್ತ: ಸಂವಿಧಾನದ ಮೂಲ ತತ್ವಗಳು ಪಾಲನೆ ಆಗದಿರುವ ಹಾಗೂ ಮುಕ್ತ ಮತ್ತು ನ್ಯಾಯ ಸಮ್ಮತ ಚುನಾವಣೆ ನಡೆಯದಿರುವ ಕಾರಣ ಪಶ್ಚಿಮ ಬಂಗಾಳದ 2023ರ ಪಂಚಾಯತ್‌ ಚುನಾವಣೆಯನ್ನು ಅಸಿಂಧುಗೊಳಿಸಬೇಕು ಎಂದು ಕೋರಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಕಲ್ಕತ್ತ ಹೈಕೋರ್ಟ್‌ ಬುಧವಾರ ವಜಾಗೊಳಿಸಿದೆ.

ರಾಜ್ಯ ಚುನಾವಣಾ ಆಯುಕ್ತರನ್ನು ಹುದ್ದೆಯಿಂದ ತೆಗೆಯುವಂತೆ ಸಲ್ಲಿಕೆಯಾಗಿದ್ದ ಕೋರಿಕೆಯನ್ನೂ ಹೈಕೋರ್ಟ್‌ ಇದೇ ವೇಳೆ ತಿರಸ್ಕರಿಸಿತು. ಇದು ಸ್ವತಂತ್ರ ಸಾಂವಿಧಾನಿಕ ಸಂಸ್ಥೆ ಆಗಿರುವುದರಿಂದ ಈ ರೀತಿಯ ಕೋರಿಕೆಗಳನ್ನು ನಿರ್ವಹಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿತು.

ಮುಖ್ಯ ನ್ಯಾಯಮೂರ್ತಿ ಟಿ.ಎಸ್.ಶಿವಜ್ಞಾನಂ ಮತ್ತು ಹಿರಣ್ಮಯ್‌ ಭಟ್ಟಾಚಾರ್ಯ ಅವರ ಪೀಠವು ಈ ಕುರಿತ ರಿಟ್‌ ಅರ್ಜಿಗಳನ್ನು ವಜಾಗೊಳಿಸಿತು. ಇದೇ ರೀತಿ ಎರಡು ಅರ್ಜಿಗಳನ್ನು ಪೀಠ ಈ ಹಿಂದೆ ವಜಾಗೊಳಿಸಿತ್ತು.

ಈ ರೀತಿಯ ಅರ್ಜಿಗಳನ್ನು ಈಗಾಗಲೇ ಇತ್ಯರ್ಥಪಡಿಸಲಾಗಿದ್ದು, ಅದನ್ನು ಸುಪ್ರೀಂ ಕೋರ್ಟ್‌ ಎತ್ತಿಹಿಡಿದೆ ಎಂದು ಪೀಠ ತಿಳಿಸಿದೆ.

ನಾಮಪತ್ರ ಸಲ್ಲಿಕೆ ಕೊನೆಗೊಳ್ಳುವ ಎರಡು ದಿನಗಳಲ್ಲಿ ಆಡಳಿತ ಪಕ್ಷದ ಅಭ್ಯರ್ಥಿಗಳಿಂದ 76 ಸಾವಿರ ನಾಮಪತ್ರಗಳು ಸಲ್ಲಿಕೆಯಾಗಿವೆ. ಭಾರತದಲ್ಲಿಯೇ ಇಲ್ಲದ ವ್ಯಕ್ತಿಯೊಬ್ಬರೂ ನಾಮಪತ್ರ ಸಲ್ಲಿಸಿದ್ದಾರೆ. ಆದ್ದರಿಂದ ಈ ಕುರಿತು ಸ್ವತಂತ್ರ ಸಂಸ್ಥೆಯೊಂದರಿಂದ ತನಿಖೆಗೆ ನಿರ್ದೇಶಿಸುವಂತೆ ಅರ್ಜಿಯಲ್ಲಿ ಕೋರಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT