ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಸ್ಥಿರಾಭಿವೃದ್ಧಿ, ಪರಿಸರಸ್ನೇಹಿ ಚುನಾವಣೆಗೆ ಕ್ರಮ: ಚುನಾವಣಾ ಆಯೋಗ

ಪ್ಲಾಸ್ಟಿಕ್‌ ಉತ್ಪನ್ನಗಳ ಬಳಕೆಗೆ ಕಡಿವಾಣ, ಕಾರ್‌ಪೂಲಿಂಗ್‌ಗೆ ಉತ್ತೇಜನ
Published 17 ಮಾರ್ಚ್ 2024, 15:40 IST
Last Updated 17 ಮಾರ್ಚ್ 2024, 15:40 IST
ಅಕ್ಷರ ಗಾತ್ರ

ನವದೆಹಲಿ: ಕನಿಷ್ಠ ಪ್ರಮಾಣದಲ್ಲಿ ಕಾಗದದ ಬಳಕೆ, ಪರಿಸರ ಸ್ನೇಹಿ ವಾಹನಗಳ ಬಳಕೆಗೆ ಆದ್ಯತೆ, ಒಂದೇ ಬಾರಿಗೆ ಬಳಸಬಹುದಾದ ಪ್ಲಾಸ್ಟಿಕ್‌ ಉತ್ಪನ್ನಗಳ ಬಳಕೆಗೆ ಕಡಿವಾಣ, ಕಾರ್‌ಪೂಲಿಂಗ್‌ಗೆ ಉತ್ತೇಜನ ಸೇರಿ ಹಲವು ಕ್ರಮಗಳಿಗೆ ಚುನಾವಣಾ ಆಯೋಗ ಮುಂದಾಗಿದೆ.

ಚುನಾವಣಾಧಿಕಾರಿಗಳು ಹಾಗೂ ರಾಜಕೀಯ ಪಕ್ಷಗಳಿಗೆ ಈ ಕುರಿತು ಸ್ಪಷ್ಟ ಸೂಚನೆಗಳನ್ನು ನೀಡಿರುವ ಆಯೋಗವು ಈ ಮೂಲಕ ಲೋಕಸಭೆಯ ಸಾರ್ವತ್ರಿಕ ಚುನಾವಣೆಯನ್ನು ‘ಸುಸ್ಥಿರಾಭಿವೃದ್ದಿ ಚುನಾವಣೆ’ಯಾಗಿಸುವ ಗುರಿಯನ್ನು ಹೊಂದಿದೆ.

ಚುನಾವಣೆಗೆ ಸಂಬಂಧಿಸಿದ ಪ್ರತಿ ಕಾರ್ಯಕ್ರಮಗಳೂ ಆದಷ್ಟು ಪರಿಸರ ಸ್ನೇಹಿಯಾಗಿರಬೇಕು ಎಂಬುದು ಆಯೋಗದ ಉದ್ದೇಶವಾಗಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್‌ ಕುಮಾರ್ ಅವರು ತಿಳಿಸಿದ್ದಾರೆ. 

ಸುಸ್ಥಿರಾಭಿವೃದ್ಧಿ ಮತ್ತು ಪರಿಸರ ಸ್ನೇಹಿ ಚುನಾವಣೆ ನಡೆಸುವ ಕ್ರಮವಾಗಿ ಹಲವು ಕ್ರಮಕ್ಕೆ ಮುಂದಾಗಿದ್ದೇವೆ. ಒಂದು ಬಾರಿಯಷ್ಟೇ ಬಳಸಬಹುದಾದ ಪ್ಲಾಸ್ಟಿಕ್‌ಗಳ ಬಳಕೆಗೆ ಕಡಿವಾಣ ಹಾಕಲು ಸೂಚಿಸಲಾಗಿದೆ. ಇದು ಸೇರಿದಂತೆ ಹಲವು ನಿರ್ದೇಶನಗಳನ್ನು ನೀಡಲಾಗಿದೆ. ತ್ಯಾಜ್ಯ ನಿರ್ವಹಣೆಗೆ ಒತ್ತು ನೀಡಬೇಕು. ಕಾಗದದ ಬಳಕೆಯನ್ನು ಆದಷ್ಟೂ ಕಡಿಮೆ ಮಾಡಬೇಕು ಎಂದು ಸೂಚಿಸಲಾಗಿದೆ ಎಂದು ಹೇಳಿದ್ದಾರೆ.

ಚುನಾವಣಾ ವೇಳಾಪಟ್ಟಿ ಪ್ರಕಟಿಸಲು ಶನಿವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಈ ಕುರಿತ ಮಾಹಿತಿಗಳನ್ನು ಅವರು ಹಂಚಿಕೊಂಡರು.

ಸಮರ್ಪಕವಾಗಿ ತ್ಯಾಜ್ಯಗಳ ವಿಲೇವಾರಿ ಮಾಡಬೇಕು, ತ್ಯಾಜ್ಯವಿಲೇವಾರಿ ಮತ್ತು ಮರುಬಳಕೆ ಕ್ರಮಗಳಿಗೆ ಸ್ಥಳೀಯ ಸಂಸ್ಥೆಗಳ ಜೊತೆಎ ಸಹಯೋಗ ಹೊಂದಬೇಕು. ಆದಷ್ಟು ಕಡಿಮೆ ಕಾಗದ ಬಳಸಬೇಕು, ಹಾಳೆಯ ಎರಡೂ ಕಡೆ ಮುದ್ರಿಸಲು ಕ್ರಮವಹಿಸಬೇಕು, ಕಾಗದ ಬಳಕೆಗೆ ತಪ್ಪಿಸಲು ಸಂವಹನ ಕ್ರಿಯಗಾಗಿ ಆದಷ್ಟೂ ಎಲೆಕ್ಟ್ರಾನಿಕ್ ಸ್ವರೂಪವನ್ನು ಬಳಸಬೇಕು ಎಂದು ಸೂಚಿಸಲಾಗಿದೆ ಎಂದರು.

ರಾಜಕೀಯ ಪಕ್ಷಗಳುಈ ನಿಟ್ಟಿನಲ್ಲಿ ಚಿಂತನೆ ನಡೆಸಬೇಕು. ಸಾರ್ವಜನಿಕ ಸಾರಿಗೆಗಳ ಬಳಕೆ, ಕಾರ್‌ ಪೂಲಿಂಗ್ ಕ್ರಮಕ್ಕೆ ಉತ್ತೇಜನ, ಮರುಬಳಕೆ ಇಂಧನಗಳ ಬಳಕೆಗೆ ಒತ್ತು ನೀಡಬೇಕು ಎಂದೂ ಅವರು ಕೋರಿದ್ದಾರೆ. 

ಆಯೋಗವು ಲೋಕಸಭೆಗೆ ಸಾರ್ವತ್ರಿಕ ಚುನಾವಣೆಗೆ ವೇಳಾಪಟ್ಟಿ ಪ್ರಕಟಿಸಿದ್ದು, ಆ ಪ್ರಕಾರ, 543 ಕ್ಷೇತ್ರಗಳಿಗೆ ಏಳು ಹಂತದಲ್ಲಿ ಮತದಾನ ನಡೆಯಲಿದೆ. ಇದೇ ವೇಳೆ ನಾಲ್ಕು ರಾಜ್ಯಗಳ ವಿಧಾನಸಭೆಗೂ ಚುನಾವಣೆ ನಡೆಯಲಿದೆ. ಮತಎಣಿಕೆಯು ಜೂನ್‌ 4ರಂದು ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT