ಶುಕ್ರವಾರ, 1 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮನದ ಮಾತು’ ವಿರುದ್ಧ ಟ್ವೀಟ್‌; ಎಎಪಿ ಗುಜರಾತ್‌ ರಾಜ್ಯ ಘಟಕ ಅಧ್ಯಕ್ಷನ ವಿರುದ್ಧ ಪ್ರಕರಣ

Published 1 ಮೇ 2023, 14:37 IST
Last Updated 1 ಮೇ 2023, 14:37 IST
ಅಕ್ಷರ ಗಾತ್ರ

ಅಹಮದಾಬಾದ್: ‘ಪ್ರಧಾನಿ ನರೇಂದ್ರ ಮೋದಿ ಅವರ ‘ಮನದ ಮಾತು’ ಬಾನುಲಿ ಕಾರ್ಯಕ್ರಮದ ನೂರು ಕಂತುಗಳಿಗೆ ಕೇಂದ್ರ ಸರ್ಕಾರವು ಇದುವರೆಗೆ ತೆರಿಗೆ ಪಾವತಿದಾರರ ₹830 ಕೋಟಿ ಖರ್ಚು ಮಾಡಿದೆ’ ಎಂದು ಆರೋಪಿಸಿ ಟ್ವೀಟ್‌ ಮಾಡಿದ್ದ ಆಮ್‌ ಆದ್ಮಿ ಪಕ್ಷದ (ಎಎಪಿ) ಗುಜರಾತ್‌ ಘಟಕ ಅಧ್ಯಕ್ಷ ಈಸುಧಾನ್‌ ಗಡವಿ ಅವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

‘ಯಾವುದೇ ಸಾಕ್ಷ್ಯಗಳಿಲ್ಲದೆ ಆರೋಪ ಮಾಡಿರುವುದಕ್ಕೆ ಈಸುಧಾನ್‌ ಅವರ ವಿರುದ್ಧ  ಅಹಮದಾಬಾದ್‌ನ ಸೈಬರ್‌ ಕ್ರೈಂ ವಿಭಾಗದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈಸುಧಾನ್‌ ಅವರು ಈ ಟ್ವೀಟ್‌ ಅನ್ನು ಬಳಿಕ ಅಳಿಸಿದ್ದಾರೆ.

‘ಸುಳ್ಳು ಎಫ್‌ಐಆರ್‌ಗಳ ಮೂಲಕ ಆಡಳಿತಾರೂಢ ಬಿಜೆಪಿಯು ಎಎಪಿ ನಾಯಕರ ಮೇಲೆ ದೌರ್ಜನ್ಯ ಎಸಗುತ್ತಿದೆ’ ಎಂದು ಎಎಪಿ ಆರೋಪಿಸಿದೆ.

ಪಿಐಬಿ ಫ್ಯಾಕ್ಟ್‌ ಚೆಕ್‌ ವೇದಿಕೆಯ ಟ್ವಿಟರ್‌ ಖಾತೆಯು ಈಸುಧಾನ್‌ ಅವರ ಟ್ವೀಟ್‌ನ ಸ್ಕ್ರೀನ್‌ ಶಾಟ್‌ ಅನ್ನು ಲಗತ್ತಿಸಿ, ಈ ಟ್ವೀಟ್‌ನಲ್ಲಿ ಹೇಳಲಾಗಿರುವ ವಿಚಾರಗಳು ಸುಳ್ಳು ಎಂದಿತ್ತು.

‘ಟ್ವೀಟ್‌ ಮಾಡಿದ್ದಕ್ಕಾಗಿ ಈಸುಧಾನ್‌ ಅವರ ವಿರುದ್ಧ ಪ್ರಕರಣ ದಾಖಲಾಗಿದೆ. ಇದರಿಂದ ಬಿಜೆಪಿಗೆ ಎಎಪಿ ಬಗ್ಗೆ ಎಷ್ಟು ಭಯವಿದೆ ಎಂಬುದು ವ್ಯಕ್ತವಾಗುತ್ತಿದೆ. ನಾವು ನಮ್ಮ ಹೋರಾಟವನ್ನು ಮುಂದುವರಿಸುತ್ತೇವೆ’ ಎಂದು ಎಎಪಿ ರಾಷ್ಟ್ರೀಯ ಜಂಟಿ ಕಾರ್ಯದರ್ಶಿ ಗೋಪಾಲ್‌ ಇಟಾಲಿಯಾ ಹೇಳಿದ್ದಾರೆ.

ಪ್ರಧಾನಿ ಮೋದಿ ಅವರ ‘ಮನದ ಮಾತು’ ಸರಣಿಯ 100ನೇ ಕಂತು ಭಾನುವಾರ ಪ್ರಸಾರವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT