ಭಾನುವಾರ, 3 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇರಳ ಹಿಂಸಾಚಾರ ಪ್ರಕರಣ: ಕಾಂಗ್ರೆಸ್ ನಾಯಕರ ವಿರುದ್ಧ ಪ್ರಕರಣ

Published 24 ಡಿಸೆಂಬರ್ 2023, 2:43 IST
Last Updated 24 ಡಿಸೆಂಬರ್ 2023, 2:43 IST
ಅಕ್ಷರ ಗಾತ್ರ

ತಿರುವನಂತಪುರಂ: ‘ನವ ಕೇರಳ ಸದಾಸ್’ ಯೋಜನೆ ವಿರುದ್ಧ ಡಿಜಿಪಿ ಕಛೇರಿಗೆ ಕಾಂಗ್ರೆಸ್ ಮೆರವಣಿಗೆ ವೇಳೆ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಕೇರಳ ಪೊಲೀಸರು ಶನಿವಾರ ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ಕೆ. ಸುಧಾಕರನ್, ವಿಧಾನಸಭೆಯ ವಿರೋಧ ಪಕ್ಷದ ನಾಯಕ ವಿ. ಡಿ ಸತೀಶನ್ ಹಾಗೂ ಘಟಕದ/ಪಕ್ಷದ ಹಿರಿಯ ನಾಯಕರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಶನಿವಾರ ಆಯೋಜಿಸಿದ್ದ ಪ್ರತಿಭಟನೆಯ ಸಂದರ್ಭದಲ್ಲಿ ರಾಜ್ಯ ರಾಜಧಾನಿ ತಿರುವನಂತಪುರಂ ಹಿಂಸಾಚಾರದ ಘಟನೆಗಳಿಗೆ ಸಾಕ್ಷಿಯಾಗಿತ್ತು.

ರ‍್ಯಾಲಿ ಸಂದರ್ಭದಲ್ಲಿ ಪ್ರತಿಭಟನಾಕಾರರು ಕಲ್ಲು ಹಾಗೂ ದೊಣ್ಣೆಗಳನ್ನು ಪೊಲೀಸರತ್ತ ಎಸೆದು ಆಕ್ರೋಶ ವ್ಯಕ್ತಪಡಿಸಿದ್ದರು. ಇದು ಕ್ಷಣಕಾಲ ಸ್ಥಳದಲ್ಲಿ ಆತಂಕ ಸೃಷ್ಟಿಸಿತ್ತು. ಗುಂಪು ಚದುರಿಸಲು ಪೊಲೀಸರು ಅಶ್ರುವಾಯು ಹಾಗೂ ಜಲಫಿರಂಗಿ ಅಸ್ತ್ರ ಬಳಸಿದ್ದಾರೆ ಎಂದು ವರದಿಯಾಗಿತ್ತು. ಅಶ್ರುವಾಯು ಪ್ರಯೋಗದಲ್ಲಿ ಸುಧಾಕರನ್ ಹಾಗೂ ಚೆನ್ನಿತ್ತಲ ಅವರು ಅಸ್ವಸ್ಥಗೊಂಡಿದ್ದರು. ಬಳಿಕ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಗಲಭೆ, ರಸ್ತೆ ತಡೆ, ಸರ್ಕಾರಿ ಕೆಲಸಕ್ಕೆ ಅಡ್ಡಿ ಸೇರಿದಂತೆ ಐಪಿಸಿಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರತಿಭಟನೆಯಲ್ಲಿ ಭಾಗಿಯಾದ ಎಲ್ಲ ಮುಖಂಡರು ಹಾಗೂ ಪಕ್ಷದ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಜಿಲ್ಲೆಯ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.

ಸುಧಾಕರನ್ ಮತ್ತು ಸತೀಶ್‌ ಅಲ್ಲದೇ ಸಂಸದರಾದ ಶಶಿ ತರೂರ್, ಕೋಡಿಕುನ್ನಿಲ್ ಸುರೇಶ್, ಅಡೂರ್ ಪ್ರಕಾಶ್, ಕೆ ಮುರಳೀಧರನ್ ಮತ್ತು ಜೆ.ಬಿ ಮಾಥರ್, ಶಾಸಕ ರಮೇಶ್ ಚೆನ್ನಿತ್ತಲ ಮತ್ತು ಇತರರ ವಿರುದ್ಧವೂ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಪ್ರತಿಭಟನೆಯಲ್ಲಿ ಸುಮಾರು 300-400 ಜನರು ಭಾಗಿಯಾಗಿದ್ದರು. ಕಲ್ಲು ತೂರಾಟದಲ್ಲಿ ಕೆಲವು ಪತ್ರಕರ್ತರು ಗಾಯಗೊಂಡಿದ್ದಾರೆ. ಆದರೆ ಅವರ್ಯಾರೂ ಅಧಿಕೃತವಾಗಿ ಪೊಲೀಸರಿಗೆ ದೂರು ನೀಡಿಲ್ಲ.

ಘಟನೆಯನ್ನು ತೀವ್ರವಾಗಿ ಖಂಡಿಸಿರುವ ಕಾಂಗ್ರೆಸ್ ಮತ್ತು ಯುಡಿಎಫ್ ನಾಯಕರು ಇದು ಪೂರ್ವಯೋಜಿತ ದಾಳಿ ಎಂದು ಆರೋಪಿಸಿದ್ದಾರೆ. ಆದರೆ ಆಡಳಿತಾರೂಢ ಸಿಪಿಐ(ಎಂ) ಮತ್ತು ಎಲ್‌ಡಿಎಫ್ ಪೊಲೀಸ್ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ. ವಿರೋಧ ಪಕ್ಷದ ಕಾರ್ಯಕರ್ತರು ಸಮಸ್ಯೆಗಳನ್ನು ಸೃಷ್ಟಿಸಲು ಪ್ರಯತ್ನಿಸಿದ್ದಾರೆ ಎಂದು ದೂರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT