ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರಾಂಚಿ | ನಗದು ಪತ್ತೆಯಾಗಿದ್ದ ಫ್ಲ್ಯಾಟ್ ಸಚಿವರದ್ದೆ: ಇ.ಡಿ ಆರೋಪ

ಎಲ್ಲ ಟೆಂಡರ್‌ಗಳಿಂದಲೂ ಶೇ 1.5 ಕಮಿಷನ್ ನಿಗದಿ, ಇದು ಹಣ ಸಂಗ್ರಹಣೆಯ ದೊಡ್ಡ ಜಾಲ–ಇ.ಡಿ.ಆರೋಪ
Published 16 ಮೇ 2024, 15:36 IST
Last Updated 16 ಮೇ 2024, 15:36 IST
ಅಕ್ಷರ ಗಾತ್ರ

ರಾಂಚಿ: ₹32 ಕೋಟಿ ನಗದು ಪತ್ತೆಯಾಗಿದ್ದ ರಾಂಚಿಯ ಫ್ಲ್ಯಾಟ್‌ ಸಚಿವ ಆಲಂಗೀರ್ ಆಲಂ ಅವರದ್ದೇ ಆಗಿದೆ. ತಮ್ಮ ಇಲಾಖೆಯಿಂದ ಅನುಮೋದನೆ ನೀಡಲಾಗುತ್ತಿದ್ದ ಎಲ್ಲ ಟೆಂಡರ್‌ಗಳಿಗೂ ಶೇ 1.5 ಕಮಿಷನ್‌ ಅನ್ನು ಅವರು ನಿಗದಿಪಡಿಸಿದ್ದರು ಎಂದು ಜಾರಿ ನಿರ್ದೇಶನಾಲಯ (ಇ.ಡಿ.) ಗುರುವಾರ ಆರೋಪಿಸಿದೆ. 

ಕಳೆದ ವಾರ ಆಲಂ ಅವರ ಆಪ್ತ ಸಹಾಯಕ ಸಂಜೀವ್‌ ಕುಮಾರ್‌ ಲಾಲ್‌ ಮತ್ತು ಅವರ ಮನೆಗೆಲಸ ಮಾಡುತ್ತಿದ್ದ ಜಹಾಂಗೀರ್ ಆಲಂ ಅವರು ಇದ್ದ ಪ್ರದೇಶದಲ್ಲಿ ನಗದು ಪತ್ತೆಯಾಗಿತ್ತು. ನಂತರ ಇಬ್ಬರನ್ನೂ ಇ.ಡಿ ಬಂಧಿಸಿತ್ತು. ಬುಧವಾರ ಆಲಂ ಅವರನ್ನೂ ಬಂಧಿಸಿದ್ದ ಇ.ಡಿ, ಗುರುವಾರ ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ)ಯ ವಿಶೇಷ ನ್ಯಾಯಾಲಯಕ್ಕೆ ಗುರುವಾರ ಹಾಜರುಪಡಿಸಿತು. 

ಕಳೆದ ವರ್ಷ ಗ್ರಾಮೀಣಾಭಿವೃದ್ಧಿ ಇಲಾಖೆಯ ಮುಖ್ಯ ಎಂಜಿನಿಯರ್ ವೀರೇಂದ್ರ ಕುಮಾರ್ ಅವರನ್ನು ಬಂಧಿಸಲಾಗಿತ್ತು. ಟೆಂಡರ್‌ಗಳಿಗೆ ಅನುಮೋದನೆ ನೀಡಲು ಅವರು ಶೇ 1.5ರಷ್ಟು ಕಮಿಷನ್ ನಿಗದಿಪಡಿಸಿದ್ದು, ಸಚಿವ ಆಲಂ ಅವರ ಪರವಾಗಿ ಅದನ್ನು ಸಂಗ್ರಹಿಸುತ್ತಿದ್ದರು. ಸಂಗ್ರಹವಾದ ಕಮಿಷನ್‌ನಲ್ಲಿ ಎಲ್ಲರಿಗೂ ಪಾಲು ಹಂಚುವ ಹೊಣೆಯನ್ಹು  ಗ್ರಾಮೀಣಾಭಿವೃದ್ಧಿ ಇಲಾಖೆಯ ವಿಶೇಷ ವಿಭಾಗ ಹಾಗೂ ಕಾಮಗಾರಿ ಹಂಚಿಕೆ ವಿಭಾಗದಲ್ಲಿ ಕೆಲಸ ಮಾಡುವ ಸಹಾಯಕ ಎಂಜಿನಿಯರ್‌ಗಳಿಗೆ ವಹಿಸಲಾಗಿತ್ತು ಎಂದೂ ಇ.ಡಿ.

ಆಲಂ ಆರು ದಿನ ಇ.ಡಿ. ಕಸ್ಟಡಿಗೆ

ಬಂಧನಕ್ಕೆ ಒಳಗಾಗಿರುವ ಸಚಿವ ಆಲಂಗೀರ್ ಆಲಂ ಅವರನ್ನು ಗುರುವಾರ ಆರು ದಿನಗಳ ಅವಧಿಗೆ ಇ.ಡಿ. ಕಸ್ಟಡಿಗೆ ನೀಡಿ ಪಿಎಂಎಲ್‌ಎ ವಿಶೇಷ ನ್ಯಾಯಾಲಯ ಆದೇಶಿಸಿದೆ ಎಂದು ವಕೀಲರು ತಿಳಿಸಿದರು.  ಶುಕ್ರವಾರದಿಂದ ಆಲಂಗೀರ್ ಅವರ ಇ.ಡಿ. ಕಸ್ಟಡಿಯ ಆರು ದಿನಗಳ ಅವಧಿ ಪ್ರಾರಂಭವಾಗಲಿದೆ. ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಅವರ ಮೇಲೆ ನಿರ್ದಿಷ್ಟ ಆರೋಪಗಳು ಇಲ್ಲ. ಯಾರಿಗೆ ಹಣ ವರ್ಗಾವಣೆ ಮಾಡಿದ್ದಾರೆ ಎಂದು ಕೂಡ ಹೇಳುತ್ತಿಲ್ಲ. ಎಲ್ಲವೂ ಅಸ್ಪಷ್ಟವಾಗಿದೆ ಎಂದು ಆಲಂ ಅವರ ವಕೀಲ ಕಿಶ್ಲೆ ಪ್ರಸಾದ್ ಹೇಳಿದರು.  ನಿದ್ರೆ ಮಾಡುವಾಗ ಉಸಿರುಗಟ್ಟಿದಂತಾಗುವ ಆರೋಗ್ಯದ ಸಮಸ್ಯೆ ಆಲಂ ಅವರಿಗೆ ಇದೆ. ಹೀಗಾದಾಗ ಅವರ ದೇಹದ ಆಮ್ಲಜನಕ ಪ್ರಮಾಣ ಕಡಿಮೆಯಾಗುತ್ತದೆ. ಅವರಿಗೆ ಆಮ್ಲಜನಕದ ಸಿಲಿಂಡರ್ ಅಗತ್ಯವಿದೆ. ಇ.ಡಿ. ವಶದಲ್ಲಿ ಇದ್ದಾಗ ಬುಧವಾರವೂ ಆಲಂ ಅವರ ಕುಟುಂಬದವರೇ ಆಕ್ಸಿಜನ್ ವ್ಯವಸ್ಥೆ ಒದಗಿಸಿದ್ದರು. ಅಧಿಕ ರಕ್ತದೊತ್ತಡ ಹಾಗೂ ಮಧುಮೇಹದ ಸಮಸ್ಯೆಯೂ ಅವರಿಗೆ ಇದೆ ಎಂದು ತಿಳಿಸಿದರು.  ಅಗತ್ಯ ಔಷಧ ಹಾಗೂ ಔಷಧೋಪಕರಣವನ್ನು ಕಸ್ಟಡಿಯಲ್ಲಿ ಇರುವ ಅವಧಿಯಲ್ಲಿ ಒದಗಿಸಲಾಗುವುದು ಎಂದೂ ನ್ಯಾಯಾಲಯ ತಿಳಿಸಿದೆ. 

ಇ.ಡಿ. ಮಾಡಿದ ಆರೋಪಗಳು

  • ವಶಪಡಿಸಿಕೊಳ್ಳಲಾದ ₹32.2 ಕೋಟಿ ಹಣವನ್ನು ಜಹಾಂಗೀರ್ ಆಲಂ ಹೆಸರಿನಲ್ಲಿ ಸಂಗ್ರಹಿಸಲಾಗಿತ್ತು.

  • ಸಂಜೀವ್ ಕುಮಾರ್ ಲಾಲ್ ಸೂಚನೆಯಂತೆ ಈ ಹಣವನ್ನು ಜಹಾಂಗೀರ್ ವಸೂಲು ಮಾಡುತ್ತಿದ್ದರು. 

  • ಆಲಂಗೀರ್ ಆಲಂ ಅವರ ಪರವಾಗಿಯೇ ಈ ರೀತಿ ಸಂಜೀವ್ ಹಣ ಸಂಗ್ರಹಿಸಲು ಸೂಚನೆ ನೀಡಿದ್ದರು.

  • ಆಲಂಗೀರ್ ಅವರಿಗಾಗಿ ಕಮಿಷನ್ ಪಡೆಯುವ ಕೆಲಸವನ್ನು ಸಂಜೀವ್ ಮಾಡುತ್ತಿದ್ದರು. ಎಂಜಿನಿಯರ್‌ಗಳಿಂದ ಬರುತ್ತಿದ್ದ ಟೆಂಡರ್‌ಗಳಿಗೆ ಅನುಮೋದನೆ ದೊರಕಿಸಿಕೊಡುವುದರಲ್ಲಿ ಅವರ ಪಾತ್ರ ಮುಖ್ಯವಾಗಿತ್ತು.

  • ಹೀಗೆ ಪಡೆದ ಕಮಿಷನ್‌ ಅನ್ನು ಗ್ರಾಮೀಣಾಭಿವೃದ್ಧಿ ಇಲಾಖೆಯ ವಿವಿಧ ಸ್ತರಗಳ ಸಿಬ್ಬಂದಿಯಲ್ಲಿ ಹಂಚುವ ಪರಿಪಾಟವೂ ನಡೆದಿತ್ತು. ಇದೊಂದು ದೊಡ್ಡ ಜಾಲವಾಗಿದ್ದು ದೊಡ್ಡ ಮೊತ್ತದ ಹಣ ವರ್ಗಾವಣೆ ಅಕ್ರವಾಗಿ ನಡೆದಿದೆ. ಅದನ್ನು ಬಯಲಿಗೆಳೆಯಬೇಕಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT