ಭಾನುವಾರ, 1 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಹಾರದಲ್ಲಿ ಜಾತಿ ಗಣತಿ ಪೂರ್ಣ: ನಿತೀಶ್‌ ಕುಮಾರ್‌

Published 25 ಆಗಸ್ಟ್ 2023, 16:17 IST
Last Updated 25 ಆಗಸ್ಟ್ 2023, 16:17 IST
ಅಕ್ಷರ ಗಾತ್ರ

ಪಟ್ನಾ: ರಾಜ್ಯದಲ್ಲಿ ಜಾತಿ ಗಣತಿ ಪೂರ್ಣಗೊಂಡಿದೆ. ದತ್ತಾಂಶವನ್ನು ಶೀಘ್ರವೇ ಸರ್ಕಾರ ಸಾರ್ವಜನಿಕಗೊಳಿಸಲಿದೆ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಶುಕ್ರವಾರ ಹೇಳಿದ್ದಾರೆ. 

ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮಾಜದ ಎಲ್ಲ ವರ್ಗಗಳಿಗೆ ಸರ್ಕಾರದ ಸೌಲಭ್ಯಗಳನ್ನು ಕಲ್ಪಿಸಲು ಜಾತಿ ಆಧರಿತ ಸಮೀಕ್ಷೆ ನಡೆಸಲಾಗಿದೆ ಎಂದು ಒತ್ತಿ ಹೇಳಿದರು.

‘ರಾಜ್ಯದಲ್ಲಿ ಜಾತಿವಾರು ಸಮೀಕ್ಷೆಯಿಂದ ಎಲ್ಲರಿಗೂ ಅನುಕೂಲವಾಗಲಿದೆ. ಇದರಿಂದ ಸೌಲಭ್ಯ ವಂಚಿತರು ಸೇರಿ ಸಮಾಜದ ನಾನಾ ವರ್ಗಗಳ ಅಭಿವೃದ್ಧಿಗೆ ಶ್ರಮಿಸಲು ಸರ್ಕಾರ‌ಕ್ಕೂ ಸಾಧ್ಯವಾಗಲಿದೆ. ಅಲ್ಲದೆ, ಯಾವ ಕ್ಷೇತ್ರಗಳಲ್ಲಿ ಅಭಿವೃದ್ಧಿಯ ಅಗತ್ಯವಿದೆ ಎಂಬುದನ್ನು ತಿಳಿಯಲು ಇದು ಸಹಕಾರಿ. ಸಮೀಕ್ಷೆಯ ವಿವರವಾದ ಅಂಕಿಅಂಶಗಳು ಬಂದಿವೆ. ಇದನ್ನು ಇತರ ರಾಜ್ಯಗಳೂ ಅನುಸರಿಸುವ ಖಾತ್ರಿ ಇದೆ’ ಎಂದು ಅವರು ಹೇಳಿದರು.

ಜಾತಿವಾರು ಗಣತಿಯನ್ನು ಕೆಲವು ರಾಜಕೀಯ ಪಕ್ಷಗಳು ವಿರೋಧಿಸುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿ ಸೇರಿ ಎಲ್ಲ ರಾಜಕೀಯ ಪಕ್ಷಗಳ ನಾಯಕರು ಸರ್ವಾನುಮತದ ನಿರ್ಧಾರ ಕೈಗೊಂಡ ನಂತರವೇ ಜಾತಿವಾರು ಸಮೀಕ್ಷೆ ನಡೆಸಲು ನಿರ್ಧರಿಸಲಾಯಿತು ಎಂದು ನಿತೀಶ್‌ ಕುಮಾರ್ ಸ್ಪಷ್ಟಪಡಿಸಿದರು.

‘ಅವರ (ಬಿಜೆಪಿ) ಮಾತಿಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗಗಳ ಕಲ್ಯಾಣಕ್ಕೆ ಯೋಜನೆಗಳನ್ನು ಉತ್ತಮವಾಗಿ ಅನುಷ್ಠಾನಗೊಳಿಸಲು ಸಮೀಕ್ಷಾ ವರದಿಯು ಸರ್ಕಾರಕ್ಕೆ ನೆರವಾಗುತ್ತದೆ ಎಂದಷ್ಟೇ ಹೇಳಬಲ್ಲೆ. ನಾವು ಜಾತಿ ಗಣತಿಯ ಪರ ಇದ್ದೇವೆ’ ಎಂದರು.

ಜಾತಿ ಗಣತಿ ಕುರಿತು ಪ್ರಶ್ನಿಸಿರುವ ಅರ್ಜಿಗಳ ವಿಚಾರಣೆಯಲ್ಲಿ ಪ್ರತಿಕ್ರಿಯೆ ಸಲ್ಲಿಸಲು ಸುಪ್ರೀಂ ಕೋರ್ಟ್‌ ಅನುಮತಿ ಕೋರಿರುವ ಕೇಂದ್ರ ಸರ್ಕಾರದ ಕ್ರಮದ ಕುರಿತು ಪ್ರತಿಕ್ರಿಯಿಸಿದ ನಿತೀಶ್‌, ‘ಸುಪ್ರೀಂ ಕೋರ್ಟ್‌ ಎಂದಿಗೂ ಜಾತಿ ಗಣತಿ ತಡೆಹಿಡಿಯಲು ನಿರ್ದೇಶನ ನೀಡಿಲ್ಲ. ಬಿಹಾರ ಜಾತಿ ಸಮೀಕ್ಷೆಯ ಸಿಂಧುತ್ವ ಪ್ರಶ್ನಿಸಿ ಸಲ್ಲಿಸಿದ್ದ ಪಿಐಎಲ್‌ಗಳನ್ನು ಪಟ್ನಾ ಹೈಕೋರ್ಟ್ ವಜಾಗೊಳಿಸಿ, ರಾಜ್ಯ ಸರ್ಕಾರದ ಈ ಕ್ರಮವು ಸಂಪೂರ್ಣ ಸಮರ್ಥನೀಯ ಮತ್ತು ಕಾನೂನುಬದ್ಧ ಎಂದಿದೆ. ಇದಾದ ನಂತರ ರಾಜ್ಯ ಸರ್ಕಾರವು ಸಮೀಕ್ಷೆ ಪುನರಾರಂಭಿಸಿ, ಪೂರ್ಣಗೊಳಿಸಿತು’ ಎಂದರು.

ಹತ್ತುವರ್ಷಕ್ಕೊಮ್ಮೆ ನಡೆಯುವ ಜನಗಣತಿ ವಿಳಂಬವಾದರೂ ಕೇಂದ್ರ ಸರ್ಕಾರ ಏಕೆ ಇದರಲ್ಲಿ ಮೌನ ವಹಿಸುತ್ತಿದೆ. 2021ರ ವೇಳೆಗೆ ಗಣತಿ ಪೂರ್ಣವಾಗಬೇಕಿತ್ತು. ಈಗಾಗಲೇ ವಿಳಂಬವಾಗಿರುವ ದಶಮಾನದ ಗಣತಿ ಬಗ್ಗೆ ಬಿಜೆಪಿ ನಾಯಕರು ಏನನ್ನಾದರೂ ಹೇಳಬೇಕಲ್ಲವೇ ಎಂದು ನಿತೀಶ್‌ಕುಮಾರ್ ತಿರುಗೇಟು ನೀಡಿದ್ದಾರೆ.

‌ರಾಜ್ಯ ಸರ್ಕಾರದ ನಿರ್ಧಾರ ಎತ್ತಿ ಹಿಡಿದಿರುವ ಪಟ್ನಾ ಹೈಕೋರ್ಟ್ ಆದೇಶ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಗಳ ವಿಚಾರಣೆಯಲ್ಲಿ ಮಧ್ಯಪ್ರವೇಶಿಸಲು ಅನುಮತಿ ಕೋರಿ ಕೇಂದ್ರವು ಇತ್ತೀಚೆಗೆ ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT