ಬುಧವಾರ, 6 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Cauvery row: ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ ಮರು ಪರಿಶೀಲನಾ ಅರ್ಜಿ

Published 30 ಸೆಪ್ಟೆಂಬರ್ 2023, 16:28 IST
Last Updated 30 ಸೆಪ್ಟೆಂಬರ್ 2023, 16:28 IST
ಅಕ್ಷರ ಗಾತ್ರ

ನವದೆಹಲಿ: ಈಗಿನ ಸನ್ನಿವೇಶದಲ್ಲಿ ಪ್ರತಿದಿನ 3 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿರುವ ಕರ್ನಾಟಕ ಸರ್ಕಾರ, ಈ ಸಂಬಂಧ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ ಶನಿವಾರ ಮರು ಪರಿಶೀಲನಾ ಅರ್ಜಿ ಸಲ್ಲಿಸಿದೆ.

ತಮಿಳುನಾಡಿಗೆ ಆಕ್ಟೋಬರ್ 15ರ ವರೆಗೆ ಪ್ರತಿದಿನ 3 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡುವಂತೆ ಪ್ರಾಧಿಕಾರವು ಕರ್ನಾಟಕಕ್ಕೆ ಶುಕ್ರವಾರ ನಿರ್ದೇಶನ ನೀಡಿತ್ತು. ಇದರ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಿವೃತ್ತ ನ್ಯಾಯಮೂರ್ತಿಗಳು ಹಾಗೂ ಕಾನೂನು ತಜ್ಞರ ಜತೆಗೆ ಸಮಾಲೋಚನೆ ನಡೆಸಿದ್ದರು. ಪ್ರಾಧಿಕಾರಕ್ಕೆ ಮರು ಪರಿಶೀಲನಾ ಅರ್ಜಿ ಸಲ್ಲಿಸಲು ತೀರ್ಮಾನಿಸಲಾಗಿತ್ತು.

ರಾಜ್ಯದ ಕಾವೇರಿ ಕೊಳ್ಳದ ನಾಲ್ಕು ಜಲಾಶಯಗಳಲ್ಲಿ 49 ಟಿಎಂಸಿ ಅಡಿಯಷ್ಟು ಮಾತ್ರ ನೀರಿದೆ. ಈ ನೀರು ರಾಜ್ಯದ ಕುಡಿಯುವ ನೀರು ಹಾಗೂ ನೀರಾವರಿಗೆ ಸಾಲದು. ಇಂತಹ ಸನ್ನಿವೇಶದಲ್ಲಿ ಪ್ರಾಧಿಕಾರ ನೀಡಿರುವ ಆದೇಶ ಅವೈಜ್ಞಾನಿಕ. ಆದೇಶವನ್ನು ಮರುಪರಿಶೀಲಿಸಬೇಕು ಎಂದು ರಾಜ್ಯವು ಅರ್ಜಿಯಲ್ಲಿ ಕೋರಿದೆ.

ಈ ಎಲ್ಲ ಸಮಸ್ಯೆಗಳಿಗೆ ಮೇಕೆದಾಟು ಯೋಜನೆಯೇ ಪರಿಹಾರ. ಮಳೆಗಾಲದಲ್ಲಿ ಸಂಗ್ರಹವಾಗುವ ಹೆಚ್ಚುವರಿ ನೀರನ್ನು ಈ ಜಲಾಶಯದಲ್ಲಿ ಸಂಗ್ರಹಿಸಬಹುದು. ಸಂಕಷ್ಟದ ಸನ್ನಿವೇಶದಲ್ಲಿ ತಮಿಳುನಾಡಿಗೆ ಸಹ ನೀರು ಬಿಡುಗಡೆ ಮಾಡಬೇಕು. ಹೀಗಾಗಿ, ಈ ಯೋಜನೆಗೆ ತುರ್ತಾಗಿ ಅನುಮೋದನೆ ನೀಡಬೇಕು ಎಂದು ರಾಜ್ಯ ಒತ್ತಾಯಿಸಿದೆ.

ಮೇಕೆದಾಟು ಯೋಜನೆಯ ವಿಸ್ತೃತ ಯೋಜನಾ ವರದಿಯನ್ನು ಕೇಂದ್ರ ಜಲ ಆಯೋಗಕ್ಕೆ ರಾಜ್ಯ ಸರ್ಕಾರ 2019ರಲ್ಲೇ ಸಲ್ಲಿಸಿದೆ. ಈ ಯೋಜನೆಗೆ ಕಾವೇರಿ ಪ್ರಾಧಿಕಾರದಿಂದ ಒಪ್ಪಿಗೆ ಸಿಗಬೇಕಿದೆ. ಕಳೆದ ಒಂದೂವರೆ ವರ್ಷಗಳಲ್ಲಿ ಪ್ರಾಧಿಕಾರದ ಕಾರ್ಯಸೂಚಿಯಲ್ಲಿ ಮೇಕೆದಾಟು ಯೋಜನೆಯ ಪ್ರಸ್ತಾವ 13 ಸಲ ಸೇರ್ಪಡೆಯಾಗಿದೆ. ಆದರೆ, ಕೊನೆಯ ಕ್ಷಣದಲ್ಲಿ ಕಾರ್ಯಸೂಚಿಯಿಂದ ಕೈಬಿಡಲಾಗುತ್ತಿದೆ. ಪ್ರಾಧಿಕಾರದ ಮುಂದಿನ ಸಭೆಯಲ್ಲಿ ಮೇಕೆದಾಟು ವಿಷಯವನ್ನು ಕಾರ್ಯಸೂಚಿಯಲ್ಲಿ ಸೇರ್ಪಡೆ ಮಾಡಬೇಕು. ಜತೆಗೆ ಯೋಜನೆಗೆ ತುರ್ತಾಗಿ ಅನುಮೋದನೆ ನೀಡಬೇಕು ಎಂದು ರಾಜ್ಯ ಮನವಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT