ಬುಧವಾರ, 17 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪಾಸ್‌ಪೋರ್ಟ್ ಸೇವಾ ಕೇಂದ್ರದಲ್ಲಿ ಭ್ರಷ್ಟಾಚಾರ: ಇಬ್ಬರು ಆರೋಪಿಗಳ ಬಂಧಿಸಿದ CBI

Published 29 ಜೂನ್ 2024, 14:51 IST
Last Updated 29 ಜೂನ್ 2024, 14:51 IST
ಅಕ್ಷರ ಗಾತ್ರ

ನವದೆಹಲಿ: ಪಾಸ್‌ಪೋರ್ಟ್ ಸೇವಾ ಕೇಂದ್ರದಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ 33 ಕಡೆ ದಾಳಿ ನಡೆಸಿದ ಸಿಬಿಐ, 14 ಜನರ ವಿರುದ್ಧ ಪ್ರಕರಣ ದಾಖಲಿಸಿ ಇಬ್ಬರನ್ನು ಬಂಧಿಸಿದೆ. 

ಲೋಯರ್ ಪ್ಯಾರೆಲ್ ಹಾಗೂ ಮಲಾಡ್‌ನಲ್ಲಿರುವ ಸೇವಾ ಕೇಂದ್ರಗಳಲ್ಲಿನ ಅಧಿಕಾರಿಗಳು ಹಾಗೂ ಮಧ್ಯವರ್ತಿಗಳ ಜಾಲವು ಈ ಭ್ರಷ್ಟಾಚಾರದಲ್ಲಿ ತೊಡಗಿರುವುದನ್ನು ಪತ್ತೆ ಮಾಡಿರುವ ಸಿಬಿಐ ಅಧಿಕಾರಿಗಳು ಏಜೆಂಟರು ಹಾಗೂ ಮಧ್ಯವರ್ತಿಗಳ ಹೆಸರುಗಳನ್ನು ಎಫ್‌ಐಆರ್‌ನಲ್ಲಿ ಸೇರಿಸಿದೆ.

ಈ ಮಧ್ಯವರ್ತಿಗಳೊಂದಿಗೆ ನಿಕಟ ಸಂಪರ್ಕ ಹೊಂದಿರುವ ಅಧಿಕಾರಿಗಳು ಅಗತ್ಯ ದಾಖಲೆ ಇಲ್ಲದಿದ್ದರೂ, ಅವುಗಳನ್ನು ಪುರಸ್ಕರಿಸಿ ಪಾಸ್‌ಪೋರ್ಟ್ ನೀಡಿದ ಆರೋಪ ಹೊತ್ತಿದ್ದಾರೆ. ವಿದೇಶಾಂಗ ಸಚಿವಾಲಯದ ಗುಪ್ತಚರ ವಿಭಾಗವು ಜೂನ್ 26ರಂದು ದಿಢೀರ್ ದಾಳಿ ನಡೆಸಿದ ಸಂದರ್ಭದಲ್ಲಿ ಈ ಕೃತ್ಯ ಬಯಲಾಗಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ.

ಮೊಬೈಲ್ ಫೋನ್‌ಗಳು, ಸಾಮಾಜಿಕ ಜಾಲತಾಣಗಳಲ್ಲಿನ ಚಾಟ್‌ಗಳು ಹಾಗೂ ಯುಪಿಐ ಪಾವತಿ ಮೂಲಕ ಹಲವು ಲಕ್ಷಗಳ ವಹಿವಾಟು ನಡೆದಿರುವುದನ್ನು ಅಧಿಕಾರಿಗಳು ಪತ್ತೆ ಮಾಡಿದ್ದರು. ಹೀಗೆ ಭಾಗಿಯಾದವರಲ್ಲಿ ಹಿರಿಯ ಹಾಗೂ ಕಿರಿಯ ಪಾಸ್‌ಪೋರ್ಟ್ ಸಹಾಯಕರು ಸೇರಿದ್ದಾರೆ. ಇವರು ಏಜೆಂಟರೊಂದಿಗೆ ಕೈಜೋಡಿಸಿ ಅಕ್ರಮವಾಗಿ ಪಾಸ್‌ಪೋರ್ಟ್‌ ನೀಡುವ ಕೆಲಸ ಮಾಡುತ್ತಿದ್ದರು. ಇದಕ್ಕಾಗಿ ತಮ್ಮ ಕುಟುಂಬದ ಸದಸ್ಯರ ಬ್ಯಾಂಕ್ ಖಾತೆಗಳಿಗೆ ಹಣ ಹಾಕಿಸಿಕೊಳ್ಳುತ್ತಿದ್ದರು ಎಂದು ಸಿಬಿಐ ಅಧಿಕಾರಿಗಳು ಹೇಳಿದ್ದಾರೆ.

ಪ್ರಕರಣದಲ್ಲಿ ಭಾಗಿಯಾದವರ ವಿರುದ್ಧ ಕ್ರಮ ಕೈಗೊಳ್ಳಲು ವಿದೇಶಾಂಗ ಸಚಿವಾಲಯದಿಂದ ಅನುಮತಿ ದೊರೆತ ನಂತರ 12 ಜನರ ವಿರುದ್ಧ  ಸಿಬಿಐ ಎಫ್‌ಐಆರ್ ದಾಖಲಿಸಿತು.

ಪ್ರಕರಣ ಬೆಳಕಿಗೆ ಬಂದ ನಂತರ ಮುಂಬೈ ಹಾಗೂ ನಾಸಿಕ್‌ನಲ್ಲಿ ಸಿಬಿಐ ವ್ಯಾಪಕ ಶೋಧ ನಡೆಸಿತು. ಪ್ರಕರಣಕ್ಕೆ ಸಂಬಂಧಿಸಿದ ಡಿಜಿಟಲ್ ಸಾಧನಗಳು, ದಾಖಲೆ ಹಾಗೂ ಇನ್ನಿತರ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT