ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರಾಮೋಜಿ ಫಿಲ್ಮ್ ಸಿಟಿಯಲ್ಲಿ ಅವಘಡ: ಅಮೆರಿಕದ ಐ.ಟಿ ಕಂಪನಿ ಸಿಇಒ ಸಾವು

ರಾಮೋಜಿ ಫಿಲ್ಮ್ ಸಿಟಿಯಲ್ಲಿ ಅಮೆರಿಕ ಮೂಲದ ಸಾಫ್ಟ್‌ವೇರ್ ಕಂಪನಿಯೊಂದರ ಸಂಭ್ರಮಾಚರಣೆಯ ವೇಳೆ ನಡೆದ ಅವಘಡದಲ್ಲಿ ಕಂಪನಿಯ ಸಿಇಒ ಮೃತಪಟ್ಟಿದ್ದಾರೆ.
Published 20 ಜನವರಿ 2024, 16:31 IST
Last Updated 20 ಜನವರಿ 2024, 16:31 IST
ಅಕ್ಷರ ಗಾತ್ರ

ಹೈದರಾಬಾದ್‌: ಇಲ್ಲಿನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಅಮೆರಿಕ ಮೂಲದ ಸಾಫ್ಟ್‌ವೇರ್ ಕಂಪನಿಯೊಂದರ ಸಂಭ್ರಮಾಚರಣೆಯ ವೇಳೆ ನಡೆದ ಅವಘಡದಲ್ಲಿ ಕಂಪನಿಯ ಸಿಇಒ ಮೃತಪಟ್ಟಿದ್ದಾರೆ.

ವಿಸ್ಟೆಕ್ಸ್‌ನ ಸಂಸ್ಥಾಪಕ-ಸಿಇಒ ಸಂಜಯ್ ಶಾ (56) ಮೃತಪಟ್ಟವರು. ಕಂಪನಿಯ ಅಧ್ಯಕ್ಷ ವಿಶ್ವನಾಥ್‌ ರಾಜ್‌ ಅವರು ಗಾಯಗೊಂಡಿದ್ದು, ಸ್ಥಿತಿ ಗಂಭೀರವಾಗಿದೆ.  

ಕಂಪನಿಯ ಕಾರ್ಯನಿರ್ವಾಹಕ ನಿರ್ದೇಶಕರು ನೀಡಿದ ದೂರು ಆಧರಿಸಿ ಫಿಲ್ಮ್ ಸಿಟಿ ಈವೆಂಟ್ ಮ್ಯಾನೇಜ್‌ಮೆಂಟ್ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.

ಜನವರಿ 18 ಮತ್ತು 19 ರಂದು ಫಿಲ್ಮ್ ಸಿಟಿಯಲ್ಲಿ ಬೆಳ್ಳಿಹಬ್ಬದ ಆಚರಣೆಯನ್ನು ಕಂಪನಿ ಆಯೋಜಿಸಿತ್ತು. ಗುರುವಾರ ಸಂಜೆ 7.40ರ ಸುಮಾರಿಗೆ ಅವಘಡ ಸಂಭವಿಸಿದಾಗ ಕಂಪನಿಯ 680 ಉದ್ಯೋಗಿಗಳು ಸಮಾರಂಭದಲ್ಲಿ ಹಾಜರಿದ್ದರು. ಸಂಭ್ರಮಾಚರಣೆ ವೇಳೆ ಸಂಜಯ್ ಶಾ ಮತ್ತು ವಿಶ್ವನಾಥ್ ರಾಜ್ ಅವರು ಎತ್ತರದಿಂದ ಕೆಳಗಿಳಿಸಬೇಕಿದ್ದ ಕಬ್ಬಿಣದ ಪಂಜರ ಪ್ರವೇಶಿಸಿದಾಗ ಅದಕ್ಕೆ ಜೋಡಿಸಿದ್ದ ಕಬ್ಬಿಣದ ಸರಪಳಿ ಒಂದು ಬದಿ ತುಂಡಾಗಿ, ಇಬ್ಬರೂ ಬಿದ್ದಿದ್ದಾರೆ. ಇಬ್ಬರನ್ನೂ ನಗರದ ಮಲಕಪೇಟೆಯಲ್ಲಿರುವ ಕಾರ್ಪೊರೇಟ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ವಿಸ್ಟೆಕ್ಸ್, ಬಹುರಾಷ್ಟ್ರೀಯ ಸಾಫ್ಟ್‌ವೇರ್ ಕಂಪನಿ. ಜಗತ್ತಿನಾದ್ಯಂತ 20 ಕಚೇರಿಗಳನ್ನು ಹೊಂದಿದೆ. ಎರಡು ಸಾವಿರಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿದೆ ಎನ್ನುವ ವಿವರ ಕಂಪನಿಯ ವೆಬ್‌ಸೈಟ್‌ನಲ್ಲಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT