ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹5 ಸಾವಿರ ಕೋಟಿ ಹೆಚ್ಚುವರಿ ಸಾಲ: ಕೇರಳಕ್ಕೆ ಅನುಮತಿ ನೀಡಲು ಸಿದ್ಧ– ಕೇಂದ್ರ

ಸುಪ್ರೀಂ ಕೋರ್ಟ್‌ಗೆ ಮಾಹಿತಿ ನೀಡಿದ ಕೇಂದ್ರ ಸರ್ಕಾರ
Published 13 ಮಾರ್ಚ್ 2024, 16:20 IST
Last Updated 13 ಮಾರ್ಚ್ 2024, 16:20 IST
ಅಕ್ಷರ ಗಾತ್ರ

ನವದೆಹಲಿ: ಕೆಲವು ನಿಬಂಧನೆಗಳಿಗೆ ಒಳಪಟ್ಟಂತೆ, ₹5 ಸಾವಿರ ಕೋಟಿ ಸಾಲ ಪಡೆಯಲು ಕೇರಳ ಸರ್ಕಾರಕ್ಕೆ ಅನುಮತಿ ನೀಡಲು ಸಿದ್ಧ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಬುಧವಾರ ತಿಳಿಸಿದೆ.

2023–24ನೇ ಹಣಕಾಸು ವರ್ಷಕ್ಕೆ ಸಂಬಂಧಿಸಿ, ಹೆಚ್ಚುವರಿ ಸಾಲ ಪಡೆಯುವುದಕ್ಕೆ ಕೇರಳಕ್ಕೆ ಅನುಮತಿ ನೀಡುವುದು ವಿವೇಕಯುತವಾದ ಅಥವಾ ರಾಜ್ಯ ಸರ್ಕಾರದ ಹಿತದೃಷ್ಟಿಯಿಂದ ಸರಿಯಾದ ಕ್ರಮವೂ ಅಲ್ಲ ಎಂದೂ ಕೇಂದ್ರ ಸರ್ಕಾರ ತಿಳಿಸಿದೆ.

ನ್ಯಾಯಮೂರ್ತಿಗಳಾದ ಸೂರ್ಯಕಾಂತ ಹಾಗೂ ಕೆ.ವಿ.ವಿಶ್ವನಾಥನ್ ಅವರಿದ್ದ ನ್ಯಾಯಪೀಠ ಅರ್ಜಿ ವಿಚಾರಣೆ ನಡೆಸಿತು.

‘ಕೇಂದ್ರವು ತಿಳಿಸಿರುವಂತೆ, ₹5 ಸಾವಿರ ಕೋಟಿ ಸಾಲ ಯಾವುದಕ್ಕೂ ಸಾಲುವುದಿಲ್ಲ. ಕನಿಷ್ಠ ₹10 ಸಾವಿರ ಕೋಟಿ ಅಗತ್ಯವಿದೆ’ ಎಂದು ಕೇರಳ ಪರ ಹಾಜರಿದ್ದ ಹಿರಿಯ ವಕೀಲ ಕಪಿಲ್‌ ಸಿಬಲ್‌, ನ್ಯಾಯಪೀಠಕ್ಕೆ ತಿಳಿಸಿದರು.

ಕೇಂದ್ರ ಸರ್ಕಾರದ ಪರ ಹಾಜರಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎನ್‌.ವೆಂಕಟರಮಣ್‌, ‘ಸುಪ್ರೀಂ ಕೋರ್ಟ್‌ ಸಲಹೆಯಂತೆ ₹5 ಸಾವಿರ ಕೋಟಿ ಸಾಲ ಪಡೆಯುವುದಕ್ಕೆ ಕೇರಳ ಸರ್ಕಾರಕ್ಕೆ ಅನುಮತಿ ನೀಡಲು ಕೇಂದ್ರ ಸಿದ್ಧವಿದೆ’ ಎಂದು ತಿಳಿಸಿದರು.

‘ಕೇಂದ್ರದ ಈ ನಿರ್ಧಾರ ವಿಶೇಷ ಮತ್ತು ಅಸಾಧಾರಣ ಕ್ರಮವಾಗಿದೆ. ಹಣಕಾಸು ವರ್ಷದ ಅಂತ್ಯ ಸಮೀಪಿಸುತ್ತಿರುವ ಸಂದರ್ಭದಲ್ಲಿ ಪಿಂಚಣಿ, ನೌಕರರ ವೇತನ ಹಾಗೂ ಇತರ ಅಗತ್ಯ ವೆಚ್ಚಗಳನ್ನು ಪೂರೈಸುವುದಕ್ಕಾಗಿ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ಕೇರಳಕ್ಕೆ ನೆರವಿನ ಹಸ್ತ ಚಾಚುವುದಕ್ಕೆ ಕೇಂದ್ರ ಈ ನಿರ್ಧಾರ ಕೈಗೊಂಡಿದೆ’ ಎಂದೂ ತಿಳಿಸಿದರು.

ಎರಡೂ ಕಡೆಯವರ ವಾದ ಆಲಿಸಿದ ನ್ಯಾಯಪೀಠ, ವಿಚಾರಣೆಯನ್ನು ಮಾ.21ಕ್ಕೆ ಮುಂದೂಡಿತು.

ಕೇಂದ್ರ ಸರ್ಕಾರವು ಅಗತ್ಯ ನಿಧಿ ಬಿಡುಗಡೆ ಮಾಡುತ್ತಿಲ್ಲ ಎಂದು ಆರೋಪಿಸಿ ಕೇರಳ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT