ಶನಿವಾರ, 12 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

‘ಹಿಂದುತ್ವ ವಾಚ್‌’ ತಡೆಹಿಡಿದಿದ್ದು ಅತಿಯಾದ ಕ್ರಮ: ‘ಎಕ್ಸ್‌’

Published : 30 ಸೆಪ್ಟೆಂಬರ್ 2024, 12:46 IST
Last Updated : 30 ಸೆಪ್ಟೆಂಬರ್ 2024, 12:46 IST
ಫಾಲೋ ಮಾಡಿ
Comments

ನವದೆಹಲಿ: ನಿಂದನಾತ್ಮಕ ಎನ್ನಲಾದ ಕೆಲವು ಪೋಸ್ಟ್‌ಗಳನ್ನು ಆಧಾರವಾಗಿ ಇಟ್ಟುಕೊಂಡು, ‘ಹಿಂದುತ್ವ ವಾಚ್‌’ನ ಸಾಮಾಜಿಕ ಜಾಲತಾಣ ಖಾತೆಯನ್ನು ಸಂಪೂರ್ಣವಾಗಿ ತಡೆಹಿಡಿಯಲು ಕೇಂದ್ರ ಸರ್ಕಾರ ತೀರ್ಮಾನಿಸಿರುವುದು ‘ಬಹಳ ತೀವ್ರವಾದ’ ಕ್ರಮ ಎಂದು ಸಾಮಾಜಿಕ ಜಾಲತಾಣ ಕಂಪನಿ ಎಕ್ಸ್‌ ಹೇಳಿದೆ.

ಕೇಂದ್ರದ ತೀರ್ಮಾನವು ಕಾನೂನಿಗೆ ವಿರುದ್ಧ ಕೂಡ ಹೌದು ಎಂದು ಕಂಪನಿಯು ದೆಹಲಿ ಹೈಕೋರ್ಟ್‌ಗೆ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ಹೇಳಿದೆ. ‘ಹಿಂದುತ್ವ ವಾಚ್‌’ನ ಸಾಮಾಜಿಕ ಜಾಲತಾಣ ಖಾತೆಯನ್ನು ತಡೆಹಿಡಿಯಲು ಕೇಂದ್ರ ಸರ್ಕಾರ ಹೊರಡಿಸಿದ ಆದೇಶದಲ್ಲಿ ಕಾರಣಗಳನ್ನು ದಾಖಲಿಸಿಲ್ಲ ಎಂದು ಕೂಡ ಎಕ್ಸ್‌ ಹೇಳಿದೆ.

ಕೇಂದ್ರ ಸರ್ಕಾರವು ಅಗತ್ಯ ಮಾಹಿತಿಯನ್ನು ‘ಹಿಂದುತ್ವ ವಾಚ್‌’ಗೆ ತಿಳಿಸದೆ ಇರುವುದರಿಂದಾಗಿ, ಸಂಬಂಧಪಟ್ಟವರಿಗೆ ತಮ್ಮ ವಾದ ಮಂಡಿಸಲು ಅವಕಾಶ ಇರಬೇಕು ಎಂಬ ಮಾತು ಅರ್ಥಹೀನವಾಗಿದೆ. ‘ಹಿಂದುತ್ವ ವಾಚ್‌’ಗೆ ತನ್ನ ವಿರುದ್ಧ ಇರುವ ಪುರಾವೆಗಳು ಏನು ಎಂಬುದು ಗೊತ್ತಿಲ್ಲ, ಅದಕ್ಕೆ ಆ ಪುರಾವೆಗಳನ್ನು ಸಮರ್ಪಕವಾಗಿ ಅಲ್ಲಗಳೆಯಲು ಸಾಧ್ಯವಾಗುತ್ತಿಲ್ಲ ಎಂದು ಕೂಡ ಎಕ್ಸ್‌ ಹೇಳಿದೆ.

‘ಹಿಂದುತ್ವ ವಾಚ್‌’ನ ಸಂಸ್ಥಾಪಕ, ಪತ್ರಕರ್ತ ರಕೀಬ್ ಹಮೀದ್ ಅವರು ಮಾಹಿತಿ ತಂತ್ರಜ್ಞಾನ ಕಾಯ್ದೆಯ ಅಡಿಯಲ್ಲಿ ಕೇಂದ್ರವು ಹೊರಡಿಸಿರುವ ಆದೇಶವನ್ನು ‍ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ದೆಹಲಿ ಹೈಕೋರ್ಟ್ ನಡೆಸುತ್ತಿದೆ. 

@HindutvaWatchIn ಎಕ್ಸ್‌ ಖಾತೆಯನ್ನು ಸಂಪೂರ್ಣವಾಗಿ ತಡೆಹಿಡಿಯಬೇಕು ಎಂದು ಕೇಂದ್ರವು ಆದೇಶದಲ್ಲಿ ಹೇಳಿದೆ.

ಭಾರತದ ಧಾರ್ಮಿಕ ಅಲ್ಪಸಂಖ್ಯಾತರು ಹಾಗೂ ಶೋಷಣೆಗೆ ಗುರಿಯಾದ ಸಮುದಾಯಗಳ ವಿರುದ್ಧದ ದ್ವೇಷ ಭಾಷಣಗಳನ್ನು, ದ್ವೇಷದ ಆಧಾರದಲ್ಲಿ ಅವರನ್ನು ಗುರಿಯಾಗಿಸಿಕೊಂಡ ಅಪರಾಧ ಚಟುವಟಿಕೆಗಳನ್ನು ದಾಖಲಿಸುವ ಕೆಲಸವನ್ನು ತಾನು ಮಾಡುತ್ತಿರುವುದಾಗಿ ‘ಹಿಂದುತ್ವ ವಾಚ್’ ಹೇಳಿಕೊಂಡಿದೆ. ಇದರ ಎಕ್ಸ್ ಖಾತೆಯನ್ನು ಕೇಂದ್ರವು ಜನವರಿಯಲ್ಲಿ ತಡೆಹಿಡಿದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT