ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಭಾರತದಲ್ಲಿ ಮೊದಲ ಬೇಟೆಯಾಡಿದ ನಮೀಬಿಯಾ ಚೀತಾಗಳು

Published : 7 ನವೆಂಬರ್ 2022, 11:22 IST
ಫಾಲೋ ಮಾಡಿ
Comments

ಶಯೋಪುರ (ಮಧ್ಯಪ್ರದೇಶ): ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನದಲ್ಲಿ ಕ್ವಾರಂಟೈನ್‌ ವಾಸ ಪೂರ್ಣಗೊಳಿಸಿದ ಎರಡು ಗಂಡು ಚೀತಾಗಳನ್ನು ಶನಿವಾರ ವಿಶಾಲ ಅರಣ್ಯಕ್ಕೆ ಸೇರಿಸಿದ 24 ತಾಸುಗಳೊಳಗೆ ಅವು ಮೊದಲ ಬೇಟೆಯಾಡಿವೆ ಎಂದುಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.

ಈ ಚೀತಾಗಳನ್ನು ನಮೀಬಿಯಾದಿಂದ ತರಲಾಗಿತ್ತು. ಇಲ್ಲಿನ ವಿಶಾಲ ಕಾಡಿಗೆ ಒಗ್ಗಿಕೊಂಡು ಸ್ವತಂತ್ರ ಜೀವನ ಆರಂಭಿಸಿರುವ ಚೀತಾಗಳುಆಹಾರಕ್ಕಾಗಿ ಮೊದಲ ಬಾರಿಗೆ ಚುಕ್ಕೆ ಜಿಂಕೆಯನ್ನು (ಚೀತಾಲ್‌– ಸ್ಪಾಟೆಡ್‌ ಡೀರ್‌) ಬೇಟೆಯಾಡಿವೆ. ಭಾನುವಾರ ರಾತ್ರಿ ಇಲ್ಲವೇ ಸೋಮವಾರ ನಸುಕಿನಲ್ಲಿ ಚೀತಾಗಳು ಬೇಟೆಯಾಡಿವೆ. ಈ ಮಾಹಿತಿಅರಣ್ಯ ನಿಗಾ ತಂಡಕ್ಕೆ ಬೆಳಿಗ್ಗೆ ಸಿಕ್ಕಿದೆ ಎಂದು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಸಿಸಿಎಫ್‌) ಉತ್ತಮ್‌ ಕುಮಾರ್‌ ಶರ್ಮಾ ತಿಳಿಸಿದ್ದಾರೆ.

ಭಾರತದಲ್ಲಿ ಏಳು ದಶಕಗಳ ಹಿಂದೆಯೇ ಚೀತಾಗಳ ಸಂತತಿ ನಿರ್ನಾಮವಾಗಿವೆ.ಭಾರತದಲ್ಲಿ ಕೊನೆಯ ಚೀತಾ 1947ರಲ್ಲಿ ಈಗಿನ ಛತ್ತೀಸಗಡದ ಕೊರಿಯಾ ಜಿಲ್ಲೆಯಲ್ಲಿ ಮೃತಪಟ್ಟಿತ್ತು.ಈ ಪ್ರಭೇದವನ್ನು 1952ರಲ್ಲಿ ಅಳಿವಿನಂಚಿನಲ್ಲಿದೆ ಎಂಬುದಾಗಿ ಘೋಷಿಸಲಾಗಿತ್ತು.

ದೇಶದಲ್ಲಿ ಚೀತಾಗಳ ಸಂತತಿ ಬೆಳೆಸುವ ಉದ್ದೇಶದಿಂದ ‘ಚೀತಾ ಯೋಜನೆ’ ಅಡಿ ಸೆಪ್ಟೆಂಬರ್‌ ಮಧ್ಯದ ಅವಧಿಯಲ್ಲಿ ದೇಶಕ್ಕೆ ಮೂರು ಗಂಡು ಮತ್ತು ಐದು ಹೆಣ್ಣು ಚೀತಾಗಳನ್ನು ತರಲಾಗಿದೆ.

‘ಫ್ರೆಡ್ಡಿ ಮತ್ತು ಆಲ್ಟನ್ ಚೀತಾಗಳು ಸೆಪ್ಟೆಂಬರ್ 17ರಿಂದ ಕ್ವಾರಂಟೈನ್‌ ಅವಧಿ ಪೂರ್ಣಗೊಳಿಸಿ ಶನಿವಾರ ವಿಶಾಲ ಅರಣ್ಯ ಸೇರಿದ ಮೊದಲ ಜೋಡಿ ಎನಿಸಿವೆ. ವಿಶಾಲ ಅರಣ್ಯ ಸೇರಿದ 24 ಗಂಟೆಗಳ ಒಳಗೆ ಚೀತಾಗಳು ಯಶಸ್ವಿಯಾಗಿ ಮೊದಲ ಬೇಟೆ ನಡೆಸಿ, ಅವುಗಳ ಶಿಕಾರಿ ಸಾಮರ್ಥ್ಯವನ್ನು ಸಾಬೀತುಪಡಿಸಿವೆ. ಚೀತಾಗಳು ಬೇಟೆಯಾಡಿದ ಎರಡು ತಾಸುಗಳ ಒಳಗೆ ತಮ್ಮ ಬೇಟೆಯನ್ನು ತಿಂದು ಮುಗಿಸುತ್ತವೆ’ ಎಂದು ಶರ್ಮಾ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT