ಕವರ್ಧಾ: ಛತ್ತೀಸಗಢದ ಉಪಮುಖ್ಯಮಂತ್ರಿ ಅರುಣ್ ಸಾವೋ ಅವರ ಸೋದರಳಿಯ, ರಾಣಿ ದಹರಾ ಜಲಾಶಯದಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.
‘ಬಿಜೆಪಿ ಯುವ ಘಟಕದ ಪದಾಧಿಕಾರಿ ತುಷಾರ್ ಸಾಹು (21) ಭಾನುವಾರ ಸಂಜೆ 4 ಗಂಟೆ ಸುಮಾರಿಗೆ ತನ್ನ ಐವರು ಸ್ನೇಹಿತರೊಂದಿಗೆ ಕಬೀರಧಾಮ ಜಿಲ್ಲೆಯ ರಾಣಿ ದಹರಾ ಜಲಾಶಯಕ್ಕೆ ತೆರಳಿದ್ದರು. ಅಲ್ಲಿ ಮುಳುಗಿ ಮೃತಪಟ್ಟಿದ್ದಾರೆ’ ಎಂದು ಕಬೀರಧಾಮ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ವಿಕಾಸ್ ಕುಮಾರ್ ತಿಳಿಸಿದ್ದಾರೆ.
‘ಸಾಹು ಅವರ ಪತ್ತೆಗಾಗಿ ಪೊಲೀಸರು ಭಾನುವಾರ ತಡರಾತ್ರಿಯವರೆಗೆ ಕಾರ್ಯಚರಣೆ ನಡೆಸಿದ್ದು, ಸೋಮವಾರ ಬೆಳ್ಳಿಗೆ 6.30ರ ಸುಮಾರಿಗೆ ಬಂಡೆಯಾಡಿ ಸಿಲುಕಿದ್ದ ಮೃತದೇಹವನ್ನು ಹೊರತೆಗೆಯಲಾಗಿದೆ’ ಎಂದು ಅವರು ಹೇಳಿದ್ದಾರೆ.
ನೀರಿನಲ್ಲಿ ಮುಳುಗಿ ಮೃತಪಟ್ಟಿರುವುದಾಗಿ ಪ್ರಕರಣ ದಾಖಲಿಸಿಕೊಂಡಿದ್ದು, ಘಟನೆಗೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದರು.