ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇರಳದ ದೇಗುಲದಲ್ಲಿ ಕೋಳಿ ‘ಪ್ರಸಾದ’

Published 21 ಏಪ್ರಿಲ್ 2024, 16:03 IST
Last Updated 21 ಏಪ್ರಿಲ್ 2024, 16:03 IST
ಅಕ್ಷರ ಗಾತ್ರ

ಕಣ್ಣೂರು (ಕೇರಳ): ಕೇರಳದ ಕಣ್ಣೂರು ಜಿಲ್ಲೆಯ ಪಯ್ಯನೂರು ಬಳಿ ಇರುವ ಶ್ರೀ ತಿರುವರ್ಕಾಟ್ಟು ಕಾವು ಭಗವತಿ ದೇವಸ್ಥಾನದಲ್ಲಿ ಭಕ್ತರಿಗೆ ‘ಪ್ರಸಾದ’ವಾಗಿ ಕೋಳಿ ಮಾಂಸದ ಖಾದ್ಯಗಳನ್ನು ವಿತರಿಸುವುದು ರೂಢಿಯಲ್ಲಿದೆ.

ವಿರೋಧ ಪಕ್ಷಗಳ ಕೆಲ ನಾಯಕರು ಹಿಂದೂಗಳ ಹಬ್ಬಗಳ ಸಂದರ್ಭದಲ್ಲಿ ಮಾಂಸಾಹಾರವನ್ನು ಸೇವಿಸುವ ಮೂಲಕ ಹಿಂದೂಗಳ ಭಾವನೆಗಳಿಗೆ ಧಕ್ಕೆ ತರುತ್ತಿದ್ದಾರೆ ಎಂದು ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಟೀಕಿಸಿದ್ದು ಸದ್ದು ಮಾಡಿತ್ತು. ಆದರೆ, ಕೇರಳದ ಈ ದೇವಸ್ಥಾನದಲ್ಲಿ, ದೇವಿಯ ಭಕ್ತರಿಗೆ ಪ್ರಸಾದವಾಗಿ ಚಿಕನ್‌ ಖಾದ್ಯಗಳನ್ನು ವಿತರಿಸಲಾಗುತ್ತಿದ್ದು, ಇದಕ್ಕೆ ಯಾವ ದೂರು–ಆಕ್ಷೇಪಗಳೂ ವ್ಯಕ್ತವಾಗುತ್ತಿಲ್ಲ.

ಮಾಂಸಾಹಾರ ಕುರಿತು ಮೋದಿ ಅವರು ಹೇಳಿಕೆ ನೀಡಿದ ನಂತರ ಈ ದೇವಸ್ಥಾನದಲ್ಲಿನ ಸಂಪ್ರದಾಯ ಹೆಚ್ಚು ಗಮನ ಸೆಳೆಯುತ್ತಿದೆ.

ಈ ದೇವಸ್ಥಾನಕ್ಕೆ ಭೇಟಿ ನೀಡುವಂತೆ ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಅವರು ಮೋದಿ ಅವರನ್ನು ಒತ್ತಾಯಿಸಿದ್ದಾರೆ.

ಗಮನಾರ್ಹ ಸಂಗತಿ ಎಂದರೆ, ಬಿಜೆಪಿಯ ನಾಯಕ ಬಿ.ಎಸ್‌.ಯಡಿಯೂರಪ್ಪ ಈ ದೇವಸ್ಥಾನದ ಭಕ್ತರಾಗಿದ್ದಾರೆ. ಆಗಾಗ್ಗೆ ಈ ದೇವಸ್ಥಾನಕ್ಕೆ ಭೇಟಿ ನೀಡುವ ಯಡಿಯೂರಪ್ಪ, ಭಕ್ತರ ಅನುಕೂಲಕ್ಕಾಗಿ ಭೋಜನಶಾಲೆಯೊಂದನ್ನು ನಿರ್ಮಿಸಿಕೊಟ್ಟಿದ್ದಾರೆ.

‘ಅಮೃತದಾಯನಿ ಊಟುಪುರ ಎಂದು ಕರೆಯಲಾಗುವ ಈ ಕಟ್ಟಡವನ್ನು ಸ್ವತಃ ಯಡಿಯೂರಪ್ಪ ಅವರು 2009ರ ಡಿಸೆಂಬರ್ 26ರಂದು ಉದ್ಘಾಟಿಸಿದ್ದಾರೆ. 2016ರಲ್ಲಿ ಅವರು ದೇಗುಲಕ್ಕೆ ಭೇಟಿ ನೀಡಿದ್ದರು’ ಎಂದು ದೇವಸ್ಥಾನದ ಅಧಿಕಾರಿಗಳು ಹೇಳುತ್ತಾರೆ.

‘ಅನೇಕ ವರ್ಷಗಳ ಹಿಂದೆ ಈ ದೇವಸ್ಥಾನದಲ್ಲಿ ಪ್ರಾಣಿ ಬಲಿ ಪದ್ಧತಿಯೂ ಇತ್ತು. ಈ ಪದ್ಧತಿ ಮೇಲೆ ನಿಷೇಧ ಹೇರಿದ ನಂತರ ಆ ಸಂಪ್ರದಾಯಕ್ಕೆ ಕೊನೆ ಹಾಡಲಾಗಿದೆ. ಆದರೆ, ಈಗಲೂ ದೇವಸ್ಥಾನದಲ್ಲಿ ಕೋಳಿ ಅಡುಗೆ ತಯಾರಿಸಿ, ನಿತ್ಯವೂ ದೇವಿಗೆ ಅರ್ಪಿಸಿ, ನಂತರ ಭಕ್ತರಿಗೆ ವಿತರಿಸಲಾಗುತ್ತದೆ’ ಎಂದೂ ಹೇಳುತ್ತಾರೆ.

ಕೇರಳದ ಉತ್ತರದಲ್ಲಿರುವ ಎಲ್ಲ ಭದ್ರಕಾಳಿ ದೇವಸ್ಥಾನಗಳ ತಾಯಿ ಎಂದು ಈ ದೇಗುಲವನ್ನು ಪರಿಗಣಿಸಲಾಗುತ್ತದೆ. ರಾಜಕಾರಣಿಗಳು, ವಿವಿಧ ಕ್ಷೇತ್ರಗಳ ಗಣ್ಯರಲ್ಲದೇ, ರಾಜ್ಯ ಬಿಜೆಪಿಯ ಅನೇಕ ನಾಯಕರು ಕೂಡ ಈ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ.

ಈ ಭಾಗದಲ್ಲಿರುವ ಕನಿಷ್ಠ ಇತರ ಮೂರು ದೇವಸ್ಥಾನಗಳಲ್ಲಿ ಸಹ ಭಕ್ತರಿಗೆ ಪ್ರಸಾದ ರೂಪದಲ್ಲಿ ಕೋಳಿ ಖಾದ್ಯಗಳನ್ನು ವಿತರಿಸುತ್ತಿರುವುದು ಗಮನಾರ್ಹ.

ಭಕ್ತರೊಬ್ಬರು ಪ್ರಸಾದವಾಗಿ ನೀಡಿರುವ ಚಿಕನ್‌ ಖಾದ್ಯವನ್ನು ಸೇವಿಸುತ್ತಿರುವುದು 
ಭಕ್ತರೊಬ್ಬರು ಪ್ರಸಾದವಾಗಿ ನೀಡಿರುವ ಚಿಕನ್‌ ಖಾದ್ಯವನ್ನು ಸೇವಿಸುತ್ತಿರುವುದು 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT