ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪಾಕ್‌ ಶಕ್ತಿವೃದ್ಧಿಗೆ ಚೀನಾ ನೆರವು

ಎಲ್‌ಒಸಿ ಉದ್ದಕ್ಕೂ ಕಾರ್ಯಾಚರಣೆ: ಸಂವಹನ ಸುಧಾರಣೆಗೆ ಭೂಗತ ಕೇಬಲ್, ಟವರ್‌ ಅಳವಡಿಕೆ: ಅಧಿಕಾರಿಗಳ ಹೇಳಿಕೆ
Published 29 ಮೇ 2024, 23:44 IST
Last Updated 29 ಮೇ 2024, 23:44 IST
ಅಕ್ಷರ ಗಾತ್ರ

ಕುಪ್ವಾರ (ಜಮ್ಮು–ಕಾಶ್ಮೀರ): ಜಮ್ಮು–ಕಾಶ್ಮೀರಕ್ಕೆ ಹೊಂದಿಕೊಂಡಿರುವ ಗಡಿ ನಿಯಂತ್ರಣ ರೇಖೆಯ (ಎಲ್‌ಒಸಿ) ಉದ್ದಕ್ಕೂ ಪಾಕಿಸ್ತಾನ ಸೇನೆಯ ರಕ್ಷಣಾ ಸಾಮರ್ಥ್ಯವನ್ನು ಹೆಚ್ಚಿಸುವುದಕ್ಕೆ ಅದರ ಮಿತ್ರ ರಾಷ್ಟ್ರ ಚೀನಾ ನೆರವು ನೀಡುತ್ತಿದೆ ಎಂದು ಅಧಿಕಾರಿಗಳು ಬುಧವಾರ ಹೇಳಿದ್ದಾರೆ.

‘ಕಳೆದ ಮೂರು ವರ್ಷಗಳಿಂದ ಪಾಕಿಸ್ತಾನಕ್ಕೆ ಚೀನಾ ನೆರವು ನೀಡುತ್ತಿದೆ. ಉಕ್ಕು ಬಳಸಿ ಬಂಕರ್‌ಗಳ ನಿರ್ಮಾಣ, ಡ್ರೋನ್‌ಗಳು, ಯುದ್ಧವಿಮಾನಗಳು ಸೇರಿದಂತೆ ಹಲವು ರೀತಿಯ ನೆರವು ನೀಡುತ್ತಿದೆ’ ಎಂದು ಅಧಿಕಾರಿಗಳು ಹೇಳಿದ್ದಾರೆ.

ಚೀನಾ ನೀಡುತ್ತಿರುವ ನೆರವು ಕೇವಲ ಶಸ್ತ್ರಾಸ್ತ್ರ ಒದಗಿಸುವುದು, ಬಂಕರ್‌ಗಳ ನಿರ್ಮಾಣಕ್ಕೆ ಸೀಮಿತವಾಗಿಲ್ಲ. ಸಂವಹನದಲ್ಲಿ ಗರಿಷ್ಠ ಸುರಕ್ಷತೆಯನ್ನು ಖಾತ್ರಿಪಡಿಸಲು ಟವರ್‌ಗಳು ಹಾಗೂ ಭೂಗತ ಕೇಬಲ್‌ಗಳನ್ನು ಎಲ್‌ಒಸಿಯ ಉದ್ದಕ್ಕೂ ಅಳವಡಿಸುವ ಕಾರ್ಯದಲ್ಲೂ ಚೀನಾ ನೆರವು ನೀಡುತ್ತಿದೆ ಎಂದು ಹೇಳಿದ್ದಾರೆ.

‘ಜೆವೈ’ ಹಾಗೂ ‘ಎಚ್‌ಜಿಆರ್‌’ ಸರಣಿಯ ಅತ್ಯಾಧುನಿಕ ರೇಡಾರ್‌ ವ್ಯವಸ್ಥೆ ಯನ್ನು ಪಾಕಿಸ್ತಾನ ಸೇನೆ ಗಡಿ ನಿಯಂತ್ರಣ ರೇಖೆ ಬಳಿ ಅಳವಡಿಸಿದೆ. ಇವುಗಳನ್ನು ಚೀನಾದಲ್ಲಿಯೇ ತಯಾರಿಸಲಾಗಿದೆ. ಟ್ರಕ್‌ನಲ್ಲಿ ಅಳವಡಿಸಿರುವ 155 ಎಂಎಂ ಹೊವಿಟ್ಜರ್‌ ಫಿರಂಗಿಯನ್ನು (ಎಸ್‌ಎಚ್‌–15) ಗಡಿಯಲ್ಲಿ ನಿಯೋಜನೆ ಮಾಡಿರುವುದನ್ನು ಗುರುತಿಸಲಾಗಿದೆ’ ಎಂದು ಅಧಿಕಾರಿಗಳು ಹೇಳಿದ್ದಾರೆ.

ಪಾಕಿಸ್ತಾನದೊಂದಿಗಿನ ತನ್ನ ದ್ವಿಪಕ್ಷೀಯ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸುವುದು, ಚೀನಾ–ಪಾಕಿಸ್ತಾನ ಆರ್ಥಿಕ ಕಾರಿಡಾರ್‌ (ಸಿಪಿಇಸಿ) ಸೇರಿದಂತೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿನ ತನ್ನ ಹೂಡಿಕೆಗಳನ್ನು ರಕ್ಷಿಸುವ ಭಾಗವಾಗಿ ಚೀನಾ ಈ ನೆರವು ನೀಡುತ್ತಿದೆ’ ಎಂದು ಅಧಿಕಾರಿಗಳು ವಿಶ್ಲೇಷಿಸಿದ್ದಾರೆ.

ಪಾಕ್‌ನಲ್ಲಿ ಚೀನಾ ಚಟುವಟಿಕೆಗಳು

  • 2007ರಲ್ಲಿ ಪಾಕಿಸ್ತಾನ ಟೆಲಿಕಾಂ ಕಂಪನಿಯನ್ನು ಚೀನಾ ಕಂಪನಿ ಸ್ವಾಧೀನಪಡಿಸಿಕೊಂಡು, ‘ಚೀನಾ ಮೊಬೈಲ್‌ ಪಾಕಿಸ್ತಾನ’ (ಸಿಎಂಪಾಕ್‌) ಎಂಬ ಸಂಸ್ಥೆಯನ್ನು ರಚಿಸಲಾಗಿತ್ತು. ಇದು ಚೀನಾ ಮೊಬೈಲ್‌ ಕಮ್ಯುನಿಕೇಷನ್ಸ್‌ ಕಾರ್ಪೋರೇಷನ್‌ನ ಸಂಪೂರ್ಣ ಒಡೆತನದಲ್ಲಿದೆ

  • ಪಾಕಿಸ್ತಾನ ಆಕ್ರಮಿತ ಕಾಶ್ಮೀರದ (ಪಿಒಕೆ) ಲೀಪಾ ಕಣಿವೆಯಲ್ಲಿ ಸುರಂಗ ಮಾರ್ಗ ನಿರ್ಮಾಣದಲ್ಲಿ ಚೀನಾ ತಜ್ಞರು ನಿರತರಾಗಿದ್ದರು

  • ಸಿಪಿಇಸಿ ಭಾಗವಾಗಿ ಗ್ವಾದರ್‌ ಬಂದರು ಮತ್ತು ಚೀನಾದ ಷಿನ್‌ಜಿಯಾಂಗ್ ಪ್ರಾಂತ್ಯ ಸಂಪರ್ಕಿಸುವ ಹೆದ್ದಾರಿ ನಿರ್ಮಾಣಕ್ಕೆ ಕ್ರಮ

‘ಗಡಿಯಲ್ಲಿನ ಬೆಳವಣಿಗೆ ಮೇಲೆ ನಿಗಾ’

‘ಚೀನಾ ಮತ್ತು ಭಾರತದ ನಡುವೆ ಸಂಘರ್ಷ ಇನ್ನೂ ಶಮನಗೊಂಡಿಲ್ಲ. ಆದರೂ ಗಡಿ ನಿಯಂತ್ರಣ ರೇಖೆಗುಂಟ ಕಂಡುಬಂದಿರುವ ಬೆಳವಣಿಗೆಗಳನ್ನು ಭಾರತ ಸೂಕ್ಷ್ಮವಾಗಿ ಗಮನಿಸುತ್ತಿದ್ದು ಗಡಿಯಲ್ಲಿನ ಸಂಭಾವ್ಯ ಬೆದರಿಕೆಗಳನ್ನು ಮಟ್ಟ ಹಾಕಲು ಸನ್ನದ್ಧವಾಗಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭಾರತೀಯ ಸೇನೆ ಈ ವಿಚಾರವಾಗಿ ಯಾವುದೇ ಪ್ರತಿಕ್ರಿಯೆ ನೀಡದಿದ್ದರೂ ಗುಪ್ತಚರ ಸಂಸ್ಥೆಗಳಿಗೆ ಮಾತ್ರ ಈ ಬೆಳವಣಿಗೆಗಳ ಕುರಿತ ಮಾಹಿತಿಯನ್ನು ಒದಗಿಸಲಾಗುತ್ತಿದೆ ಎಂದು ಮೂಲಗಳು ಹೇಳಿವೆ. ಈ ಪ್ರದೇಶದಲ್ಲಿ ಚೀನಾ ಸೇನೆಯು ಸಕ್ರಿಯವಾಗಿರುವ ಕುರಿತು ಈ ಹಿಂದೆಯೂ ಹಲವಾರು ಭಾರಿ ಭಾರತ ತನ್ನ ಆತಂಕವನ್ನು ವ್ಯಕ್ತಪಡಿಸಿದೆ. ಅದರಲ್ಲೂ ಗಿಲ್ಗಿಟ್‌ ಮತ್ತು ಬಾಲ್ಟಿಸ್ತಾನ ಪ್ರದೇಶಗಳಲ್ಲಿ ಚೀನಾ ಸೇನೆಯ ಚಟುವಟಿಕೆಗಳ ಕುರಿತು ಭಾರತ ಬಲವಾದ ಆಕ್ಷೇಪ ವ್ಯಕ್ತಪಡಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT