ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೇಮಕಾತಿ ಅಕ್ರಮ: ಪಶ್ಚಿಮ ಬಂಗಾಳ ಸಚಿವ, ಟಿಎಂಸಿ ನಾಯಕರ ಮನೆ ಮೇಲೆ ಇ.ಡಿ ದಾಳಿ

Published 12 ಜನವರಿ 2024, 4:19 IST
Last Updated 12 ಜನವರಿ 2024, 4:19 IST
ಅಕ್ಷರ ಗಾತ್ರ

ಕೋಲ್ಕತ್ತ: ಸ್ಥಳೀಯ ಸಂಸ್ಥೆಗಳಲ್ಲಿನ ನೇಮಕಾತಿಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು (ಇ.ಡಿ) ಪಶ್ಚಿಮ ಬಂಗಾಳದ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಸಚಿವ ಸುಜಿತ್ ಬೋಸ್, ಟಿಎಂಸಿ ಶಾಸಕ ತಪಸ್ ರಾಯ್ ಮತ್ತು ಟಿಎಂಸಿ ಮುಖಂಡರೊಬ್ಬರ ಮನೆಗಳಲ್ಲಿ ಶುಕ್ರವಾರ ಶೋಧ ನಡೆಸಿತು. 

ಬೆಳಿಗ್ಗೆ 7 ಗಂಟೆಯಿಂದಲೇ ಶೋಧ ಕಾರ್ಯಾಚರಣೆ ಕೈಗೊಳ್ಳಲಾಯಿತು. ಸಚಿವ ಬೋಸ್ ನಿವಾಸಕ್ಕೆ ಬಂದಾಗ ಮೊದಲಿಗೆ ಪ್ರತಿರೋಧ ವ್ಯಕ್ತವಾಯಿತು. ಸುಮಾರು 40 ನಿಮಿಷ ಮಾತುಕತೆ ನಡೆಸಿ ಮನವೊಲಿಸಲಾಯಿತು ಎಂದು ಇ.ಡಿ ಮೂಲಗಳು ತಿಳಿಸಿವೆ. 

ಕಳೆದ ವಾರ ಉತ್ತರ 24 ಪರಗಣ ಜಿಲ್ಲೆಯಲ್ಲಿ ಇ.ಡಿ ಅಧಿಕಾರಿಗಳ ಮೇಲೆ ಹಲ್ಲೆ ನಡೆದ ಹಿನ್ನೆಲೆಯಲ್ಲಿ ಕೇಂದ್ರ ಪೊಲೀಸ್ ಸಿಬ್ಬಂದಿ ಬೋಸ್ ನಿವಾಸದ ಬಳಿ ಪಕ್ಷದ ಕಾರ್ಯಕರ್ತರು ಮತ್ತು ಅವರ ಬೆಂಬಲಿಗರು ಸುಳಿಯದಂತೆ ಭಾರಿ ಕಟ್ಟೆಚ್ಚರ ವಹಿಸಿದ್ದರು. 

ಪಕ್ಷದ ಮುಖಂಡರ ಮನೆಗಳ ಮೇಲಿನ ಈ ದಾಳಿಯು ಲೋಕಸಭೆ ಚುನಾವಣೆಗೂ ಮುನ್ನ ಬಿಜೆಪಿಯ ಸೇಡಿನ ರಾಜಕೀಯ ಮತ್ತು ಕುಟಿಲ ತಂತ್ರವಾಗಿದೆ ಎಂದು ಟಿಎಂಸಿ ಆರೋಪಿಸಿದೆ. ಆದರೆ, ಈ ಆರೋಪವು ನಿರಾಧಾರ ಎಂದು ಪಶ್ಚಿಮ ಬಂಗಾಳದ ಬಿಜೆಪಿ ಘಟಕ ಹೇಳಿದೆ. 

ಬಂಧನ: ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯಲ್ಲಿ ಕಳೆದ ವಾರ ಇ.ಡಿ ಅಧಿಕಾರಿಗಳ ಮೇಲೆ ನಡೆದಿದ್ದ ಹಲ್ಲೆ ಪ್ರಕರಣ ಸಂಬಂಧ ಇಬ್ಬರನ್ನು ಶುಕ್ರವಾರ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.  

‘ಮೆಹಬೂಬ್ ಮೊಲ್ಲಾ ಮತ್ತು ಸುಖೊಮಲ್ ಸರ್ದಾರ್ ಬಂಧಿತ ಆರೋಪಿಗಳು. ಹಲವು ವಿಡಿಯೊ ದಾಖಲಾತಿಗಳನ್ನು ಆಧರಿಸಿ, ಇಬ್ಬರು ಆರೋಪಿಗಳನ್ನು ಬಂಧಿಸಿದ್ದೇವೆ.  ಇವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ಮೂರು ದಿನಗಳ ಕಾಲ ಪೊಲೀಸರ ವಶಕ್ಕೆ ನೀಡಲಾಗಿದೆ.’ ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ. 

ಜನವರಿ 5ರಂದು ಉತ್ತರ 24 ಪರಗಣ ಜಿಲ್ಲೆಯಲ್ಲಿ ಟಿಎಂಸಿ ಮುಖಂಡ ಶಹಜಹಾನ್ ಶೇಖ್ ಅವರ ನಿವಾಸದ ಮೇಲೆ ನಡೆದ ಇ.ಡಿ ದಾಳಿ ವೇಳೆ ಮೂವರು ಅಧಿಕಾರಿಗಳ ಮೇಲೆ ಗುಂಪೊಂದು ಹಲ್ಲೆ ನಡೆಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT