ಪೋರ್‌ಬಂದರ್: ಭಾರತೀಯ ಕರಾವಳಿ ಪಡೆಯ ಸುಧಾರಿತ ಲಘು ಹೆಲಿಕಾಪ್ಟರ್ ಗುಜರಾತ್‌ನ ಪೋರ್‌ಬಂದರ್ ಕರಾವಳಿಯ ಅರಬ್ಬೀ ಸಮುದ್ರದಲ್ಲಿ ಪತನಗೊಂಡಿದ್ದು ಮೂವರು ಸಿಬ್ಬಂದಿ ನಾಪತ್ತೆಯಾಗಿದ್ದಾರೆ.
ಹೆಲಿಕಾಪ್ಟರ್‌ನಲ್ಲಿ ನಾಲ್ವರು ಸಿಬ್ಬಂದಿಯಿದ್ದರು. ಒಬ್ಬರನ್ನು ರಕ್ಷಿಸಲಾಗಿದ್ದು, ಉಳಿದವರಿಗಾಗಿ ಶೋಧ ನಡೆಸಲಾಗುತ್ತಿದೆ ಎಂದು ಭಾರತೀಯ ಕರಾವಳಿ ಪಡೆ ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿದೆ.
ಭಾರತದ ಮೋಟಾರ್ ಟ್ಯಾಂಕರ್ ‘ಹರಿ ಲೀಲಾ’ದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಸಿಬ್ಬಂದಿಯನ್ನು ರಕ್ಷಿಸಲು ಸೋಮವಾರ ರಾತ್ರಿ 11 ಗಂಟೆಗೆ ಹೆಲಿಕಾಪ್ಟರ್ ಅನ್ನು ನಿಯೋಜಿಸಲಾಗಿತ್ತು. ಆದರೆ ಅದೇ ಹೆಲಿಕಾಪ್ಟರ್ ಅನ್ನು ಸಮುದ್ರದಲ್ಲಿ ತುರ್ತು ಸ್ಪರ್ಶ ಮಾಡಬೇಕಾಯಿತು. ಈ ವೇಳೆ ಹೆಲಿಕಾಪ್ಟರ್ ಪತನಗೊಂಡಿದೆ. ಹೆಲಿಕಾಪ್ಟರ್ ಅವಶೇಷಗಳನ್ನು ಪತ್ತೆ ಮಾಡಲಾಗಿದೆ. ನಾಪತ್ತೆಯಾದ ಸಿಬ್ಬಂದಿ ಪತ್ತೆಗೆ ನಾಲ್ಕು ಹಡಗು, ಎರಡು ವಿಮಾನಗಳು ಕಾರ್ಯಾಚರಣೆ ನಡೆಸುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.