ಭಾನುವಾರ, 14 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಪಾಳಮೋಕ್ಷ ಮಾಡಿದ್ದಕ್ಕೆ ಪ್ರಾಂಶುಪಾಲರ ಮೇಲೆ ಗುಂಡು ಹಾರಿಸಿದ ವಿದ್ಯಾರ್ಥಿ

Last Updated 24 ಸೆಪ್ಟೆಂಬರ್ 2022, 15:31 IST
ಅಕ್ಷರ ಗಾತ್ರ

ಲಖನೌ: ಕಪಾಳಮೋಕ್ಷ ಮಾಡಿದರೆಂದು ಸಿಟ್ಟಾದ ದ್ವಿತೀಯ ಪಿಯುಸಿ ವಿದ್ಯಾರ್ಥಿಯೊಬ್ಬ ಕಾಲೇಜಿನ ಪ್ರಾಂಶುಪಾಲರ ಮೇಲೆ ಶನಿವಾರ ಗುಂಡು ಹಾರಿಸಿ ಪರಾರಿಯಾಗಿದ್ದಾನೆ.

ಉತ್ತರ ಪ್ರದೇಶದ ಬಾರಾಬಂಕಿ ಜಿಲ್ಲೆಯಲ್ಲಿ ಘಟನೆ ನಡೆದಿದ್ದು, ಪ್ರಾಂಶುಪಾಲ ರಾಮ್‌ಸಿಂಗ್‌ ವರ್ಮಾ ಅವರ ಸ್ಥಿತಿ ಗಂಭೀರವಾಗಿದೆ.

‘ರೇವಾನ್‌ ನಿವಾಸಿಯಾಗಿರುವ ವಿದ್ಯಾರ್ಥಿಯು ಆಸನದ ವಿಚಾರವಾಗಿ ಶುಕ್ರವಾರಸಹಪಾಠಿ ಜೊತೆ ಜಗಳ ಮಾಡಿಕೊಂಡಿದ್ದ. ಆತನನ್ನು ಕೊಠಡಿಗೆ ಕರೆಸಿದ್ದ ಪ್ರಾಂಶುಪಾಲರು ಬುದ್ಧಿವಾದ ಹೇಳಲು ಮುಂದಾಗಿದ್ದರು. ಈ ವೇಳೆ ಆತ ತನ್ನ ವರ್ತನೆ ಸಮರ್ಥಿಸಿಕೊಳ್ಳಲು ಪ್ರಯತ್ನಿಸಿದ್ದ. ಆಗ ಕಪಾಳಕ್ಕೆ ಹೊಡೆದಿದ್ದರು. ಮರು ಮಾತನಾಡದೆ ಅಲ್ಲಿಂದ ಮನೆಗೆ ತೆರಳಿದ್ದ ಆತ ಶನಿವಾರ ಬೆಳಿಗ್ಗೆಪಿಸ್ತೂಲ್‌ನೊಂದಿಗೆ ಕಾಲೇಜಿಗೆ ಬಂದಿದ್ದ’ ಎಂದು ಪೊಲೀಸರು ತಿಳಿಸಿದ್ದಾರೆ.

‘ಕಾಲೇಜಿನ ಹೊರಗೆ ನಿರ್ಮಾಣ ಮಾಡಲಾಗುತ್ತಿರುವ ಮಳಿಗೆಗಳನ್ನುರಾಮ್‌ಸಿಂಗ್‌ ಪರಿಶೀಲಿಸುತ್ತಿದ್ದರು. ಈ ವೇಳೆ ವಿದ್ಯಾರ್ಥಿಯು ಅವರೆಡೆ ಮೂರು ಸುತ್ತು ಗುಂಡು ಹಾರಿಸಿದ್ದ. ಅವು ರಾಮ್‌ಸಿಂಗ್‌ ತಲೆ, ಹೊಟ್ಟೆ ಹಾಗೂ ತೊಡೆಗೆ ತಗುಲಿದ್ದವು. ಗುಂಡಿನ ಸದ್ದು ಕೇಳಿದೊಡನೆ ಕಾಲೇಜಿನ ಇತರ ಸಿಬ್ಬಂದಿ ಹೊರಗೆ ಬಂದಿದ್ದರು. ಅವರನ್ನು ಕಂಡೊಡನೆ ವಿದ್ಯಾರ್ಥಿಯು ಅಲ್ಲಿಂದ ಪರಾರಿಯಾಗಿದ್ದ’ ಎಂದು ಮೂಲಗಳು ತಿಳಿಸಿವೆ.

‘ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದೇವೆ. ವಿದ್ಯಾರ್ಥಿಯ ಪತ್ತೆಗೆ ತಂಡ ರಚಿಸಲಾಗಿದೆ’ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಆತ ಪಿಸ್ತೂಲ್‌ ಎಲ್ಲಿಂದ ತಂದ ಎಂಬುದು ಗೊತ್ತಿಲ್ಲ ಎಂದು ವಿದ್ಯಾರ್ಥಿಯ ಕುಟುಂಬದವರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT