ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಮಲ್‌ನಾಥ್‌ ಭಾರತ ಜೋಡೊ ನ್ಯಾಯ ಯಾತ್ರೆಯಲ್ಲಿ ಭಾಗವಹಿಸುತ್ತಾರೆ: ಕಾಂಗ್ರೆಸ್‌

Published 19 ಫೆಬ್ರುವರಿ 2024, 15:38 IST
Last Updated 19 ಫೆಬ್ರುವರಿ 2024, 15:38 IST
ಅಕ್ಷರ ಗಾತ್ರ

ನವದೆಹಲಿ: ಮಧ್ಯಪ್ರದೇಶ ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್‌ ಹಿರಿಯ ನಾಯಕ ಕಮಲ್‌ನಾಥ್‌ ಬಿಜೆಪಿಗೆ ಸೇರ್ಪಡೆಗೊಳ್ಳುತ್ತಾರೆ ಎಂಬ ವದಂತಿಯನ್ನು ತಳ್ಳಿ ಹಾಕಿರುವ ಕಾಂಗ್ರೆಸ್‌, ರಾಹುಲ್ ಗಾಂಧಿ ನೇತೃತ್ವದ ಭಾರತ ಜೋಡೊ ನ್ಯಾಯ ಯಾತ್ರೆಯಲ್ಲಿ ಅವರು ಭಾಗವಹಿಸಲಿದ್ದಾರೆ ಎಂದು ತಿಳಿಸಿದೆ.

ಕಮಲ್‌ನಾಥ್‌ ಮತ್ತು ಪುತ್ರ ಸಂಸದ ನಕುಲ್‌ ನಾಥ್‌ ಅವರೊಂದಿಗೆ ಆಡಳಿತಾರೂಢ ಬಿಜೆಪಿಯನ್ನು ಸೇರುತ್ತಾರೆ ಎಂಬ ಊಹಾಪೋಹಗಳ ಬೆನ್ನಲ್ಲೇ ಮಧ್ಯಪ್ರದೇಶ ಕಾಂಗ್ರೆಸ್‌ ಉಸ್ತುವಾರಿ ಪ್ರಧಾನ ಕಾರ್ಯದರ್ಶಿ ಜೀತೇಂದ್ರ ಸಿಂಗ್‌ ಈ ಹೇಳಿಕೆ ನೀಡಿದ್ದಾರೆ.

ನಗರದ ಕಾಂಗ್ರೆಸ್‌ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕಮಲ್‌ನಾಥ್‌ ಅವರು ನಮ್ಮ ಪಕ್ಷದ ಹಿರಿಯ ನಾಯಕರಾಗಿದ್ದಾರೆ. ಈ ಎಲ್ಲಾ ಊಹಾಪೋಹಗಳನ್ನು ಬಿಜೆಪಿ ಹಾಗೂ ಮಾಧ್ಯಮಗಳು ಮಾಡುತ್ತಿವೆ. ನಾನು ಅವರೊಂದಿಗೆ ನಿನ್ನೆ ಹಾಗೂ ಮೊನ್ನೆ ಮಾತನಾಡಿದ್ದೇನೆ. ಜತೆಗೆ ಭಾರತ ಜೋಡೊ ನ್ಯಾಯ ಯಾತ್ರೆಯ ತಯಾರಿ ಕುರಿತು ಚರ್ಚಿಸಿದ್ದೇವೆ’ ಎಂದು ತಿಳಿಸಿದ್ದಾರೆ.

ನಾನು ನಾಳೆ ಭೋಪಾಲ್‌ಗೆ ತೆರಳಲಿದ್ದೇನೆ. ಶಾಸಕರು, ಸಂಸದರೊಂದಿಗೆ ನಾಳೆ ಸಭೆ ನಡೆಯಲಿದೆ. ಕಮಲ್‌ನಾಥ್‌ ಅವರು ಕೂಡ ನಮ್ಮೊಂದಿಗೆ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಯಾತ್ರೆ ಕುರಿತಂತೆ ಅವರ ಸಲಹೆಗಳನ್ನು ಪ್ರಮುಖವಾಗಿ ಪರಿಗಣಿಸಲಾಗುತ್ತದೆ. ಜತೆಗೆ ಮಧ್ಯಪ್ರದೇಶದ ನ್ಯಾಯ ಯಾತ್ರೆಯಲ್ಲಿ ಕಮಲ್‌ನಾಥ್‌ ಅವರು ಭಾಗವಹಿಸಲಿದ್ದಾರೆ ಎಂದು ಸಿಂಗ್‌ ಹೇಳಿದ್ದಾರೆ.

ಕಮಲ್‌ನಾಥ್‌ ಅವರು ಪುತ್ರ ಹಾಗೂ ಸಂಸದ ನಕುಲ್‌ ನಾಥ್‌ ಅವರೊಂದಿಗೆ ಬಿಜೆಪಿಗೆ ಸೇರ್ಪಡೆಗೊಳ್ಳುತ್ತಾರೆ ಎಂಬುವುದರ ಕುರಿತು ಮಾತನಾಡಿದ ಅವರು, ‘ಈ ಎಲ್ಲಾ ವದಂತಿಗಳು ಸುಳ್ಳು ಸುದ್ದಿ ಮತ್ತು ತಪ್ಪು ಮಾಹಿತಿಯನ್ನು ನೀಡುವ ಬಿಜೆಪಿಯ ಪ್ರಯತ್ನವಾಗಿದೆ’ ಎಂದು ಕಿಡಿಕಾರಿದ್ದಾರೆ.

ಮುಂದಿನ ತಿಂಗಳು ಭಾರತ ಜೋಡೊ ನ್ಯಾಯ ಯಾತ್ರೆ ಮಧ್ಯಪ್ರದೇಶವನ್ನು ಪ್ರವೇಶಿಸಿದಾಗ ಕಮಲ್‌ನಾಥ್‌ ಶೇ 100ರಷ್ಟು ಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ. ಯಾತ್ರೆಗೆ ಸಂಬಂಧಿಸಿದ ತಯಾರಿಗಳು ನಡೆಯುತ್ತಿವೆ ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT