ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

G20 Summit | ‘ಭಾರತ ಮಂಟಪಂ’ನಲ್ಲಿ ನೀರು: ವಿಡಿಯೊ ಹಂಚಿಕೊಂಡ ಕಾಂಗ್ರೆಸ್ 

Published 10 ಸೆಪ್ಟೆಂಬರ್ 2023, 23:30 IST
Last Updated 10 ಸೆಪ್ಟೆಂಬರ್ 2023, 23:30 IST
ಅಕ್ಷರ ಗಾತ್ರ

ನವದೆಹಲಿ: ಜಿ20 ಶೃಂಗಸಭೆಗೆ ವೇದಿಕೆಯಾಗಿದ್ದ ‘ಭಾರತ ಮಂಟಪಂ’ನಲ್ಲಿ ಮಳೆ ನೀರು ನಿಂತಿರುವ ವಿಡಿಯೊವನ್ನು ಭಾನುವಾರ ‘ಎಕ್ಸ್‌’ನಲ್ಲಿ ಕಾಂಗ್ರೆಸ್ ಹಂಚಿಕೊಂಡಿದೆ. ಇದು ಮೋದಿ ಸರ್ಕಾರದ ‘ಟೊಳ್ಳು ಅಭಿವೃದ್ಧಿ’ಯನ್ನು ಬಹಿರಂಗಪಡಿಸಿದೆ ಎಂದು ಟೀಕಿಸಿದೆ. 

‘ಭಾರತ ಮಂಟಪ ಸಿದ್ಧಪಡಿಸಲು ₹ 2,700 ಕೋಟಿ ಖರ್ಚು ಮಾಡಲಾಗಿದೆ. ಅದು ಒಂದೇ ಮಳೆಗೆ ಕೊಚ್ಚಿಹೋಗಿದೆ’ ಎಂದು  ಹೇಳಿದೆ.

ಪಕ್ಷದ ವಕ್ತಾರೆ ಸುಪ್ರಿಯಾ ಶ್ರಿನಾಟೆ, ‘ಯಂತ್ರಗಳಿಂದ ನೀರನ್ನು ಹೊರ ಹಾಕುವ ಪ್ರಯತ್ನಗಳು ನಡೆಯುತ್ತಿವೆ. ಇಷ್ಟೊಂದು ಹಣವನ್ನು ಕದ್ದು ಕಳಪೆ ಕೆಲಸ ಮಾಡಿದ ಭ್ರಷ್ಟರು ಯಾರು’ ಎಂದು ಪ್ರಶ್ನಿಸಿದ್ದಾರೆ.

ರಾಜಸ್ಥಾನದ ಟೊಂಕ್ ಜಿಲ್ಲೆಯಲ್ಲಿ ಮಾತನಾಡಿದ ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರಾ, ‘ದೇಶದ ಜನರು ಭಯದಿಂದ ಹೇಳಲು ಸಾಧ್ಯವಾಗದಿರುವುದನ್ನು ದೇವರು ಹೇಳಿದ್ದಾನೆ. ನಿಮ್ಮ ಅಹಂ ಕಡಿಮೆ ಮಾಡಿ, ದೇಶವು ನಿಮ್ಮನ್ನು ನಾಯಕನನ್ನಾಗಿ ಮಾಡಿದೆ, ಜನರೇ ಸರ್ವೋಚ್ಚ ನಾಯಕರು ’ ಎಂದು ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.

ದೆಹಲಿಯಲ್ಲಿ ಶನಿವಾರ ಸುರಿದ ಮಳೆಯಿಂದಾಗಿ, ಶೃಂಗಸಭೆ ವೇಳೆ ವಿವಿಐಪಿ ಸಂಚಾರಕ್ಕೆ ನಿಗದಿಪಡಿಸಿದ ರಸ್ತೆಗಳಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಲು ಲೋಕೋಪಯೋಗಿ ಮತ್ತು ನವದೆಹಲಿ ಮುನ್ಸಿಪಲ್‌ ಕೌನ್ಸಿಲ್‌ (ಎನ್‌ಡಿಎಂಸಿ) ತಂಡಗಳು ರಾತ್ರಿಯಿಡೀ ಕೆಲಸ ಮಾಡಿವೆ.

ಎನ್‌ಡಿಎಂಸಿ ಉಪಾಧ್ಯಕ್ಷ ಸತೀಶ್ ಉಪಾಧ್ಯಾಯ, ಶನಿವಾರ ರಾತ್ರಿಯಿಡೀ ಧಾರಾಕಾರ ಮಳೆಯಾಗಿದ್ದು, ಗಣ್ಯರು ಸಂಚರಿಸುವ ಪ್ರಮುಖ ರಸ್ತೆಗಳಲ್ಲಿ ನೀರು ನಿಲ್ಲುವುದನ್ನು ತಡೆಯಲು ಸಾವಿರಕ್ಕೂ ಹೆಚ್ಚು ಜನರು ದಣಿವರಿಯದೆ ಕೆಲಸ ಮಾಡಿದ್ದಾರೆ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT