ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೃಷಿ ಹಮಾನ ಘಟಕ ಸ್ಥಗಿತ: ನೀತಿ ಆಯೋಗಕ್ಕೆ ಕಾಂಗ್ರೆಸ್‌ ತರಾಟೆ

Published : 3 ಆಗಸ್ಟ್ 2024, 14:36 IST
Last Updated : 3 ಆಗಸ್ಟ್ 2024, 14:36 IST
ಫಾಲೋ ಮಾಡಿ
Comments

ನವದೆಹಲಿ: ಬ್ಲಾಕ್ ಮಟ್ಟದಲ್ಲಿ ರೈತರಿಗೆ ಹವಾಮಾನ ಸೇವೆಗಳನ್ನು ನೀಡುತ್ತಿದ್ದ 199 ಜಿಲ್ಲಾ ಕೃಷಿ-ಹವಾಮಾನ ಘಟಕಗಳನ್ನು ಸ್ಥಗಿತಗೊಳಿಸಿದ ನಿರ್ಧಾರ ಸಮರ್ಥಿಸಿಕೊಂಡಿರುವ ನೀತಿ ಆಯೋಗದ ವಿರುದ್ಧ ಕಾಂಗ್ರೆಸ್‌ ಶನಿವಾರ ಕಿಡಿಕಾರಿದೆ. 

ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಂ ರಮೇಶ್‌ ಅವರು ‘ಎಕ್ಸ್‌’ನಲ್ಲಿ ಮಾಧ್ಯಮ ವರದಿಯೊಂದನ್ನು ಹಂಚಿಕೊಂಡಿದ್ದು, ಸರಿಯಾಗಿ ಕಾರ್ಯನಿರ್ವಹಿಸದ ಕಾರಣ ನೀಡಿ,  ಈ ವರ್ಷದ ಮಾರ್ಚ್‌ನಲ್ಲಿ ನೀತಿ ಆಯೋಗವು ಕೃಷಿ ಹವಾಮಾನ ಸಲಹಾ ಕಚೇರಿಗಳನ್ನು ಮುಚ್ಚಿಸಿದೆ ಮತ್ತು ಖಾಸಗೀಕರಣಕ್ಕೆ ಪ್ರಯತ್ನಿಸಿದೆ ಎಂದು ಆರೋಪಿಸಿದ್ದಾರೆ.

ಭಾರತೀಯ ಹವಾಮಾನ ಇಲಾಖೆಯು 199 ಜಿಲ್ಲಾ ಕೃಷಿ ಹವಾಮಾನ ಘಟಕಗಳನ್ನು ಮುಚ್ಚಿದೆ. ಈ ಘಟಕಗಳು ಎಲ್ಲ ರೈತರಿಗೆ ಬ್ಲಾಕ್‌ ಮಟ್ಟದಲ್ಲಿ ಉಚಿತವಾಗಿ ಬಿತ್ತನೆ, ರಸಗೊಬ್ಬರಗಳ ಬಳಕೆ, ಕೊಯ್ಲು ಮತ್ತು ದಾಸ್ತಾನು ಹಾಗೂ ಇನ್ನಿತರ ಕೃಷಿಗೆ ಸಂಬಂಧಿಸಿದ ಮಾಹಿತಿಯನ್ನು ಒದಗಿಸುತ್ತಿದ್ದವು ಎಂದು ಅವರು ಹೇಳಿದ್ದಾರೆ.

ಪ್ರತಿ ವರ್ಷ ಈ ಘಟಕಗಳಿಗೆ ಸುಮಾರು ₹45 ಕೋಟಿ ವೆಚ್ಚ ಮಾಡಿದ್ದರೆ, ಇವುಗಳಿಂದ ಆದ ಲಾಭ ಸುಮಾರು ₹15,000 ಕೋಟಿ ಎನ್ನುವುದು ತಜ್ಞರ ಲೆಕ್ಕಾಚಾರ. ಈ ಘಟಕಗಳನ್ನು ಸ್ಥಗಿತಗೊಳಿಸಿರುವ ನಿರ್ಧಾರವನ್ನು ಕೇಂದ್ರ ಸಚಿವ ನಿತಿನ್ ಗಡ್ಕರಿ ಮತ್ತು ಗುಜರಾತ್‌ನ ಕೃಷಿ ಪವನಶಾಸ್ತ್ರಜ್ಞರ ಸಂಘ ಸೇರಿ ಹಲವಾರು ಪ್ರಮುಖ ಭಾಗಿದಾರರು ವಿರೋಧಿಸಿದ್ದಾರೆ ಎಂದು ಅವರು ಗಮನ ಸೆಳೆದಿದ್ದಾರೆ. 

‘ಜಿಲ್ಲಾ ಕೃಷಿ–ಹವಾಮಾನ ಘಟಕಗಳ ಸೇವೆಗಳನ್ನು ಖಾಸಗೀಕರಣಗೊಳಿಸಲು ಮತ್ತು ಇದರಿಂದ ಹಣ ಗಳಿಸಲು ನೀತಿ ಆಯೋಗವು ಸೂಚಿಸಿದೆ ಎನ್ನುವುದನ್ನು ಮಾಹಿತಿ ಹಕ್ಕಿನಡಿ ಪಡೆದಿರುವ ದಾಖಲೆಗಳು ಬಹಿರಂಗಪಡಿಸಿವೆ. ವಾಸ್ತವವಾಗಿ, ನೀತಿ ಆಯೋಗವು ತನ್ನ ನಿರ್ಧಾರ ಸಮರ್ಥಿಸಿಕೊಳ್ಳಲು ಅವುಗಳು ಸರಿಯಾಗಿ ಕಾರ್ಯ ನಿರ್ವಹಿಸುತ್ತಿರಲಿಲ್ಲ ಎನ್ನುವ ಸಬೂಬು ನೀಡಿದೆ. ಅಲ್ಲದೆ, ದತ್ತಾಂಶವು ಈಗ ಸ್ವಯಂಚಾಲಿತವಾಗಿರುವುದರಿಂದ ಕೃಷಿ ಹವಾಮಾನ ಘಟಕಗಳನ್ನು ಸ್ಥಗಿತಗೊಳಿಸಿರುವುದಾಗಿ ವಾದಿಸಿದೆ’ ಎಂದು ಅವರು ಟೀಕಿಸಿದ್ದಾರೆ.

‘ಆದರೆ, ನೀತಿ ಆಯೋಗದ ವಾದ ಸುಳ್ಳು. ರಸಗೊಬ್ಬರ ಬಳಕೆ ಸೇರಿದಂತೆ ಹವಾಮಾನಕ್ಕೆ ಸಂಬಂಧಿಸಿ ಕೇಂದ್ರದಿಂದ ಬರುತ್ತಿದ್ದ ಮಾಹಿತಿಯನ್ನು ಈ ಘಟಕಗಳು ಸ್ಥಳೀಯವಾಗಿ ಒದಗಿಸುತ್ತಿದ್ದವು’ ಎಂದು ಅವರು ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT