ಶುಕ್ರವಾರ, 19 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಭಾರತದ ಸಂಸ್ಕೃತಿಗೆ ಜಾಗತಿಕ ಮನ್ನಣೆ: ಪ್ರಧಾನಿ ಮೋದಿ

‘ಮನ್‌ ಕಿ ಬಾತ್’: ಪ್ರಜಾಪ್ರಭುತ್ವದಲ್ಲಿ ನಂಬಿಕೆಯಿಟ್ಟವರಿಗೆ ಪ್ರಧಾನಿ ಮೋದಿ ಕೃತಜ್ಞತೆ
Published 30 ಜೂನ್ 2024, 15:37 IST
Last Updated 30 ಜೂನ್ 2024, 15:37 IST
ಅಕ್ಷರ ಗಾತ್ರ

ನವದೆಹಲಿ: ಪ್ರಧಾನಿಯಾಗಿ ಮೂರನೇ ಅವಧಿಗೆ ಅಧಿಕಾರ ವಹಿಸಿಕೊಂಡ ಬಳಿಕ ಭಾನುವಾರ ತಮ್ಮ ಮೊದಲ ‘ಮನ್‌ ಕಿ ಬಾತ್‌’ (ಮನದ ಮಾತು) ತಿಂಗಳ ರೇಡಿಯೊ ಕಾರ್ಯಕ್ರಮದಲ್ಲಿ ಮಾತನಾಡಿದ ನರೇಂದ್ರ ಮೋದಿ ಅವರು, ಸಂವಿಧಾನ ಮತ್ತು ಪ್ರಜಾಪ್ರಭುತ್ವದಲ್ಲಿ ನಂಬಿಕೆಯಿರಿಸಿದ ದೇಶದ ಜನರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ತಮ್ಮ ಹಕ್ಕು ಚಲಾಯಿಸಿದ ಸಮಾರು 65 ಕೋಟಿ ಮತದಾರರು ಮತ್ತು ವಿಶ್ವದ ಅತಿದೊಡ್ಡ ಮತದಾನ ಪ್ರಕ್ರಿಯೆಯನ್ನು ಸುಸೂತ್ರವಾಗಿ ನಡೆಸಿದ ಚುನಾವಣಾ ಆಯೋಗವನ್ನು ಅವರು ಶ್ಲಾಘಿಸಿದರು. ತಮ್ಮ 30 ನಿಮಿಷಗಳ ಮಾತಿನಲ್ಲಿ ಹಲವು ವಿಚಾರಗಳನ್ನು ಪ್ರಸ್ತಾಪಿಸಿದರು.

ಒಲಿಂಪಿಕ್ಸ್‌ನಲ್ಲಿ ಯಶಸ್ಸಿಗೆ ಹಾರೈಕೆ: ಮುಂಬರುವ ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಭಾರತದ ಕ್ರೀಡಾಪಟುಗಳು ಉತ್ತಮ ಸಾಧನೆ ಮಾಡಲಿ ಎಂದು ಪ್ರಧಾನಿ ಅವರು ಶುಭಹಾರೈಸಿದರು. ದೇಶದ ಜನರು ‘ಚಿಯರ್‌ 4 ಭಾರತ್’ ಹ್ಯಾಷ್‌ಟ್ಯಾಗ್‌ನಡಿ ಕ್ರೀಡಾಪಟುಗಳಿಗೆ ಉತ್ತೇಜನ ನೀಡಬೇಕು ಎಂದು ಮನವಿ ಮಾಡಿದರು.

ಕಳೆದ ಬಾರಿ ಟೋಕಿಯೊದಲ್ಲಿ ನಡೆದಿದ್ದ ಒಲಿಂಪಿಕ್ಸ್‌ನಲ್ಲಿ ನಮ್ಮ ಕ್ರೀಡಾಪಟುಗಳು ನೀಡಿದ್ದ ಪ್ರದರ್ಶನವು ಜನರ ಹೃದಯ ಗೆದ್ದಿತ್ತು. ಈ ಬಾರಿಯ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುವ ಅಥ್ಲೀಟ್‌ಗಳು ಕಠಿಣ ತಯಾರಿಯಲ್ಲಿ ನಿರತರಾಗಿದ್ದಾರೆ ಎಂದು ಹೇಳಿದರು.

ಭಾರತದ ಸಂಸ್ಕೃತಿಗೆ ಜಾಗತಿಕ ಮನ್ನಣೆ: ಭಾರತದ ಸಂಸ್ಕೃತಿ ಮತ್ತು ಇಲ್ಲಿನ ಉತ್ಪನ್ನಗಳಿಗೆ ಜಾಗತಿಕ ಮನ್ನಣೆ ದೊರೆಯುತ್ತಿದೆ ಎಂಬುದನ್ನು ಕೆಲವೊಂದು ಉದಾಹರಣೆಗಳ ಮೂಲಕ ಅವರು ವಿವರಿಸಿದರು.

ಕುವೈತ್‌ ದೇಶದ ರೇಡಿಯೊದಲ್ಲಿ ಪ್ರಸಾರವಾಗಿದ್ದ ಹಿಂದಿ ಕಾರ್ಯಕ್ರಮದ ಆಡಿಯೊ ತುಣುಕನ್ನು ಕೇಳಿಸಿದ ಅವರು, ‘ಕುವೈತ್‌ ಸರ್ಕಾರವು ತನ್ನ ರಾಷ್ಟ್ರೀಯ ರೇಡಿಯೊದಲ್ಲಿ ಹಿಂದಿ ಭಾಷೆಯ ಕಾರ್ಯಕ್ರಮವೊಂದನ್ನು ಆರಂಭಿಸಿದೆ. ಆ ಕಾರ್ಯಕ್ರಮ ಪ್ರತಿ ಭಾನುವಾರ ಅರ್ಧ ಗಂಟೆ ಪ್ರಸಾರವಾಗುತ್ತದೆ. ಭಾರತದ ಸಂಸ್ಕೃತಿ, ಕಲೆ, ಚಲನಚಿತ್ರಗಳ ಕುರಿತ ಸಂವಾದವನ್ನು ಒಳಗೊಂಡ ಕಾರ್ಯಕ್ರಮವು ಕುವೈತ್‌ನಲ್ಲಿರುವ ಭಾರತೀಯರಲ್ಲಿ ಜನಪ್ರಿಯತೆ ಗಳಿಸಿದೆ’ ಎಂದರು.

ಕೊಡೆಗಳ ತಯಾರಿಕೆಯಲ್ಲಿ ನಿರತ ಮಹಿಳೆಯರು
ಕೊಡೆಗಳ ತಯಾರಿಕೆಯಲ್ಲಿ ನಿರತ ಮಹಿಳೆಯರು
ಪ್ರಧಾನಿ ಅವರು ನೀಟ್‌ ವಿವಾದ ರೈಲು ಅಪಘಾತ ಮತ್ತು ‘ಮೂಲಸೌಕರ್ಯಗಳ ಕುಸಿತ’ ಘಟನೆಗಳ ಬಗ್ಗೆ ಯಾವುದೇ ಪ್ರಸ್ತಾಪ ಮಾಡಿಲ್ಲ ಏಕೆ?
ಪವನ್‌ ಖೇರಾ, ಕಾಂಗ್ರೆಸ್‌ ಮುಖಂಡ

ಭಾಷಣದ ಪ್ರಮುಖ ಅಂಶಗಳು

* ವಿಶ್ವ ಪರಿಸರ ದಿನದ ಅಂಗವಾಗಿ ನಾನು ತಾಯಿಯ ಹೆಸರಿನಲ್ಲಿ ಒಂದು ಗಿಡ ನೆಟ್ಟಿದ್ದೇನೆ. 'ಅಮ್ಮನ ಹೆಸರಿನಲ್ಲಿ ಒಂದು ಗಿಡ' ಅಭಿಯಾನಕ್ಕೆ ಉತ್ತಮ ಸ್ಪಂದನೆ ದೊರೆತಿದೆ. ಹಲವರು ತಮ್ಮ ಅಮ್ಮನ ಜತೆ ಅಥವಾ ಆಕೆಯ ನೆನಪಿನಲ್ಲಿ ಗಿಡಗಳನ್ನು ನೆಟ್ಟು ಅದರ ಫೋಟೊವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ.

* 10ನೇ ಅಂತರರಾಷ್ಟ್ರೀಯ ಯೋಗ ದಿನವನ್ನು ಜಗತ್ತಿನ ಎಲ್ಲ ದೇಶಗಳಲ್ಲೂ ಆಚರಿಸಲಾಯಿತು. ಶ್ರೀನಗರದಲ್ಲಿ ನಾನು ಪಾಲ್ಗೊಂಡಿದ್ದ ಕಾರ್ಯಕ್ರಮದಲ್ಲಿ ಸ್ಥಳೀಯರು ಮಕ್ಕಳು ಮತ್ತು ಮಹಿಳೆಯರು ಜತೆಯಾಗಿದ್ದರು.

* ಸೌದಿ ಅರೇಬಿಯಾದಲ್ಲಿ ಇದೇ ಮೊದಲ ಬಾರಿಗೆ ಮಹಿಳೆಯೊಬ್ಬರ ನೇತೃತ್ವದಲ್ಲಿ ಯೋಗಾಸನ ಕಾರ್ಯಕ್ರಮ ನಡೆಯಿತು.

* ಭಾರತದ ಹಲವು ಉತ್ಪನ್ನಗಳಿಗೆ ಜಗತ್ತಿನಾದ್ಯಂತ ಬೇಡಿಕೆ ಹೆಚ್ಚುತ್ತಿದೆ. ನಮ್ಮ ಸ್ಥಳೀಯ ಉತ್ಪನ್ನಗಳಿಗೆ ಜಾಗತಿಕ ಮಾರುಕಟ್ಟೆಯಲ್ಲಿ ಬೇಡಿಗೆ ಬಂದಾಗ ಹೆಮ್ಮೆಯಾಗುವುದು ಸಹಜ. ಆಂಧ್ರಪ್ರದೇಶದ ಅಲ್ಲೂರಿ ಸೀತಾರಾಮರಾಜು ಜಿಲ್ಲೆಯಲ್ಲಿ ಬೆಳೆಯುವ ಅರಕು ಕಾಫಿ ಕೂಡ ಅಂತ ಉತ್ಪನ್ನಗಳಲ್ಲಿ ಒಂದು. 

‘ಕಾರ್ತುಂಬಿ’ ಕೊಡೆ: ಮೆಚ್ಚುಗೆ

ಕೇರಳದ ಪಾಲಕ್ಕಾಡ್‌ ಜಿಲ್ಲೆಯ ಅಟ್ಟಪ್ಪಾಡಿಯ ಬುಡಕಟ್ಟು ಸಮುದಾಯದ ಮಹಿಳೆಯರು ತಯಾರಿಸುತ್ತಿರುವ ‘ಕಾರ್ತುಂಬಿ’ ಬ್ರಾಂಡ್‌ ಕೊಡೆಗಳ ಬಗ್ಗೆ ಪ್ರಧಾನಿ ಅವರು ‘ಮನದ ಮಾತು’ ಕಾರ್ಯಕ್ರಮದಲ್ಲಿ ಪ್ರಸ್ತಾಪ ಮಾಡಿದರು. ‘ಕಾರ್ತುಂಬಿ ಕೊಡೆಗಳು ‘ನಯನಮನೋಹರ’ ಮತ್ತು ‘ವರ್ಣರಂಜಿತ’ ಆಗಿದ್ದು ಅವುಗಳ ಬೇಡಿಕೆ ಹೆಚ್ಚುತ್ತಿದೆ. ಕೇರಳದ ಪುಟ್ಟ ಗ್ರಾಮದಿಂದ ಬಹುರಾಷ್ಟ್ರೀಯ ಕಂಪನಿಗಳವರೆಗೆ ಈ ಕೊಡೆಗಳ ಪಯಣ ಮುಂದುವರಿದಿದೆ. ಸ್ಥಳೀಯತೆಯನ್ನು ಉತ್ತೇಜಿಸುವ ‘ವೋಕಲ್‌ ಫಾರ್‌ ಲೋಕಲ್‌’ಗೆ ಇದು ಉತ್ತಮ ಉದಾಹರಣೆ’ ಎಂದರು. ಅಟ್ಟಪ್ಪಾಡಿಯ ಹಾಡಿಗಳಲ್ಲಿರುವ 30 ಮಹಿಳೆಯರು ‘ಕಾರ್ತುಂಬಿ’ ಕೊಡೆಗಳ ತಯಾರಿಕೆಯಲ್ಲಿ ತೊಡಗಿದ್ದಾರೆ. ಬುಡಕಟ್ಟು ಜನರ ಅಭಿವೃದ್ಧಿಗಾಗಿ ಕೆಲಸ ಮಾಡುತ್ತಿರುವ ‘ಥಂಪು’ ಹೆಸರಿನ ಎನ್‌ಜಿಒ ಈ ಉಪಕ್ರಮವನ್ನು 2014ರಲ್ಲಿ ಆರಂಭಿಸಿತ್ತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT