ಸೋಮವಾರ, 17 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಳ್ಳು ಹೇಳುವವರು ನಿರ್ಗಮಿಸುವ ಸಮಯ ಬಂದಿದೆ: ಕಾಂಗ್ರೆಸ್‌

ಮಹಾತ್ಮ ಗಾಂಧಿ ಕುರಿತ ಮೋದಿ ಹೇಳಿಕೆಗೆ ಕಾಂಗ್ರೆಸ್‌ ಟೀಕೆ
Published 30 ಮೇ 2024, 1:13 IST
Last Updated 30 ಮೇ 2024, 1:13 IST
ಅಕ್ಷರ ಗಾತ್ರ

ನವದೆಹಲಿ: ‘ಗಾಂಧಿ ಚಲನಚಿತ್ರ ನಿರ್ಮಿಸುವವರೆಗೂ ಜಗತ್ತಿಗೆ ಮಹಾತ್ಮ ಗಾಂಧಿ ಕುರಿತು ಅರಿವು ಇರಲಿಲ್ಲ’ ಎಂದು ಹೇಳಿರುವ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್‌ ಬುಧವಾರ ಟೀಕಾಪ್ರಹಾರ ಮಾಡಿದೆ.

‘ಮಹಾತ್ಮ ಗಾಂಧಿ ಹತ್ಯೆಯಲ್ಲಿ ಪಾತ್ರ ಹೊಂದಿರುವವರ ಸೈದ್ಧಾಂತಿಕ ಪೂರ್ವಜರು ಗಾಂಧೀಜಿ ಅವರು ಹಾಕಿಕೊಟ್ಟ ಸತ್ಯದ ಮಾರ್ಗವನ್ನು ಅನುಸರಿಸುವುದೇ ಇಲ್ಲ’ ಎಂದು ಕಾಂಗ್ರೆಸ್‌ ವಾಗ್ದಾಳಿ ನಡೆಸಿದೆ.

ಪ್ರಧಾನಿ ವಿರುದ್ಧ ಟೀಕಾಪ್ರಹಾರ ನಡೆಸಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ,‘ಸುಳ್ಳುಗಳನ್ನು ಹೇಳುವವರು ತಮ್ಮ ಗಂಟೆಮೂಟೆಗಳನ್ನು ಕಟ್ಟಿಕೊಂಡು ನಿರ್ಗಮಿಸುವ ಸಮಯ ಬಂದಿದೆ’ ಎಂದು ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿದ್ದಾರೆ.

‘ಎಂಟೈರ್ ಪೊಲಿಟಿಕಲ್‌ ಸೈನ್ಸ್‌ನ ವಿದ್ಯಾರ್ಥಿ ಮಾತ್ರ ಮಹಾತ್ಮ ಗಾಂಧಿ ಕುರಿತು ತಿಳಿದುಕೊಳ್ಳಲು ಗಾಂಧಿ ಚಿತ್ರವನ್ನು ನೋಡುತ್ತಾನೆ’ ಎಂದು ವ್ಯಂಗ್ಯವಾಡಿದ್ದಾರೆ.

ಎಬಿಪಿ ಸುದ್ದಿವಾಹಿನಿಗೆ ನೀಡಿರುವ ಸಂದರ್ಶನದಲ್ಲಿ ಮೋದಿ, ‘ಮಹಾತ್ಮ ಗಾಂಧಿ ಒಬ್ಬ ಮಹಾನ್‌ ವ್ಯಕ್ತಿ ಎಂದು ಇಡೀ ಜಗತ್ತು ಪರಿಗಣಿಸುತ್ತದೆ. ಈ 75 ವರ್ಷಗಳ ಅವಧಿಯಲ್ಲಿ ಮಹಾತ್ಮ ಗಾಂಧಿ ಕುರಿತು ಜಗತ್ತಿಗೆ ತಿಳಿಸುವುದು ನಮ್ಮ ಮೇಲಿನ ಜವಾಬ್ದಾರಿಯಲ್ಲವೇ’ ಎಂದು ಹೇಳಿದ್ದಾರೆ.

‘ಯಾರಿಗೂ ಅವರ ಬಗ್ಗೆ ತಿಳಿದಿಲ್ಲ ಎಂದು ಹೇಳಲು ನಾನು ವಿಷಾದಿಸುತ್ತೇನೆ. ‘ಗಾಂಧಿ’ ಚಲನಚಿತ್ರವನ್ನು ನಿರ್ಮಿಸಿದಾಗ ಮೊದಲ ಬಾರಿಗೆ ಇಡೀ ಜಗತ್ತಿಗೆ ಮಹಾತ್ಮ ಗಾಂಧಿ ಕುರಿತು ಕುತೂಹಲ ಮೂಡಿತು. ನಾವು ಕೇಳಿರದ ಈ ಮಹಾನ್‌ ವ್ಯಕ್ತಿ ಯಾರು ಎಂದು ತನ್ನನ್ನೇ ಪ್ರಶ್ನಿಸಿಕೊಂಡಿತು’ ಎಂದು ಮೋದಿ ಹೇಳಿದ್ದಾರೆ.

‘ಜಗತ್ತಿಗೆ ಮಾರ್ಟಿನ್‌ ಲೂಥರ್‌ ಕಿಂಗ್‌, ದಕ್ಷಿಣ ಆಫ್ರಿಕಾದ ನೆಲ್ಸಲ್‌ ಮಂಡೇಲಾ ಅವರ ಕುರಿತು ಮಾಹಿತಿ ಇದೆ. ಈ ಮಹನೀಯರಿಗಿಂತ ಮಹಾತ್ಮ ಗಾಂಧಿ ಕಡಿಮೆ ತೂಕದ ವ್ಯಕ್ತಿಯಲ್ಲ ಎಂಬುದನ್ನು ಜಗತ್ತು ಅರ್ಥ ಮಾಡಿಕೊಳ್ಳುವುದನ್ನು ಖಾತ್ರಿಪಡಿಸುವುದು ಭಾರತದ ಜವಾಬ್ಧಾರಿ’ ಎಂದಿದ್ದಾರೆ.

‘ವಿಶ್ವದೆಲ್ಲೆಡೆ ಪ್ರವಾಸ ಕೈಗೊಂಡ ನಂತರ, ಮಹಾತ್ಮ ಗಾಂಧಿಯಿಂದಾಗಿಯೇ ಭಾರತ ಜಾಗತಿಕ ಮಟ್ಟದಲ್ಲಿ ಮಹತ್ವ ಪಡೆಯಬೇಕಿತ್ತು ಎಂದು ನನಗೆ ಅನಿಸಿದೆ. ಈ ಮಾತನ್ನು ಪ್ರತಿಯೊಬ್ಬರೂ ಒಪ್ಪಲೇಬೇಕು. ಜಗತ್ತಿನ ಹಲವಾರು ಸಮಸ್ಯೆಗಳಿಗೆ ಮಹಾತ್ಮ ಗಾಂಧಿ ಪ್ರತಿಪಾದಿಸಿದ ತತ್ವಗಳಲ್ಲಿ ಪರಿಹಾರ ಇದೆ. ಆದರೆ, ನಾವು ಸಾಕಷ್ಟು ಕಳೆದುಕೊಂಡಿದ್ದೇವೆ’ ಎಂದೂ ಮೋದಿ ಹೇಳಿದ್ದಾರೆ.

ಮಹಾತ್ಮ ಗಾಂಧಿ ಪ್ರತಿಪಾದಿಸಿದ ರಾಷ್ಟ್ರೀಯತೆ ಆರ್‌ಎಸ್‌ಎಸ್‌ನವರಿಗೆ ಗೊತ್ತಿಲ್ಲ. ಇದೇ ಅವರ ಅಸ್ಮಿತೆ. ದೇಶದಲ್ಲಿ ಆರ್‌ಎಸ್‌ಎಸ್‌ನವರು ನಿರ್ಮಿಸಿರುವ ವಾತಾವರಣದಿಂದಾಗಿಯೇ ನಾಥೂರಾಂ ಗೋಡ್ಸೆ ಮಹಾತ್ಮ ಗಾಂಧಿಯವರನ್ನು ಹತ್ಯೆ ಮಾಡಿದ.
ಜೈರಾಮ್‌ ರಮೇಶ್‌, ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ
ಮಹಾತ್ಮ ಗಾಂಧಿ ಅವರು ಆಧುನಿಕ ಭಾರತದ ಇತಿಹಾಸದಲ್ಲಿಯೇ ಅತ್ಯಂತ ಪೂಜನೀಯ ವ್ಯಕ್ತಿ. ಸ್ವಾತಂತ್ರ್ಯ ಪೂರ್ವದಲ್ಲಿಯೂ ಅವರು ಮಹಾನ್‌ ವ್ಯಕ್ತಿ ಎನಿಸಿದ್ದರು. ಪ್ರೇರಣೆಗಾಗಿ ಆಗ ಅನೇಕ ರಾಷ್ಟ್ರಗಳ ಅವರತ್ತ ನೋಡುತ್ತಿದ್ದವು
ಕೆ.ಸಿ.ವೇಣುಗೋಪಾಲ್, ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ
ರಿಚರ್ಡ್‌ ಅಟೆನ್‌ಬರೊ ಅವರು ನಿರ್ಮಿಸಿದ ‘ಗಾಂಧಿ’ ಚಿತ್ರಕ್ಕೂ ಮೊದಲು ಜಗತ್ತಿಗೆ ಮಹಾತ್ಮ ಗಾಂಧಿ ಕುರಿತು ತಿಳಿದಿರಲಿಲ್ಲ ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆಯಿಂದ ನನಗೆ ದಿಗ್ಭ್ರಮೆಯಾಗಿದೆ. ಮೋದಿ ಅವರಿಗೆ ಆಲ್ಟರ್ಟ್‌ ಐನ್‌ಸ್ಟೀನ್‌ ಬಗ್ಗೆ ಗೊತ್ತೆ? ಐನ್‌ಸ್ಟೀನ್‌ ಅವರು ಮಹಾತ್ಮ ಗಾಂಧಿ ಕುರಿತು ಏನು ಹೇಳಿದ್ದಾರೆ ಎಂಬುದು ಮೋದಿ ಅವರಿಗೆ ತಿಳಿದಿದೆಯೇ?
ಪಿ.ಚಿದಂಬರಂ, ಕಾಂಗ್ರೆಸ್‌ನ ಹಿರಿಯ ನಾಯಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT