ಗುರುವಾರ, 30 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಚಿವರ ಪಟ್ಟಿ 8ಕ್ಕಿಳಿಸಿದ ‘ಮಧ್ಯರಾತ್ರಿ ಕಿತ್ತಾಟ’

Published 20 ಮೇ 2023, 23:30 IST
Last Updated 20 ಮೇ 2023, 23:30 IST
ಅಕ್ಷರ ಗಾತ್ರ

ನವದೆಹಲಿ: ಕರ್ನಾಟಕದ ಮುಖ್ಯಮಂತ್ರಿ ಗಾದಿಗೆ ಏರಲು ತಂತ್ರ ಪ್ರತಿತಂತ್ರಗಳನ್ನು ಹೆಣೆದು ಮ್ಯಾರಥಾನ್‌ ಪೈಪೋಟಿ ನಡೆಸಿ ಕಾಂಗ್ರೆಸ್‌ ಹೈಕಮಾಂಡ್‌ನ ‘ಮಧ್ಯರಾತ್ರಿ ಸೂತ್ರ’ಕ್ಕೆ ಬಗ್ಗಿದ್ದ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಅವರು, ತಮ್ಮ ಸಂಪುಟದ ಸಹೋದ್ಯೋಗಿಗಳ ಆಯ್ಕೆ ವಿಚಾರದಲ್ಲಿ ಮಧ್ಯರಾತ್ರಿಯಲ್ಲಿ ‘ಕಿತ್ತಾಟ’ ನಡೆಸಿದರು. ‘ಒಟ್ಟಾಗಿ ಕೆಲಸ ಮಾಡಿ’ ಎಂಬ ಹೈಕಮಾಂಡ್‌ನ ಕಿವಿಮಾತನ್ನು ಉಭಯ ನಾಯಕರು ಒಂದೇ ದಿನದಲ್ಲಿ ಮರೆತು ಬಿಟ್ಟರು. ಇಬ್ಬರು ನಾಯಕರು ಜಿದ್ದಿಗೆ ಬಿದ್ದು ಸಂಪುಟಕ್ಕೆ ಸೇರುವವರ ಸಂಖ್ಯೆಯನ್ನು ನಡುರಾತ್ರಿಯಲ್ಲೇ ಎಂಟಕ್ಕೆ ಇಳಿಸಿದರು! 

ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಜತೆಗೆ 25 ಸಚಿವರು ಮೊದಲ ಕಂತಿನಲ್ಲೇ ಸಂಪುಟಕ್ಕೆ ಸೇರ್ಪಡೆಯಾಗಬೇಕು. ಏಳು ಸ್ಥಾನಗಳನ್ನು ಖಾಲಿಯಾಗಿರಿಸಿಕೊಂಡು ಅತೃಪ್ತರನ್ನು ಸಮಾಧಾನಪಡಿಸಬೇಕು ಎಂದು ಕಾಂಗ್ರೆಸ್‌ ಹೈಕಮಾಂಡ್‌ ಸೂತ್ರ ಹೆಣೆದಿತ್ತು. ಈ ಬಗ್ಗೆ ಸಿದ್ದರಾಮಯ್ಯ ಹಾಗೂ ಶಿವಕುಮಾರ್ ಅವರಿಗೆ ವರಿಷ್ಠರು ಸಂದೇಶ ರವಾನಿಸಿದ್ದರು. ತಮ್ಮ ಬಣದಿಂದ ಸಂಪುಟಕ್ಕೆ ಸೇರ್ಪಡೆಯಾಗುವವರ ಪಟ್ಟಿಗಳೊಂದಿಗೆ ನಿಯೋಜಿತ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಶುಕ್ರವಾರ ಮಧ್ಯಾಹ್ನ ವಿಶೇಷ ವಿಮಾನದಲ್ಲಿ ನವದೆಹಲಿಗೆ ಬಂದರು. ತಮ್ಮಲ್ಲಿ ಒಗ್ಗಟ್ಟು ಇದೆ ಎಂಬುದನ್ನು ತೋರ್ಪಡಿಸಿದರು. ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಹಾಗೂ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ಜತೆಯಲ್ಲೇ ಭೇಟಿ ಮಾಡಿ ಸುದೀರ್ಘವಾಗಿ ಸಮಾಲೋಚಿಸಿದರು. 

ರಾತ್ರಿ ನಡೆದಿದ್ದೇನು? 

ಸಚಿವ ಸಂಪುಟಕ್ಕೆ ಸೇರುವವರ ಪಟ್ಟಿಗೆ ಅಂತಿಮ ರೂಪ ನೀಡಲು ಪಕ್ಷದ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್‌ ಹಾಗೂ ರಾಜ್ಯ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲಾ ನೇತೃತ್ವದಲ್ಲಿ ರಾತ್ರಿ 9 ಗಂಟೆಗೆ ಸಭೆ ನಡೆಸಲಾಯಿತು. ಈ ಸಭೆ ರಾತ್ರಿ 12 ಗಂಟೆಯ ವರೆಗೆ ಮುಂದುವರಿದರೂ ಬಿಕ್ಕಟ್ಟು ಪರಿಹಾರವಾಗಲಿಲ್ಲ. ರಾಷ್ಟ್ರೀಯ ನಾಯಕರು ಮನವೊಲಿಸಲು ಒಪ್ಪಿದರೂ ಉಭಯ ನಾಯಕರು ಹಿಡಿದ ಪಟ್ಟು ಸಡಿಲಿಸಲಿಲ್ಲ. 

ಸಿದ್ದರಾಮಯ್ಯ ತಂದ ಸಂಭಾವ್ಯರ ಪಟ್ಟಿಯಲ್ಲಿ ಎಂ.ಬಿ.ಪಾಟೀಲ, ಕೃಷ್ಣ ಬೈರೇಗೌಡ, ದಿನೇಶ್ ಗುಂಡೂರಾವ್‌, ಎಚ್‌.ಸಿ.ಮಹದೇವಪ್ಪ, ಜಮೀರ್‌ ಅಹಮದ್‌ ಖಾನ್‌ ಅವರ ಹೆಸರು ಇತ್ತು. ಜಮೀರ್ ಹೆಸರನ್ನು ಕಂಡ ಕೂಡಲೇ ಶಿವಕುಮಾರ್ ಬಲವಾಗಿ ಆಕ್ಷೇಪಿಸಿದರು. ‘ಉಪಮುಖ್ಯಮಂತ್ರಿ ಸ್ಥಾನವನ್ನು ಒಪ್ಪುವ ಸಂದರ್ಭದಲ್ಲಿ ಹಲವು ಷರತ್ತುಗಳನ್ನು ಹಾಕಿದ್ದೆ. ಜಮೀರ್, ಬಸವರಾಜ ರಾಯರಡ್ಡಿ ಹಾಗೂ ಕೆ.ಎನ್‌. ರಾಜಣ್ಣ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಬಾರದು ಎಂಬ ಷರತ್ತು ಅದರಲ್ಲಿ ಇತ್ತು. ಅದಕ್ಕೆ ರಾಷ್ಟ್ರೀಯ ನಾಯಕರು ಒಪ್ಪಿದ್ದರು. ಈ ವಿಷಯವನ್ನು ಸಿದ್ದರಾಮಯ್ಯ ಗಮನಕ್ಕೂ ತರಲಾಗಿತ್ತು. ಇಷ್ಟೆಲ್ಲ ಗೊತ್ತಿದ್ದು ಜಮೀರ್‌ ಹೆಸರನ್ನು ಸೇರಿಸಿದ್ದು ಏಕೆ’ ಎಂದು ಅವರು ಪ್ರಶ್ನಿಸಿದರು ಎಂದು ಮೂಲಗಳು ತಿಳಿಸಿವೆ. 

‘ಜಮೀರ್ ಅವರು ರಾಜ್ಯದಾದ್ಯಂತ ಓಡಾಡಿ ಚುನಾವಣಾ ಪ್ರಚಾರ ನಡೆದಿದ್ದಾರೆ. ಹಲವು ಕ್ಷೇತ್ರಗಳಲ್ಲಿ ಪಕ್ಷ ಗೆಲ್ಲಲು ಅವರೂ ಕಾರಣ. ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳದಿದ್ದರೆ ತಪ್ಪು ಸಂದೇಶ ರವಾನಿಸಿದಂತೆ ಆಗುತ್ತದೆ’ ಎಂದು ಸಿದ್ದರಾಮಯ್ಯ ಸಮರ್ಥಿಸಿಕೊಂಡರು. ಜಮೀರ್ ಅವರು ಈ ಹಿಂದೆ ನೀಡಿದ ಹೇಳಿಕೆಗಳು ಹಾಗೂ ಹೈಕಮಾಂಡ್‌ ನೋಟಿಸ್‌ ನೀಡಿರುವುದನ್ನು ಶಿವಕುಮಾರ್ ನೆನಪಿಸಿದರು. ಹೆಚ್ಚೆಚ್ಚು ವಿವಾದಗಳನ್ನು ಸೃಷ್ಟಿಸುತ್ತಾರೆ ಎಂದೂ ಹೇಳಿದರು. ‘ಈಗಾಗಲೇ ಎರಡು ಬಾರಿ ಸಚಿವರಾಗಿದ್ದಾರೆ. ಅವರ ಬದಲು ಬೆಂಗಳೂರಿನ ಕೋಟಾದಲ್ಲಿ ಶಾಂತಿನಗರ ಶಾಸಕ ಎನ್‌.ಎ.ಹ್ಯಾರಿಸ್‌ ಅವರಿಗೆ ಅವಕಾಶ ನೀಡಬೇಕು’ ಎಂದು ಅವರು ಪಟ್ಟು ಹಿಡಿದರು. ಹ್ಯಾರಿಸ್‌ ಸೇರ್ಪಡೆಗೆ ಸಿದ್ದರಾಮಯ್ಯ ವಿರೋಧಿಸಿದರು. ಇಬ್ಬರ ಹೆಸರನ್ನು ಕೈಬಿಟ್ಟು ಯು.ಟಿ.ಖಾದರ್ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳೋಣ ಎಂದು ಡಿ.ಕೆ. ಹೇಳಿದರು. ‘ಖಾದರ್ ವಿಧಾನಸಭೆಯ ವಿರೋಧ ಪಕ್ಷದ ಉಪನಾಯಕರಾಗಿದ್ದವರು. ಅವರಿಗೆ ಅವಕಾಶ ನೀಡಲೇಬೇಕಾಗುತ್ತದೆ. ಆದರೆ, ಜಮೀರ್ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲೇಬೇಕು’ ಎಂದು ಸಿದ್ದರಾಮಯ್ಯ ಹಟ ಹಿಡಿದರು. ಈ ವೇಳೆ, ವೇಣುಗೋ‍ಪಾಲ್‌ ಹಾಗೂ ಸುರ್ಜೇವಾಲಾ ಮಧ್ಯ ಪ್ರವೇಶಿಸಿ ವಾತಾವರಣ ತಿಳಿಗೊಳಿಸಿದರು. ಜಮೀರ್ ಅವರನ್ನು ಸಚಿವರನ್ನಾಗಿ ಮಾಡಲು ಡಿ.ಕೆ. ಒಪ್ಪಿಕೊಂಡರು ಎಂದು ಮೂಲಗಳು ತಿಳಿಸಿವೆ. 

‘ದಿನೇಶ್‌ ಗುಂಡೂರಾವ್‌ ಕೆಪಿಸಿಸಿ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಪಕ್ಷವು ಲೋಕಸಭಾ ಚುನಾವಣೆಯಲ್ಲಿ ಒಂದು ಸ್ಥಾನವನ್ನಷ್ಟೇ ಗೆದ್ದಿತ್ತು. ಅವರು ಈ ಚುನಾವಣೆಯಲ್ಲಿ ತಿಣುಕಾಡಿ ಗೆದ್ದಿದ್ದಾರೆ. ಅವರ ಬದಲು ಹೊಸ ಮುಖಗಳಿಗೆ ಅವಕಾಶ ಕಲ್ಪಿಸಬೇಕು’ ಎಂದು ಶಿವಕುಮಾರ್ ಪ್ರತಿಪಾದಿಸಿದರು. ಕೃಷ್ಣ ಬೈರೇಗೌಡ, ಮಹದೇವಪ್ಪ ಅವರನ್ನು ಸೇರಿಸಿಕೊಳ್ಳುವುದಕ್ಕೂ ತಕರಾರು ಎತ್ತಿದರು. ಶಿವಕುಮಾರ್ ಪಟ್ಟಿಯಲ್ಲಿದ್ದ ಕೆಲವು ಹೆಸರುಗಳಿಗೂ ಸಿದ್ದರಾಮಯ್ಯ ಆಕ್ಷೇಪ ವ್ಯಕ್ತಪಡಿಸಿದರು. ಬಿ.ಕೆ. ಹರಿಪ್ರಸಾದ್‌ ಸಂಪುಟಕ್ಕೆ ಬೇಡವೇ ಬೇಡ ಎಂದು ಹೇಳಿದರು. ವಿಧಾನ ಪರಿಷತ್‌ನಿಂದ ಪ್ರಕಾಶ ಹುಕ್ಕೇರಿ ಅವರನ್ನು ಸೇರಿಸಿಕೊಳ್ಳುವ ಬಗ್ಗೆ ಪ್ರಸ್ತಾಪಿಸಿದರು. ಹರಿಪ್ರಸಾದ್‌ ಹೆಸರು ಕೈಬಿಡಲು ಶಿವಕುಮಾರ್‌ ಒಪ್ಪಲಿಲ್ಲ. ಈ ವಿಷಯದಲ್ಲಿ ಉಭಯ ನಾಯಕರು ಒಮ್ಮತಕ್ಕೆ ಬರಲಿಲ್ಲ. ಸಂಪುಟದಲ್ಲಿ ಮೂಲ ಕಾಂಗ್ರೆಸ್‌ ನಾಯಕರಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಶಿವಕುಮಾರ್ ಪ್ರತಿ‍ಪಾದಿಸಿದರು ಎಂದು ಮೂಲಗಳು ತಿಳಿಸಿವೆ. 

ಸುದೀರ್ಘ ಸಮಾಲೋಚನೆಯ ನಂತರ ಮಧ್ಯರಾತ್ರಿ 12 ಗಂಟೆಗೆ ಪಟ್ಟಿಗೆ ಒಂದು ರೂಪ ನೀಡಲಾಯಿತು. 14 ಸಚಿವರ ಹೆಸರನ್ನು ಅಂತಿಮಗೊಳಿಸಲಾಯಿತು. ಸಿದ್ದರಾಮಯ್ಯ ತಾವು ತಂಗಿದ್ದ ಹೋಟೆಲ್‌ಗೆ ಮರಳಿದರು. ಶಿವಕುಮಾರ್ ಅವರು ವೇಣುಗೋಪಾಲ್‌ ಮನೆಯಲ್ಲಿ ಉಳಿದು ಚರ್ಚಿಸಿದರು. ಸಚಿವರ ಪಟ್ಟಿಯಲ್ಲಿ ಬದಲಾವಣೆಯಾಗಲಿದೆ ಎಂಬ ಸುಳಿವು ಸಿಕ್ಕ ಸಿದ್ದರಾಮಯ್ಯ ಅವರು ಕೆಲವೇ ಕ್ಷಣಗಳಲ್ಲಿ ವೇಣುಗೋಪಾಲ್‌ ಮನೆಗೆ ಧಾವಿಸಿ ಬಂದರು. ರಾಷ್ಟ್ರೀಯ ನಾಯಕರ ಸಮ್ಮುಖದಲ್ಲಿ ಮತ್ತೊಂದು ಸುತ್ತಿನ ಸಭೆ ನಡೆಯಿತು. ಅಂತಿಮವಾಗಿ ಎಂಟು ಮಂದಿಯನ್ನು ಸಂಪುಟಕ್ಕೆ ಸೇರಿಸಿಕೊಳ್ಳಲು ಉಭಯ ನಾಯಕರು ಒಮ್ಮತಕ್ಕೆ ಬಂದರು. ಆಗ ರಾತ್ರಿ 2.20 ಆಗಿತ್ತು. ಸಿದ್ದರಾಮಯ್ಯ ಅವರು ಪಟ್ಟಿಯೊಂದಿಗೆ ತಡರಾತ್ರಿಯೇ ಬೆಂಗಳೂರಿಗೆ ತೆರಳಿದರು. ಶಿವಕುಮಾರ್ ಶನಿವಾರ ಬೆಳಿಗ್ಗೆ ಬೆಂಗಳೂರಿಗೆ ನಿರ್ಗಮಿಸಿದರು. ನವದೆಹಲಿಗೆ ಜತೆ ಜತೆಯಲ್ಲಿ ಬಂದಿದ್ದ ನಾಯಕರಿಬ್ಬರೂ ಪ್ರತ್ಯೇಕವಾಗಿ ತೆರಳಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT