ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಅನಾರೋಗ್ಯ; ಚಿಕಿತ್ಸೆ ಬಳಿಕ ಆಸ್ಪತ್ರೆಯಿಂದ ಬಿಡುಗಡೆಯಾದ ಪ್ರಿಯಾಂಕಾ ಗಾಂಧಿ

Published 19 ಫೆಬ್ರುವರಿ 2024, 13:45 IST
Last Updated 19 ಫೆಬ್ರುವರಿ 2024, 13:45 IST
ಅಕ್ಷರ ಗಾತ್ರ

ನವದೆಹಲಿ: ಅನಾರೋಗ್ಯದ ಕಾರಣ ಇಲ್ಲಿನ ಸರ್‌ ಗಂಗಾರಾಮ್‌ ಆಸ್ಪತ್ರೆಗೆ ದಾಖಲಾಗಿದ್ದ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ. ಹೀಗಾಗಿ ಅವರು ಆಸ್ಪತ್ರೆಯಿಂದ ಸೋಮವಾರ ಬಿಡುಗಡೆಯಾಗಿದ್ದಾರೆ ಎಂದು ವರದಿಯಾಗಿದೆ.

ಪ್ರಿಯಾಂಕಾ ಅವರು ಫೆಬ್ರುವರಿ 16ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಬಳಿಕ ಅವರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಎಂದು ಸುದ್ದಿ ಸಂಸ್ಥೆ 'ಎಎನ್‌ಐ' ವರದಿ ಮಾಡಿದೆ.

'ಉತ್ತರ ಪ್ರದೇಶದಲ್ಲಿ ಹಾದುಹೋಗಲಿರುವ ಭಾರತ ಜೋಡೊ ನ್ಯಾಯ ಯಾತ್ರೆಯಲ್ಲಿ ಪಾಳ್ಗೊಳ್ಳಲು ಉತ್ಸುಕಳಾಗಿದ್ದೆ. ಆದರೆ, ದುರದೃಷ್ಟವಶಾತ್‌, ಆಸ್ಪತ್ರೆಗೆ ದಾಖಲಾಗಿದ್ದೇನೆ. ನಾನು ಚೇತರಿಸಿಕೊಂಡಷ್ಟು ಬೇಗನೆ ಯಾತ್ರೆಯಲ್ಲಿ ಭಾಗಿಯಾಗುತ್ತೇನೆ. ಉತ್ತರ ಪ್ರದೇಶದಲ್ಲಿ ಯಾತ್ರೆಗೆ ಏರ್ಪಾಟು ಮಾಡಿರುವ ನನ್ನ ಸಹೋದ್ಯೋಗಿಗಳಿಗೆ, ಯಾತ್ರೆಯಲ್ಲಿ ಪಾಲ್ಗೊಳ್ಳುವವರಿಗೆ ಮತ್ತು ಪ್ರೀತಿಯ ಸಹೋದರನಿಗೆ ಶುಭಕೋರುತ್ತೇನೆ' ಎಂದು ಪ್ರಿಯಾಂಕಾ ಅವರು ಫೆಬ್ರುವರಿ 16ರಂದು ಟ್ವೀಟ್‌ ಮಾಡಿದ್ದರು.

ರಾಹುಲ್‌ ಗಾಂಧಿಗೆ ಸಮನ್ಸ್‌
2018ರಲ್ಲಿ ದಾಖಲಾಗಿರುವ ಮಾನಹಾನಿ ಪ್ರಕರಣಕ್ಕೆ ಸಂಬಂಧಿಸಿದಂತೆ ಫೆಬ್ರುವರಿ 20ರಂದು ವಿಚಾರಣೆಗೆ ಬರುವಂತೆ ಸೂಚಿಸಿ, ರಾಹುಲ್‌ ಗಾಂಧಿ ಅವರಿಗೆ ಸುಲ್ತಾನ್‌ಪುರ ಜಿಲ್ಲಾ ನ್ಯಾಯಾಲಯ ಸಮನ್ಸ್‌ ನೀಡಿದೆ. ಹೀಗಾಗಿ, ಭಾರತ ಜೋಡೊ ನ್ಯಾಯ ಯಾತ್ರೆಗೆ ಮಂಗಳವಾರ ಬೆಳಿಗ್ಗೆ ತಾತ್ಕಾಲಿಕ ಬಿಡುವು ನೀಡಲಾಗುವುದು. ಮಧ್ಯಾಹ್ನ 2ಕ್ಕೆ ಅಮೇಥಿಯ ಫುರಸತ್‌ಗಂಜ್‌ನಲ್ಲಿ ಯಾತ್ರೆ ಪುನರಾರಂಭಗೊಳ್ಳಲಿದೆ ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಜೈರಾಮ್‌ ರಮೇಶ್‌ ಇಂದು (ಸೋಮವಾರ) ಬೆಳಿಗ್ಗೆ ಟ್ವೀಟ್ ಮಾಡಿದ್ದಾರೆ. 

ಇಂದಿನ ಕಾರ್ಯಕ್ರಮಗಳು ನಿಗದಿಯಂತೆ ನಡೆಯಲಿವೆ. ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್‌ ಗಾಂಧಿ ಅವರು ಬಾಬುಗಂಜ್‌ನಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಸಂಜೆ ಮಾತನಾಡಲಿದ್ದಾರೆ ಎಂದೂ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT