ಭಾನುವಾರ, 1 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆಲಂಗಾಣ: ಮಹಿಳೆಯರಿಗೆ ಮಾಸಿಕ ₹2,500, ಉಚಿತ ಬಸ್‌ ಪ್ರಯಾಣ ಭರವಸೆ- ಕಾಂಗ್ರೆಸ್

ತೆಲಂಗಾಣ: ‘ವಿಜಯಭೇರಿ‘ ಸಾರ್ವಜನಿಕ ಸಭೆಯಲ್ಲಿ 6 ಗ್ಯಾರಂಟಿಗಳ ಘೋಷಣೆ
Published 17 ಸೆಪ್ಟೆಂಬರ್ 2023, 16:48 IST
Last Updated 17 ಸೆಪ್ಟೆಂಬರ್ 2023, 16:48 IST
ಅಕ್ಷರ ಗಾತ್ರ

ಹೈದರಾಬಾದ್‌: ಕೆಲವು ತಿಂಗಳುಗಳ ಹಿಂದೆ ಕರ್ನಾಟಕ ರಾಜ್ಯದಲ್ಲಿ ಪಕ್ಷದ ಭಾರಿ ಗೆಲುವಿಗೆ ಕಾರಣವಾಗಿದ್ದ ‘ಗ್ಯಾರಂಟಿಗಳ‘ ಸೂತ್ರವನ್ನು ತೆಲಂಗಾಣದಲ್ಲೂ ಜಾರಿಗೆ ತರಲು ಕಾಂಗ್ರೆಸ್‌ ನಿರ್ಧರಿಸಿದೆ.

ಇಲ್ಲಿಗೆ ಸಮೀಪದ ತುಕ್ಕುಗೂಡದ ‘ವಿಜಯಭೇರಿ’ ಬೃಹತ್‌ ಸಾರ್ವಜನಿಕ ಸಭೆಯಲ್ಲಿ ಕಾಂಗ್ರೆಸ್‌ ನಾಯಕರು ಭಾನುವಾರ ತೆಲಂಗಾಣಕ್ಕೆ ಆರು ಗ್ಯಾರಂಟಿಗಳನ್ನು ಘೋಷಿಸಿದರು. ರಾಜ್ಯದಲ್ಲಿ ಪಕ್ಷ ಅಧಿಕಾರಕ್ಕೆ ಬಂದ ತಕ್ಷಣವೇ ಇವನ್ನ ಜಾರಿಗೊಳಿಸಲು ಬದ್ಧರಾಗಿರುವುದಾಗಿ ಹೇಳಿದರು. 

ತೆಲಂಗಾಣ ವಿಧಾನಸಭೆಯ 119 ಸ್ಥಾನಗಳಿಗಾಗಿ ಡಿಸೆಂಬರ್‌ನಲ್ಲಿ ಚುನಾವಣೆ ನಡೆಯಬೇಕಿದೆ.

ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಹಿರಿಯ ನಾಯಕಿ ಸೋನಿಯಾ ಗಾಂಧಿ ಮತ್ತು ಪಕ್ಷದ ನಾಯಕ ರಾಹುಲ್‌ಗಾಂಧಿ ಅವರು ಆರು ಗ್ಯಾರಂಟಿಗಳನ್ನು ಘೋಷಿಸಿದರು.

ಪ್ರಮುಖವಾಗಿ ಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣದ ಗ್ಯಾರಂಟಿಯನ್ನು ಪಕ್ಷವು ತೆಲಂಗಾಣದಲ್ಲೂ ನೀಡುವುದಾಗಿದೆ ಹೇಳಿದೆ. ಈಗಾಗಲೇ ಕರ್ನಾಟಕದ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ ಸೌಲಭ್ಯ ಇದೆ.

ಒಂದು ಗ್ಯಾರಂಟಿಯನ್ನು ಪ್ರಕಟಿಸಿದ ಸೋನಿಯಾ ಅವರು, ತೆಲಂಗಾಣದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವುದು ತಮ್ಮ ಕನಸು ಎಂದರು.

‘ಮಹಾಲಕ್ಷ್ಮಿ ಯೋಜನೆಯಡಿ ತೆಲಂಗಾಣದಲ್ಲಿನ ಮಹಿಳೆಯರಿಗೆ ತಿಂಗಳಿಗೆ ₹ 2500 ಆರ್ಥಿಕ ನೆರವು ನೀಡಲಾಗುವುದು.  ₹ 500 ದರದಲ್ಲಿ ಅಡುಗೆ ಅನಿಲ ಒದಗಿಸಲಾಗುವುದು. ರಾಜ್ಯದಾದ್ಯಂತ ಟಿಎಸ್‌ಆರ್‌ಟಿಸಿ ಬಸ್ಸುಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ ವ್ಯವಸ್ಥೆ ಮಾಡಲಾಗುವುದು. ತೆಲಂಗಾಣದ ಜನರ ಆಶೋತ್ತರಗಳನ್ನು ಈಡೇರಿಸಲು ನಾವು ಆರು ಗ್ಯಾರಂಟಿಗಳನ್ನು ಘೋಷಿಸುತ್ತಿದ್ದು ಪ್ರತಿಯೊಂದನ್ನೂ ಕಾರ್ಯರೂಪಕ್ಕೆ ತರಲು ಬದ್ಧರಾಗಿದ್ದೇವೆ.  ತೆಲಂಗಾಣ ರಾಜ್ಯದ ಉದಯದ ಸಂದರ್ಭದಲ್ಲಿ ನಾನು ಮತ್ತು ಪಕ್ಷದ ಇತರ ನಾಯಕರು ಭಾಗಿಯಾಗಿದ್ದೆವು. ರಾಜ್ಯವನ್ನು ಈಗ ಹೊಸ ಎತ್ತರಕ್ಕೆ ಒಯ್ಯುವುದು ನಮ್ಮ ಕರ್ತವ್ಯ‘ ಎಂದು ಸೋನಿಯಾ ಹೇಳಿದರು.

‘ತೆಲಂಗಾಣದಲ್ಲಿ ಸಮಾಜದ ಎಲ್ಲ ವರ್ಗದವರ ಪರ ಇರುವ ಕಾಂಗ್ರೆಸ್ ಸರ್ಕಾರವನ್ನು ನೋಡುವುದು ನನ್ನ ಕನಸು. ನೀವು ನಮ್ಮನ್ನು ಬೆಂಬಲಿಸುವಿರಾ‘ ಎಂದು ಅವರು ಕೇಳಿದರು.

ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ತೆಲಂಗಾಣದಲ್ಲಿನ ಆಡಳಿತಾರೂಢ ಬಿಆರ್‌ಎಸ್‌ ಬಿಜೆಪಿಯ ಬಿ ಟೀಮ್‌ ಎಂದರು.

ರಾಹುಲ್‌ ಗಾಂಧಿ ಅವರು,‘ ಬಿಜೆಪಿ, ಬಿಆರ್‌ಎಸ್‌ ಮತ್ತು ಎಂಐಎಂ ಪರಸ್ಪರ ಪಾಲುದಾರರು. ದಲಿತರು, ದುರ್ಬಲ ವರ್ಗದವರು ಮತ್ತು ಬಡವರ ಪರ ಇರುವ ಕಾಂಗ್ರೆಸ್‌ನ ಆಶಯಗಳಿಗೆ ಈ ಪಕ್ಷಗಳು ಧಕ್ಕೆ ತರುತ್ತಿವೆ ಎಂದು ಆರೋಪಿಸಿದರು.

ಪ್ರತಿಷ್ಠಿತ ಕಾಳೇಶ್ವರಂ ಯೋಜನೆಯಲ್ಲಿ ಕೆಸಿಆರ್‌ ಸರ್ಕಾರ ₹ 1 ಲಕ್ಷ ಕೋಟಿಯ ಹಗರಣದಲ್ಲಿ ಭಾಗಿಯಾಗಿದೆ ಎಂದು ಆಪಾದಿಸಿದ ಅವರು ಧರಣಿ ಪೋರ್ಟಲ್‌ ಹೆಸರಿನಲ್ಲಿ ಸರ್ಕಾರ ಶ್ರೀಸಾಮಾನ್ಯನ ಭೂಮಿಯನ್ನು ಕಬಳಿಸಿದೆ ಎಂದೂ ಟೀಕಿಸಿದರು.

‘ರೈತ ಬಂಧು ಕೇವಲ ದೊಡ್ಡ ರೈತರಿಗೆ ಲಾಭದಾಯಕವಾಗಿದೆ. ತೆಲಂಗಾಣದಲ್ಲಿ ಎಷ್ಟು ಮಂದಿ ಬಡವರು ಮನೆಗಳನ್ನು ಪಡೆದಿದ್ದಾರೆ. ರಾಜ್ಯ ಸೇವಾ ಆಯೋಗ ನಡೆಸಿದ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳು ಸೋರಿಕೆಯಾಗಿದೆ. ಎರಡು ಲಕ್ಷ ಉದ್ಯೋಗಗಳು ಖಾಲಿ ಇವೆ. ತೆಲಂಗಾಣದಲ್ಲಿ ಕಾಂಗ್ರೆಸ್‌ ಸರ್ಕಾರ ರಚಿಸಿದ ಬಳಿಕ ನಾವು ನಿಮಗೆ ನಿಮ್ಮ ಹಣವನ್ನು ಹಿಂತಿರುಗಿಸುತ್ತೇವೆ. ನೀವು ದಯವಿಟ್ಟು ಕರ್ನಾಟಕಕ್ಕೆ ಹೋಗಿ ರೈತರು, ಮಹಿಳೆಯರನ್ನು ವಿಚಾರಿಸಿ,  ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್‌ ನೀಡಿದ್ದ ಗ್ಯಾರಂಟಿಗಳನ್ನು ಜಾರಿಗೊಳಿಸಿದೆಯೇ ಎಂದು. ನಿಮಗೆ ಸಕಾರಾತ್ಮಕ ಉತ್ತರ ದೊರಕಲಿದೆ. ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದ ತಕ್ಷಣ ಮೊದಲ ಸಂಪುಟ ಸಭೆಯಲ್ಲಿಯೇ ಐದು ಗ್ಯಾರಂಟಿಗಳಿಗೆ ಅನುಮೋದನೆ ನೀಡಿದಂತೆ, ತೆಲಂಗಾಣದಲ್ಲಿ ಕೂಡ ಅಧಿಕಾರಕ್ಕೆ ಬಂದರೆ ಮೊದಲ ಸಂಪುಟ ಸಭೆಯಲ್ಲಿಯೇ ಆರು ಗ್ಯಾರಂಟಿಗಳಿಗೆ ಅನುಮೋದನೆ ನೀಡಲಾಗುವುದು‘ ಎಂದು ರಾಹುಲ್‌ ಹೇಳಿದರು.

ಮೋದಿ ಸರ್ಕಾರದಿಂದ ಅದಾನಿ ಸಮೂಹ ಮಾತ್ರ ಹೆಚ್ಚಿನ ಲಾಭ ಪಡೆದುಕೊಂಡಿದೆ. ಕೆಸಿಆರ್‌ ಸರ್ಕಾರದ ಕುರಿತು ಹಲವಾರು ಭ್ರಷ್ಟಾಚಾರ ಆರೋಪಗಳಿದ್ದರೂ ಮೋದಿ ಸರ್ಕಾರ ತನಿಖೆ ನಡೆಸಲಿಲ್ಲ. ಇದಕ್ಕೆ ಕಾರಣ ಇವರಿಬ್ಬರೂ ಪಾಲುದಾರರಾಗಿರುವುದು ಎಂದು ಟೀಕಿಸಿದರು.

ತೆಲಂಗಾಣಕ್ಕೆ ರಾಜ್ಯ ಸ್ಥಾನಮಾನ ಒದಗಿಸುವ ದೊಡ್ಡ ಭರವಸೆಯನ್ನು ನಾವೀಗಾಗಲೇ ಈಡೇರಿಸಿದ್ದೇವೆ. ಆರು ಗ್ಯಾರಂಟಿಗಳನ್ನು ಕೂಡ ಜಾರಿಗೊಳಿಸುತ್ತೇವೆ ಎಂದು ಆಶ್ವಾಸನೆ ನೀಡುತ್ತೇವೆ. ಚುನಾವಣೆಯಲ್ಲಿ ನಮ್ಮನ್ನು ಗೆಲ್ಲಿಸಿ‘ ಎಂದು ರಾಹುಲ್‌ ಕೋರಿದರು.

ವಿವಿಧ ರಾಜ್ಯಗಳ ಪಕ್ಷದ ಮುಖ್ಯಮಂತ್ರಿಗಳು, ಹಿರಿಯ ನಾಯಕರು, ತೆಲಂಗಾಣದ ನಾಯಕರು ಸಾರ್ವಜನಿಕ ಸಭೆಯಲ್ಲಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT