ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Bharat Jodo Nyay Yatra | ಮಾರ್ಚ್ 17ರಂದು ಸಮಾರೋಪ: ಚುನಾವಣೆಗೆ ರಣಕಹಳೆ

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ನೇತೃತ್ವದ ಭಾರತ್ ಜೋಡೊ ನ್ಯಾಯ ಯಾತ್ರೆ
Published 8 ಮಾರ್ಚ್ 2024, 13:29 IST
Last Updated 8 ಮಾರ್ಚ್ 2024, 13:29 IST
ಅಕ್ಷರ ಗಾತ್ರ

ಮುಂಬೈ: ‘ರಾಹುಲ್‌ ಗಾಂಧಿ ನೇತೃತ್ವದ ಭಾರತ್ ಜೋಡೊ ನ್ಯಾಯ ಯಾತ್ರೆಯು ಮಾರ್ಚ್ 17ರಂದು ಮುಂಬೈನಲ್ಲಿನ ಶಿವಾಜಿ ಪಾರ್ಕ್‌ನಲ್ಲಿ ರ‍್ಯಾಲಿಯೊಂದಿಗೆ ಸಮಾರೋಪಗೊಳ್ಳಲಿದ್ದು, ಇದೇ ಸಂದರ್ಭ ಲೋಕಸಭಾ ಚುನಾವಣೆಗೆ ರಣಕಹಳೆ ಮೊಳಗಲಿದೆ’ ಎಂದು ಮಹಾರಾಷ್ಟ್ರ ಕಾಂಗ್ರೆಸ್ ಘಟಕದ ಅಧ್ಯಕ್ಷ ನಾನಾ ಪಟೋಲೆ ತಿಳಿಸಿದರು.

‘ಇದೇ 12ರಂದು ನಂದುರ್‌ಬಾರ್‌ನಿಂದ ಯಾತ್ರೆಯು ಮಹಾರಾಷ್ಟ್ರ ಪ್ರವೇಶಿಸಲಿದೆ. ಇದಕ್ಕೆ ಸಂಬಂಧಿಸಿದ ಸಕಲ ಸಿದ್ಧತೆಗಳು ಪೂರ್ಣಗೊಂಡಿವೆ. ಅನುಮತಿಯೂ ಸಿಕ್ಕಿದೆ’ ಎಂದು ಹೇಳಿದರು.

‘ಶರದ್‌ ಪವಾರ್‌ ನೇತೃತ್ವದ ಎನ್‌ಸಿಪಿ, ಉದ್ಧವ್‌ ಸಾರಥ್ಯದ ಶಿವಸೇನೆ ಹಾಗೂ ಮಹಾ ವಿಕಾಸ್‌ ಅಘಾಡಿಯ ಮುಖಂಡರು ಈ ರ‍್ಯಾಲಿಯಲ್ಲಿ ಭಾಗಿಯಾಗಲಿದ್ದಾರೆ’ ಎಂದು ಅವರು ಮಾಹಿತಿ ನೀಡಿದರು.

‘ಸಮರ್ಥ ಅಭ್ಯರ್ಥಿಗಳು ಇಲ್ಲದಿರುವುದರಿಂದ ಬಿಜೆಪಿಯು ವಿರೋಧ ಪಕ್ಷದಲ್ಲಿನ ನಾಯಕರನ್ನು ಕದಿಯುತ್ತಿದೆ’ ಎಂದು ದೂರಿದ ಪಟೋಲೆ, ‘ಬಿಜೆಪಿಯು ತನ್ನ ಮೊದಲ ಪಟ್ಟಿಯಲ್ಲಿ ನಾಗ್ಪುರದಿಂದ ರಾಷ್ಟ್ರೀಯ ನಾಯಕ ನಿತಿನ್ ಗಡ್ಕರಿ ಹೆಸರು ಪ್ರಕಟಿಸಿಲ್ಲ. ಕಾಂಗ್ರೆಸ್‌ ಇಲ್ಲಿ ಸಮರ್ಥ ಅಭ್ಯರ್ಥಿಯನ್ನು ಹೊಂದಿದ್ದು, ಈ ಬಾರಿ ಗೆಲುವು ಸಾಧಿಸಲಿದೆ’ ಎಂದು ಹೇಳಿದರು.

ಪಕ್ಷದ ರಾಜ್ಯ ಉಸ್ತುವಾರಿ ರಮೇಶ್‌ ಚೆನ್ನಿತ್ತಲ ಸಮ್ಮುಖದಲ್ಲಿ ಯಾತ್ರೆಗೆ ಸಂಬಂಧಿಸಿದಂತೆ ಕಾಂಗ್ರೆಸ್‌ ನಾಯಕರು ಗುರುವಾರ ಪರಿಶೀಲನಾ ಸಭೆ ನಡೆಸಿದರು.

ಗೋವಿಂದ್‌ ಗುರುಗೆ ಗೌರವ ನಮನ

ದಾಹೋದ್: ಭಾರತ್‌ ಜೋಡೊ ನ್ಯಾಯ ಯಾತ್ರೆಯು ಗುಜರಾತ್‌ನಲ್ಲಿ ಎರಡನೇ ದಿನ ಸಂಚರಿಸಿತು.  ಝಲೋದ್‌ ಬಳಿಯ ಕಾಂಬೋಯಿ ಧಾಮ್‌ಗೆ ಶುಕ್ರವಾರ ಭೇಟಿ ನೀಡಿದ ರಾಹುಲ್ ಗಾಂಧಿ ಬುಡಕಟ್ಟು ಜನರ ನಾಯಕ ಗೋವಿಂದ್‌ ಗುರುಗೆ ಗೌರವ ನಮನ ಸಲ್ಲಿಸಿದರು. ದಾಹೋದ್‌ ಪಟ್ಟಣದಿಂದ ಯಾತ್ರೆಯು ಪುನರಾರಂಭಗೊಂಡಿತು. ಹಾದಿಯುದ್ದಕ್ಕೂ ಕಾಂಗ್ರೆಸ್‌ ಕಾರ್ಯಕರ್ತರು ಸ್ಥಳೀಯರು ರಾಹುಲ್‌ ಅವರನ್ನು ಸ್ವಾಗತಿಸಿದರು. ಬುಡಕಟ್ಟು ಜನಾಂಗದವರು ತಮ್ಮ ಸಾಂಪ್ರದಾಯಿಕ ನೃತ್ಯವನ್ನು ಪ್ರದರ್ಶಿಸಿದರು. ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಮಹಿಳಾ ಕಾರ್ಯಕರ್ತರು ನೀಡಿದ ಕೇಕ್‌ ಅನ್ನು ರಾಹುಲ್‌ ಗಾಂಧಿ ಕತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT