ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ನ ಡಿಎನ್‌ಎಯಲ್ಲೇ ಭ್ರಷ್ಟಾಚಾರವಿದೆ: ಜೆ.ಪಿ ನಡ್ಡಾ

ಕಾಂಗ್ರೆಸ್ ಪಕ್ಷ ಅಂತರ್ಗತವಾಗಿ ಭ್ರಷ್ಟವಾಗಿದೆ ಎಂದು ಬಿಜೆಪಿ ಅಧ್ಯಕ್ಷ ಜೆ.ಪಿ ನಡ್ಡಾ ಆರೋಪಿಸಿದ್ದಾರೆ.
Published 16 ಅಕ್ಟೋಬರ್ 2023, 6:52 IST
Last Updated 16 ಅಕ್ಟೋಬರ್ 2023, 6:52 IST
ಅಕ್ಷರ ಗಾತ್ರ

ನವದೆಹಲಿ: ಕಾಂಗ್ರೆಸ್‌ನ ಡಿಎನ್‌ಎಯಲ್ಲೇ ಭ್ರಷ್ಟಾಚಾರವಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ವಾಗ್ದಾಳಿ ನಡೆಸಿದ್ದಾರೆ.

ಬೆಂಗಳೂರಿನ ಮಾಜಿ ಕಾರ್ಪೊರೇಟರ್‌ಗೆ ಸೇರಿದ ಮನೆಯಿಂದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ₹42 ಕೋಟಿ ನಗದು ಜಪ್ತಿ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಡ್ಡಾ ಈ ಹೇಳಿಕೆ ನೀಡಿದ್ದಾರೆ. ಕರ್ನಾಟಕ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಬೆಂಬಲಿತ ಗುತ್ತಿಗೆದಾರರು ಅಕ್ರಮ ಹಣ ವರ್ಗಾವಣೆ ಮತ್ತು ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಈ ಬಗ್ಗೆ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ ಅವರು, 'ಕಾಂಗ್ರೆಸ್ ಮತ್ತು ಭ್ರಷ್ಟಾಚಾರ ಒಂದೇ ನಾಣ್ಯದ ಎರಡು ಮುಖಗಳು. ಅದು ಭರವಸೆ ನೀಡುವ ಕಲೆಯನ್ನು ಕರಗತ ಮಾಡಿಕೊಂಡಿದೆ. ಈಗ ಒಂದು ಹೆಜ್ಜೆ ಮುಂದೆ ಹೋಗಿದೆ. ಭರವಸೆಗಳಿಗೆ ಪ್ರತಿಯಾಗಿ ಭರವಸೆಗಳನ್ನೇ ನೀಡಲು ಪ್ರಾರಂಭಿಸಿದೆ. ಇದು ಇತ್ತೀಚೆಗೆ ಬಹಿರಂಗವಾಗಿದೆ' ಎಂದಿದ್ದಾರೆ.

'ಕರ್ನಾಟಕದ ಕೆಲವು ಗುತ್ತಿಗೆದಾರರ ಮನೆಗಳಲ್ಲಿ ₹100 ಕೋಟಿಗೂ ಹೆಚ್ಚು ಮೌಲ್ಯದ ನಗದು ಪತ್ತೆಯಾಗಿದೆ. ಇದು ಮತದಾರರನ್ನು ಅತ್ಯಂತ ಅವಮಾನಕರ ರೀತಿಯಲ್ಲಿ ನಡೆಸಿಕೊಂಡಿದ್ದಕ್ಕೆ ಉದಾಹರಣೆ ಎಂದು ಅವರು ಕಿಡಿಕಾರಿದರು.

ಕಾಂಗ್ರೆಸ್ ಸರ್ಕಾರ ಕರ್ನಾಟಕದ ದೌರ್ಭಾಗ್ಯ:

'ಇದೇ ಕಾಂಗ್ರೆಸ್ ಬೆಂಬಲಿತ ಗುತ್ತಿಗೆದಾರರು ಕರ್ನಾಟಕ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಬಿಜೆಪಿ ವಿರುದ್ಧ ಸುಳ್ಳು ಆರೋಪ ಮಾಡಿದ್ದರು. ಇಂದು ಕಾಂಗ್ರೆಸ್ ಸರ್ಕಾರ ಕರ್ನಾಟಕದ ದೌರ್ಭಾಗ್ಯವಾಗಿದೆ. ಹಣ ಅಕ್ರಮ ವರ್ಗಾವಣೆ, ಭ್ರಷ್ಟಾಚಾರ ಮತ್ತು ಮುಂಬರುವ ಚುನಾವಣೆಗಳಿಗೆ ಹಣ ಸಂಗ್ರಹಿಸಲು ರಾಜ್ಯವನ್ನು ಎಟಿಎಂ ಮಾಡಿದೆ' ಎಂದು ದೂರಿದರು.

'ಲೂಟಿಯ ಗ್ಯಾರಂಟಿ':

'ಛತ್ತೀಸಗಢ ಮತ್ತು ರಾಜಸ್ಥಾನವನ್ನು ಭ್ರಷ್ಟಾಚಾರದ ಎಟಿಎಂಗಳಾಗಿ ಮಾರ್ಪಡಿಸಿರುವ ಕಾಂಗ್ರೆಸ್‌ ಇದೀಗ ಜನರ ಹಣ ಲೂಟಿ ಮಾಡಲು ತೆಲಂಗಾಣ ಹಾಗೂ ಮಧ್ಯಪ್ರದೇಶವನ್ನು ಅದೇ ಮಾದರಿಯ ಎಟಿಎಂಗಳನ್ನಾಗಿ ಮಾಡಲು ಹೊರಟಿದೆ. ರಾಜ್ಯದ ಅಭಿವೃದ್ಧಿ ಮತ್ತು ಬಡವರ ಕಲ್ಯಾಣದ ಹೆಸರಿನಲ್ಲಿ ಸಾಕಷ್ಟು ಹಣ ಲೂಟಿ ಹೊಡೆಯಬಹುದು ಎಂಬ ಕನಸು ಕಾಣುತ್ತಿರುವ ಕಾಂಗ್ರೆಸ್‌ ತೆಲಂಗಾಣ ಮತ್ತು ಮಧ್ಯಪ್ರದೇಶದ ಚುನಾವಣೆ ಎದುರಿಸುತ್ತಿದೆ. ಹೀಗಾಗಿ ಕಾಂಗ್ರೆಸ್‌ ಕೇವಲ ಲೂಟಿಯ ಗ್ಯಾರಂಟಿಯನ್ನು ನೀಡಬಹುದಷ್ಟೇ' ಎಂದು ‌ಅವರು ಹೇಳಿದರು.

ಆದಾಯ ತೆರಿಗೆ (ಐಟಿ) ಇಲಾಖೆ ಅಧಿಕಾರಿಗಳು ಕಳೆದ ವಾರ ಗುರುವಾರ ಬೆಂಗಳೂರಿನಲ್ಲಿ ಗುತ್ತಿಗೆದಾರ ಆರ್. ಅಂಬಿಕಾಪತಿ ಅವರಿಗೆ ಸೇರಿದ ₹42 ಕೋಟಿ ಮೌಲ್ಯದ ನಗದು ವಶಪಡಿಸಿಕೊಂಡಿದ್ದಾರೆ. ನವೆಂಬರ್‌ನಲ್ಲಿ ನಡೆಯಲಿರುವ ತೆಲಂಗಾಣ ಸೇರಿದಂತೆ ‌ಇತರ ನಾಲ್ಕು ರಾಜ್ಯಗಳ ವಿಧಾನಸಭಾ ಚುನಾವಣೆ ಪ್ರಚಾರಕ್ಕಾಗಿ ಈ ಹಣ ಕಾಂಗ್ರೆಸ್‌ನ ಅಕ್ರಮ ನಿಧಿಯ ಭಾಗವಾಗಿದೆ ಎಂದು ಬಿಜೆಪಿ ಆರೋಪಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT