ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರ್ನಬ್‌ ವಿರುದ್ಧದ ನಕಲಿ TRP ಪ್ರಕರಣ ಹಿಂಪಡೆಯಲು ಮುಂದಾದ ಪೊಲೀಸರು; ನೋಟಿಸ್ ಜಾರಿ

Published 28 ಡಿಸೆಂಬರ್ 2023, 13:28 IST
Last Updated 28 ಡಿಸೆಂಬರ್ 2023, 13:40 IST
ಅಕ್ಷರ ಗಾತ್ರ

ಮುಂಬೈ: ಟಿ.ವಿ. ಪತ್ರಕರ್ತ ಅರ್ನಬ್ ಗೋಸ್ವಾಮಿ ಆರೋಪಿಯಾಗಿರುವ ನಕಲಿ ಟಿಆರ್‌ಪಿ ಪ್ರಕರಣವನ್ನು ಹಿಂಪಡೆಯಲು ಪೊಲೀಸರು ಅರ್ಜಿ ಸಲ್ಲಿಸಿದ್ದು, ಇದಕ್ಕೆ ದೂರುದಾರರು ತಮ್ಮ ಪ್ರತಿಕ್ರಿಯೆ ಸಲ್ಲಿಸುವಂತೆ ಮುಂಬೈ ನ್ಯಾಯಾಲಯ ಗುರುವಾರ ನೋಟಿಸ್ ಜಾರಿ ಮಾಡಿದೆ.

ವಿವಿಧ ಟಿ.ವಿ. ಚಾನಲ್‌ಗಳು ತಮ್ಮ ಜನಪ್ರಿಯತೆಗಾಗಿ ವೀಕ್ಷಕರ ಸಂಖ್ಯೆಯನ್ನು ನಿರ್ಧರಿಸುವ ಟಿಆರ್‌ಪಿ (ಟೆಲಿವಿಷನ್ ರೇಟಿಂಗ್ ಪಾಯಿಂಟ್ಸ್‌) ಅನ್ನು ಅಕ್ರಮವಾಗಿ ತಿರುಚಿವೆ ಎಂದು ಬ್ರಾಡ್‌ಕಾಸ್ಟ್‌ ಆಡಿಯನ್ಸ್‌ ರಿಸರ್ಚ್‌ ಕೌನ್ಸಿಲ್‌ (BARC) ದೂರು ನೀಡಿತ್ತು. ಇದನ್ನು ಆಧರಿಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.

2020ರ ಅಕ್ಟೋಬರ್‌ನಲ್ಲಿ ದಾಖಲಾದ ಈ ಪ್ರಕರಣವನ್ನು ಹಿಂಪಡೆಯಲು ಮುಂಬೈ ಕ್ರೈಂ ಬ್ರಾಂಚ್‌, ಕಳೆದ ನವೆಂಬರ್‌ನಲ್ಲಿ ನ್ಯಾಯಾಲಯವನ್ನು ಕೋರಿತ್ತು. ಅರ್ಜಿಯ ವಿಚಾರಣೆ ನಡೆಸಿದ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್‌ ಎಲ್‌.ಎಸ್‌.ಪಾಧೇನ್‌ ಅವರು ಪ್ರಕರಣ ಹಿಂಪಡೆಯುವ ಪೊಲೀಸರ ನಿರ್ಧಾರ ಕುರಿತು ಪ್ರತಿಕ್ರಿಯೆ ಸಲ್ಲಿಸುವಂತೆ ದೂರುದಾರರಿಗೆ ನೋಟಿಸ್ ಜಾರಿ ಮಾಡಿದರು. ಮುಂದಿನ ವಿಚಾರಣೆಯನ್ನು ಜ. 18ಕ್ಕೆ ಮುಂದೂಡಿದರು.

ಏನಿದು ಪ್ರಕರಣ...?

ಕಾನೂನು ಉಲ್ಲಂಘಿಸಿ ಟಿಆರ್‌ಪಿ ತಿರುಚಿದ ಕುರಿತು ಹಂಸ ಸಂಶೋಧನಾ ಸಮೂಹದ ಮೂಲಕ ಬಾರ್ಕ್‌ ಪ್ರಕರಣ ದಾಖಲಿಸಿತ್ತು. ಮುಂಬೈ ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿದ್ದ ಪೂರಕ ಆರೋಪ ಪಟ್ಟಿಯಲ್ಲಿ ಅರ್ನಬ್ ಗೋಸ್ವಾಮಿ ಹೆಸರನ್ನು ಸೇರಿಸಿದ್ದರು. ಇದರಲ್ಲಿ ಬಾರ್ಕ್‌ನ ಮಾಜಿ ಸಿಇಒ ಪಾರ್ತೊ ದಾಸ್‌ಗುಪ್ತಾ ಜತೆಗೂಡಿ ಅರ್ನಬ್ ಅವರು ಟಿಆರ್‌ಪಿಯನ್ನು ಅಕ್ರಮವಾಗಿ ತಿರುಚಿದ್ದಾರೆ ಎಂದು ಆರೋಪಿಸಲಾಗಿತ್ತು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ರೈಂ ಬ್ರಾಂಚ್ ಅಧಿಕಾರಿಗಳು 12 ಜನರನ್ನು ಬಂಧಿಸಿದ್ದರು. ಇದರಲ್ಲಿ ರಿಪಬ್ಲಿಕ್ ಟಿ.ವಿ. ವಿತರಣಾ ವಿಭಾಗದ ಮುಖ್ಯಸ್ಥ ಹಾಗೂ ಇನ್ನಿತರ ಎರಡು ಚಾನಲ್‌ಗಳ ಮಾಲೀಕರೂ ಸೇರಿದ್ದಾರೆ. ಇವರು ಸದ್ಯ ಜಾಮೀನು ಪಡೆದಿದ್ದಾರೆ.

ಪ್ರಕರಣಕ್ಕೆ ಪೂರಕವಾಗಿ ಅರ್ನಬ್ ಮತ್ತು ದಾಸ್‌ಗುಪ್ತಾ ನಡುವಿನ ವಾಟ್ಸ್‌ಆ್ಯಪ್ ಚಾಟ್‌ ಅನ್ನು ಸಾಕ್ಷ್ಯವಾಗಿ ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಮುಂಬೈ ಪೊಲೀಸರ ಎಫ್‌ಐಆರ್ ಆಧರಿಸಿ ಜಾರಿ ನಿರ್ದೇಶನಾಲಯ (ಇ.ಡಿ.) ಕೂಡಾ ಟಿಆರ್‌ಪಿ ಹಗರಣ ಎಂದು ಪರಿಗಣಿಸಿ ಹಣ ಅಕ್ರಮ ವರ್ಗಾವಣೆ ಪ್ರಕರಣವನ್ನು ದಾಖಲಿಸಿಕೊಂಡಿದೆ. 

ಆದರೆ ಕಳೆದ ಸೆಪ್ಟೆಂಬರ್‌ನಲ್ಲಿ ಇ.ಡಿ. ಆರೋಪ ಪಟ್ಟಿ ಸಲ್ಲಿಸಿದ್ದು, ಇದರಲ್ಲಿ ರಿಪಬ್ಲಿಕ್ ಟಿ.ವಿ. ವಿರುದ್ಧದ ಆರೋಪ ಸಾಬೀತುಪಡಿಸುವ ಯಾವುದೇ ಸಾಕ್ಷ್ಯಗಳಿಲ್ಲ ಎಂದು ಹೇಳಿದೆ. ಜತೆಗೆ ಈ ಪ್ರಕರಣದಲ್ಲಿ ಮುಂಬೈ ಪೊಲೀಸರು ತನಿಖೆಯೇ ವ್ಯತಿರಿಕ್ತವಾಗಿದೆ ಎಂದೂ ಇ.ಡಿ. ಹೇಳಿದೆ. 

ಮಂಗಳವಾರ ನಡೆದ ವಿಚಾರಣೆ ವೇಳೆ ಪ್ರಾಸಿಕ್ಯೂಷನ್ ಪರ ವಕೀಲರು ಪ್ರಕರಣ ಹಿಂಪಡೆಯಲು ಕೋರಿ ಅರ್ಜಿ ಸಲ್ಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT