ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೊಲೀಸ್‌ ಠಾಣೆಯ ಎಲ್ಲೆಡೆ ಸಿ.ಸಿ.ಟಿ.ವಿ ಕ್ಯಾಮೆರಾ

ಸಿಬಿಐ, ಎನ್‌ಐಎ, ಇ.ಡಿಗೂ ಅನ್ವಯ: ಸುಪ್ರೀಂ ಕೋರ್ಟ್
Last Updated 2 ಡಿಸೆಂಬರ್ 2020, 22:04 IST
ಅಕ್ಷರ ಗಾತ್ರ

ನವದೆಹಲಿ: ಪೊಲೀಸ್ ಠಾಣೆ, ಸಿಬಿಐ, ಜಾರಿ ನಿರ್ದೇಶಾನಲಯ, ರಾಷ್ಟ್ರೀಯ ತನಿಖಾ ಸಂಸ್ಥೆ ಸೇರಿದಂತೆವಿಚಾರಣೆ ನಡೆಸುವ ಮತ್ತು ಬಂಧಿಸುವ ಅಧಿಕಾರ ಇರುವ ದೇಶದ ಎಲ್ಲಾ ಏಜೆನ್ಸಿಗಳ ಕಚೇರಿಗಳಲ್ಲಿ ಧ್ವನಿಮುದ್ರಣ ಸವಲತ್ತು ಇರುವ ಸಿ.ಸಿ.ಟಿ.ವಿ ಕ್ಯಾಮೆರಾವನ್ನು ಅಳವಡಿಸಬೇಕು ಎಂದು ಸುಪ್ರೀಂ ಕೋರ್ಟ್‌ ಬುಧವಾರ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿದೆ.

'ದೇಶದ ಎಲ್ಲಾ ಪೊಲೀಸ್ ಠಾಣೆಗಳಲ್ಲಿ ಸಿ.ಸಿ.ಟಿ.ವಿ. ಕ್ಯಾಮೆರಾಗಳನ್ನು ಅಳವಡಿಸಿ' ಎಂದು ಪೊಲೀಸ್ ಠಾಣೆಯಲ್ಲಿ ವ್ಯಕ್ತಿಯೊಬ್ಬರ ಮೇಲೆ ನಡೆದಿದ್ದ ದೌರ್ಜನ್ಯ ಪ್ರಕರಣದ ವಿಚಾರಣೆ ವೇಳೆ 2018ರಲ್ಲಿ ಸುಪ್ರೀಂ ಕೋರ್ಟ್‌ ಆದೇಶ ನೀಡಿತ್ತು. ಇದನ್ನು ಜಾರಿಗೆ ತಂದ ಸಂಬಂಧ ರಾಜ್ಯ ಸರ್ಕಾರಗಳು ಸಲ್ಲಿಸಿದ್ದ ಪ್ರಮಾಣಪತ್ರದ ವಿಚಾರಣೆ ವೇಳೆ ನ್ಯಾಯಮೂರ್ತಿ ಆರ್‌.ಎಫ್‌.ನಾರೀಮನ್ ಅವರ ನೇತೃತ್ವದ ತ್ರಿಸದಸ್ಯ ಪೀಠವು ಬುಧವಾರ ಈ ನಿರ್ದೇಶನ ನೀಡಿದೆ.

'ಸಿಬಿಐ, ರಾಷ್ಟ್ರೀಯ ತನಿಖಾ ದಳ, ಜಾರಿ ನಿರ್ದೇಶನಾಲಯ, ಮಾದಕವಸ್ತು ನಿಯಂತ್ರಣ ಬ್ಯೂರೊ, ರೆವಿನ್ಯು ಇಂಟಲಿಜೆನ್ಸ್ ವಿಭಾಗ, ಗಂಭೀರ ವಂಚನೆ ತನಿಖಾ ಕಚೇರಿ ಮತ್ತು ಕೇಂದ್ರ ಸರ್ಕಾರದ ಅಡಿಯಲ್ಲಿ ಬರುವ ಯಾವುದೇ ತನಿಖಾ ಸಂಸ್ಥೆಗಳ ಕಚೇರಿಗಳಲ್ಲಿ ಧ್ವನಿಮುದ್ರಣ ಸವಲತ್ತು ಸಿ.ಸಿ.ಟಿ.ವಿ. ಕ್ಯಾಮೆರಾಗಳನ್ನು ಅಳವಡಿಸಬೇಕು. ಇದು ಕೇಂದ್ರ ಸರ್ಕಾರದ ಹೊಣೆ' ಎಂದು ನ್ಯಾಯಮೂರ್ತಿಗಳಾದ ಕೆ.ಎಂ.ಜೋಸೆಫ್ ಮತ್ತಯ ಅನಿರುದ್ಧ ಬೋಸ್ ಅವರಿದ್ದ ಪೀಠವು ಸೂಚಿಸಿದೆ.

'ಈ ಎಲ್ಲಾ ಏಜೆನ್ಸಿಗಳು ತಮ್ಮ ಕಚೇರಿಗಳಲ್ಲಿ ವಿಚಾರಣೆ ನಡೆಸುತ್ತವೆ. ಪೊಲೀಸ್ ಠಾಣೆಗಳಲ್ಲಿ ಆರೋಪಿಗಳನ್ನು ಇರಿಸಿಕೊಳ್ಳುವ ಮತ್ತು ವಿಚಾರಣೆ ನಡೆಸುವ ರೀತಿಯಲ್ಲಿಯೇ ಈ ಏಜೆನ್ಸಿಗಳ ಕಚೇರಿಗಳಲ್ಲೂ ವಿಚಾರಣೆ ನಡೆಯುತ್ತದೆ. ಆರೋಪಿಗಳನ್ನು ಕಚೇರಿಗಳಲ್ಲಿ ಇರಿಸಿಕೊಳ್ಳಲಾಗುತ್ತದೆ. ಹೀಗಾಗಿ ಈ ಕಚೇರಿಗಳಲ್ಲೂ ಸಿ.ಸಿ.ಟಿ.ವಿ. ಕ್ಯಾಮೆರಾ ಅಳವಡಿಸಬೇಕು' ಎಂದು ಪೀಠವು ತನ್ನ ನಿರ್ದೇಶನದಲ್ಲಿ ತಿಳಿಸಿದೆ.

'ಠಾಣೆಗಳಲ್ಲಿ, ತನಿಖಾ ಏಜೆನ್ಸಿಗಳ ಕಚೇರಿಯಲ್ಲಿ ವಿಚಾರಣೆ ವೇಳೆ ಸಿಬ್ಬಂದಿಯು ಬಲಪ್ರಯೋಗ ನಡೆಸಿದ್ದರಿಂದ ಆರೋಪಿಗಳಿಗೆ ಗಾಯವಾಗಿದ್ದರೆ ಮತ್ತು ಸಾವು ಸಂಭವಿಸಿದ್ದರೆ ಸಂತ್ರಸ್ತರು ಆ ಬಗ್ಗೆ ದೂರು ನೀಡಲು ಅವಕಾಶವಿರಬೇಕು. ಇದಕ್ಕಾಗಿ ಸಿ.ಸಿ.ಟಿ.ವಿ. ಕ್ಯಾಮೆರಾಗಳು ಅಗತ್ಯವಾಗಿವೆ. ದೀರ್ಘಾವಧಿ ಸಂಗ್ರಹ ಸಾಮರ್ಥ್ಯವಿದ್ದರೆ, ಸಂತ್ರಸ್ತರಿಗೆ ಹೆಚ್ಚು ಅನುಕೂಲವಾಗಲಿದೆ' ಎಂದು ಪೀಠವು ಹೇಳಿದೆ.

14 ರಾಜ್ಯಗಳಿಂದಷ್ಟೇ ವಿವರ ಸಲ್ಲಿಕೆ:2018ರ ಆದೇಶವನ್ನು ಜಾರಿಗೆ ತಂದದ್ದರ ಬಗ್ಗೆ ನವೆಂಬರ್ 24ರವರೆಗೆ ಕೇವಲ 14 ರಾಜ್ಯಗಳಷ್ಟೇ ಪ್ರಮಾಣ ಪತ್ರವನ್ನು ಸಲ್ಲಿಸಿವೆ. ಪೊಲೀಸ್ ಠಾಣೆಗಳಲ್ಲಿ ಅಳವಡಿಸಲಾದ ಕ್ಯಾಮೆರಾಗಳ ಪೊಸಿಷನ್ ಮತ್ತು ಮೇಲ್ವಿಚಾರಣಾ ಸಮಿತಿ ರಚಿಸಿದ್ದರ ಬಗ್ಗೆ ಬಹುತೇಕ ರಾಜ್ಯಗಳು ಮಾಹಿತಿ ನೀಡಿಲ್ಲ ಎಂದು ಪೀಠವು ತಿಳಿಸಿದೆ. ಇನ್ನು ಆರು ವಾರಗಳ ಒಳಗೆ ಈ ಬಗ್ಗೆ ವಿವರವನ್ನು ಸಲ್ಲಿಸಬೇಕು ಎಂದು ಎಲ್ಲಾ ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶದ ಸರ್ಕಾರಗಳಿಗೆ ಪೀಠವು ಸೂಚನೆ ನೀಡಿದೆ.

ನಿರ್ದೇಶನಗಳು

* ಪೊಲೀಸ್ ಠಾಣೆಗಳ ಪ್ರವೇಶ ದ್ವಾರ ಮತ್ತು ನಿರ್ಗಮನ ದ್ವಾರಗಳಲ್ಲಿ, ಮುಖ್ಯದ್ವಾರ, ಸ್ವಾಗತಮೇಜು, ಲಾಬಿಯಲ್ಲಿ ಅಳವಡಿಕೆ

* ಲಾಕ್‌ಅಪ್‌ ಒಳಗೆ, ಲಾಕ್‌ಅಪ್‌ನ ಹೊರಗೆ, ಕಾರಿಡಾರ್‌ನಲ್ಲಿ ಅಳವಡಿಕೆ

* ಎಲ್ಲಾ ಸಿ.ಸಿ.ಟಿ.ವಿ. ಕ್ಯಾಮೆರಾಗಳಲ್ಲಿ ಧ್ವನಿಮುದ್ರಣ ವ್ಯವಸ್ಥೆ ಕಡ್ಡಾಯವಾಗಿ ಇರಲೇಬೇಕು

* ಎಲ್ಲಾ ಠಾಣೆಗಳಲ್ಲಿ ಅಳವಡಿಸಿರುವ ಸಿ.ಸಿ.ಟಿ.ವಿ. ಕ್ಯಾಮೆರಾಗಳು ಒಂದೇ ರೀತಿಯ ಪೊಸಿಷನ್‌ನಲ್ಲಿ ಇರಬೇಕು

* ಸಿ.ಸಿ.ಟಿ.ವಿ. ಕ್ಯಾಮೆರಾಗಳಲ್ಲಿ ದಾಖಲಾದ ದೃಶ್ಯಗಳು ಕನಿಷ್ಠ 6 ತಿಂಗಳು ಸಂಗ್ರಹವಾಗಿರಬೇಕು. ಸಂಗ್ರಹದ ಅವಧಿ ಒಂದು ವರ್ಷದಷ್ಟು ಇದ್ದರೂ ಅಡ್ಡಿಯಿಲ್ಲ

* ಸಿ.ಸಿ.ಟಿ.ವಿ. ಕ್ಯಾಮೆರಾಗಳ ನಿರ್ವಹಣೆ, ಮೇಲ್ವಿಚಾರಣೆ ಮತ್ತು ಅವು ಸರಿಯಾಗಿ ದೃಶ್ಯಗಳನ್ನು ದಾಖಲಿಸುತ್ತಿವೆಯೇ ಎಂಬುದರ ಮೇಲೆ ನಿಗಾ ಇರಿಸುವ ಕೆಲಸ ಠಾಣಾಧಿಕಾರಿಯದ್ದು (ಸ್ಟೇಷನ್ ಹೌಸ್ ಆಫೀಸರ್‌)

* ಈ ವ್ಯವಸ್ಥೆಗಳನ್ನು ಅಳವಡಿಸಲು ಅಗತ್ಯವಿರುವ ಅನುದಾನವನ್ನು ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಶೀಘ್ರವೇ ಮಂಜೂರು ಮಾಡಿ, ಬಿಡುಗಡೆ ಮಾಡಬೇಕು

* ವಿದ್ಯುತ್ ಸಂಪರ್ಕ ಇಲ್ಲದ ಪ್ರದೇಶದಲ್ಲಿ ಇರುವ ಠಾಣೆಗಳಲ್ಲೂ ಸಿ.ಸಿ.ಟಿ.ವಿ. ಕ್ಯಾಮೆರಾ ಅಳವಡಿಸಬೇಕು. ಸೌರವಿದ್ಯುತ್ ಇಲ್ಲವೇ ಪವನ ವಿದ್ಯುತ್ ವ್ಯವಸ್ಥೆಯನ್ನು ಕಲ್ಪಿಸಬೇಕು

ಮೇಲ್ವಿಚಾರಣಾ ಸಮಿತಿ

ರಾಜ್ಯಮಟ್ಟದ ಮೇಲ್ವಿಚಾರಣಾ ಸಮಿತಿ ಸದಸ್ಯರು: ಗೃಹ ಸಚಿವಾಲಯದ ಕಾರ್ಯದರ್ಶಿ ಅಥವಾ ಹೆಚ್ಚುವರಿ ಕಾರ್ಯದರ್ಶಿ, ಹಣಕಾಸು ಇಲಾಖೆಯ ಕಾರ್ಯದರ್ಶಿ ಅಥವಾ ಹೆಚ್ಚುವರಿ ಕಾರ್ಯದರ್ಶಿ, ಪೊಲೀಸ್ ಮಹಾ ನಿರ್ದೇಶಕ ಅಥವಾ ಐಜಿಪಿ, ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರು ಅಥವಾ ಸದಸ್ಯರು. ಸಿ.ಸಿ.ಟಿ.ವಿ. ಕ್ಯಾಮೆರಾ ಸಿಸ್ಟಂಗಳ ಖರೀದಿ, ವಿತರಣೆ ಮತ್ತು ಅಳವಡಿಕೆಯ ಹೊಣೆ

ಜಿಲ್ಲಾಮಟ್ಟದ ಮೇಲ್ವಿಚಾರಣಾ ಸಮಿತಿ ಸದಸ್ಯರು: ವಿಭಾಗೀಯ ಆಯುಕ್ತ ಅಥವಾ ಪ್ರಾದೇಶಿಕ ಆಯುಕ್ತ ಅಥವಾ ಜಿಲ್ಲಾ ವಿಭಾಗೀಯ ರೆವಿನ್ಯು ಆಯುಕ್ತ, ಜಿಲ್ಲಾ ಮ್ಯಾಜಿಸ್ಟ್ರೇಟ್, ಪೊಲೀಸ್ ವರಿಷ್ಠಾಧಿಕಾರಿ, ಮೇಯರ್ ಅಥವಾ ನಗರಸಭೆ ಮುಖ್ಯಸ್ಥ, ಜಿಲ್ಲಾ ಪಂಚಾಯಿತಿ ಮುಖ್ಯಸ್ಥ. ಪೊಲೀಸ್ ಠಾಣೆಗಳಲ್ಲಿ ಈ ಸಿಸ್ಟಂಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿವೆಯೇ ಎಂಬುದರ ಮೇಲ್ವಿಚಾರಣೆ. ವಿಡಿಯೊಗಳ ಪರಿಶೀಲನೆ ಮತ್ತು ಮಾನವ ಹಕ್ಕುಗಳ ಉಲ್ಲಂಘನೆಯಾಗಿದ್ದರೆ ಅದನ್ನು ಪತ್ತೆ ಮಾಡುವ ಹೊಣೆ

* ಕೇಂದ್ರ ಸರ್ಕಾರದ ಮಟ್ಟದಲ್ಲೂ ಮೇಲ್ವಿಚಾರಣಾ ಮಂಡಳಿ ರಚನೆ ಮಾಡಬೇಕು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT