ಶನಿವಾರ, 9 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಕಾಶಿ ಮೇಲೆ ‘ಸುಪ್ರೀಂ’ ಕರಿನೆರಳು

ಬಹುಕೋಟಿ ಪಟಾಕಿ ಉದ್ಯಮದ ಮೇಲೆ ಅಂಧಕಾರ: ಕೋಟ್ಯಂತರ ರೂಪಾಯಿ ವಹಿವಾಟಿಗೆ ಧಕ್ಕೆ
Last Updated 23 ಅಕ್ಟೋಬರ್ 2018, 20:15 IST
ಅಕ್ಷರ ಗಾತ್ರ

ಚೆನ್ನೈ: ಪಟಾಕಿ ತಯಾರಿಕೆ ಮತ್ತು ಮಾರಾಟದ ಮೇಲೆ ಸುಪ್ರೀಂ ಕೋರ್ಟ್ ನಿರ್ಬಂಧ ಹೇರಿದ ತೀರ್ಪು ಹೊರಬೀಳುತ್ತಲೇ ತಮಿಳುನಾಡಿನ ಶಿವಕಾಶಿಯಲ್ಲಿ ಅಂಧಕಾರ ಕವಿದಿದೆ.

ದೇಶದ ಅತಿ ದೊಡ್ಡ ಪಟಾಕಿ ಉದ್ಯಮ ಕೇಂದ್ರವಾದ ಶಿವಕಾಶಿಯಲ್ಲಿ ನೂರಾರು ಕೋಟಿ ರೂಪಾಯಿ ವಹಿವಾಟು ನಡೆಯುತ್ತದೆ.

ದೇಶದಲ್ಲಿ ಶೇ 90ರಷ್ಟು ಪಟಾಕಿಗಳು ಶಿವಕಾಶಿಯಲ್ಲಿಯೇ ತಯಾರಾಗುತ್ತವೆ. ಆ ಪೈಕಿ ಶೇ 75ರಷ್ಟು ಪಟಾಕಿಗಳನ್ನು ಬೇರಿಯಂ ನೈಟ್ರೇಟ್‌ನಿಂದ ತಯಾರಿಸಲಾಗುತ್ತದೆ.

ಬೇರಿಯಂ ನೈಟ್ರೇಟ್‌ ರಾಸಾಯನಿಕದಿಂದ ತಯಾರಿಸಿದ ಪಟಾಕಿ ಮಾರಾಟದ ಮೇಲೆ ಸುಪ್ರೀಂ ಕೋರ್ಟ್ ಹೇರಿರುವ ನಿರ್ಬಂಧ ಪಟಾಕಿ ತಯಾರಕರು, ವರ್ತಕರು ಮತ್ತು ಈ ಉದ್ಯಮದ ಮೇಲೆ ಅವಲಂಬಿತರಾಗಿರುವ ಕಾರ್ಮಿಕರನ್ನು ಆತಂಕಕ್ಕೆ ದೂಡಿದೆ.

ದುಬಾರಿಯಾಗಲಿವೆ ಪಟಾಕಿ:ಬೇರಿಯಂ ನೈಟ್ರೇಟ್‌ ಪಟಾಕಿಗಳ ಮೇಲೆ ಹೇರಿದ ನಿಷೇಧ ಜಾರಿಯಾದರೆ ಶೇ 75ರಷ್ಟು ಪಟಾಕಿಗಳ ತಯಾರಿಕೆಯನ್ನು ಸ್ಥಗಿತಗೊಳಿಸಬೇಕಾಗುತ್ತದೆ.

ಹೂ ಕುಂಡ, ನಕ್ಷತ್ರ ಕಡ್ಡಿ (ಸುರ್‌ಸುರ್‌ ಕಡ್ಡಿ), ಪೆನ್ಸಿಲ್‌ ಕಡ್ಡಿ, ರಾಕೆಟ್‌ ಸೇರಿದಂತೆ ಮಕ್ಕಳು ಮತ್ತು ಮಹಿಳೆಯರು ಬಳಸುವ ಅನೇಕ ಪಟಾಕಿಗಳ ತಯಾರಿಕೆ ಸ್ಥಗಿತಗೊಳ್ಳಲಿದೆ.

ಬೇರಿಯಂ ನೈಟ್ರೇಟ್‌ಗೆ ಪರ್ಯಾಯವಾಗಿ ಬೇರೆ ಯಾವ ರಾಸಾಯನಿಕ ಬಳಸಬೇಕು ಎನ್ನುವುದನ್ನು ಸೂಚಿಸಬೇಕಾಗುತ್ತದೆ. ಒಂದು ವೇಳೆ ಪರ್ಯಾಯ ರಾಸಾಯನಿಕ ದುಬಾರಿಯಾಗಿದ್ದರೆ ಸಹಜವಾಗಿ ಪಟಾಕಿಗಳ ಬೆಲೆಗಳು ಕೂಡ ದುಬಾರಿಯಾಗುತ್ತವೆ ಎನ್ನುತ್ತಾರೆ ಪಟಾಕಿ ತಯಾರಕರು.

ನಿರ್ಬಂಧ ತೆರವು ಕೋರಿ ಮೇಲ್ಮನವಿ

ಸುಪ್ರೀಂ ಕೋರ್ಟ್ ಆದೇಶದ ವಿರುದ್ಧ ತಮಿಳುನಾಡು ಪಟಾಕಿ ತಯಾರಕರ ಸಂಘ (ಟಿಎಎನ್‌ಎಫ್‌ಎಎಂಎ) ಪುನರ್‌ ಪರಿಶೀಲನಾ ಅರ್ಜಿ ಸಲ್ಲಿಸುವುದಾಗಿ ಹೇಳಿದೆ.

ನಿರ್ಬಂಧ ತೆರವುಗೊಳಿಸುವಂತೆ ಕೋರಿ ಮೇಲ್ಮನವಿ ಸಲ್ಲಿಸಲು ಪೆಟ್ರೋಲಿಯಂ ಮತ್ತು ಸ್ಫೋಟಕ ಸುರಕ್ಷತೆ ಸಂಘದ (ಪಿಇಎಸ್‌ಒ) ನೆರವು ಕೋರಲು ಟಿಎಎನ್‌ಎಫ್‌ಎಎಂಎ ನಿರ್ಧರಿಸಿದೆ.

ಹದಗೆಡುತ್ತಿರುವ ಪರಿಸರ ಸಂರಕ್ಷಣೆ ಉದ್ದೇಶದಿಂದ ಕಳೆದ ವರ್ಷ ದೆಹಲಿ ಸುತ್ತಮುತ್ತ ಪಟಾಕಿ ಬಳಕೆ ಮೇಲೆ ನ್ಯಾಯಾಲಯ ನಿಷೇಧ ಹೇರಿದ ಕಾರಣ ಉದ್ಯಮ ಕೋಟ್ಯಂತರ ರೂಪಾಯಿ ನಷ್ಟ ಅನುಭವಿಸಿತ್ತು.

ಇದೀಗ ಕೋರ್ಟ್ ತೀರ್ಪು ಪಟಾಕಿ ಉದ್ಯಮಕ್ಕೆ ಮತ್ತೊಂದು ಮಾರಕ ಹೊಡೆತ ನೀಡಿದೆ ಎನ್ನುತ್ತಾರೆ ಪಟಾಕಿ ತಯಾರಕರು.

‘ಹಸಿರು ಪಟಾಕಿ ಎಂಬುದು ಇಲ್ಲವೇ ಇಲ್ಲ’

ನವದೆಹಲಿ (ಪಿಟಿಐ): ‘ಹಸಿರು ಪಟಾಕಿ’ ಎಂಬುದು ಇಲ್ಲವೇ ಇಲ್ಲ ಎಂದು ತಮಿಳುನಾಡು ಪಟಾಕಿ ತಯಾರಕರ ಸಂಘಟನೆ ಹೇಳಿದೆ.

ಕಡಿಮೆ ಶಬ್ದ ಮತ್ತು ಕಡಿಮೆ ಹೊಗೆ ಉಗುಳುವ ‘ಹಸಿರು ಪಟಾಕಿ’ಗಳನ್ನಷ್ಟೇ ತಯಾರಿಸಬೇಕು, ಮಾರಾಟ ಮಾಡಬೇಕು ಎಂದು ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪಿಗೆ ಪಟಾಕಿ ತಯಾರಕರ ಪ್ರತಿಕ್ರಿಯೆ ಇದು.

‘ಹಸಿರು ಪಟಾಕಿಗಳ ತಯಾರಿಕೆ ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್‌ಗೆ ನಾವು ಮನವರಿಕೆ ಮಾಡಿಕೊಡಬೇಕಿದೆ. ಆದರೆ ಕಡಿಮೆ ಮಾಲಿನ್ಯದ ಪಟಾಕಿಗಳನ್ನು ತಯಾರಿಸಬಹುದು. ಆದರೆ ಅದಕ್ಕೆ ಬಹಳ ಸಮಯ ಬೇಕಾಗುತ್ತದೆ’ ಎಂದು ಸಂಘಟನೆ ಹೇಳಿದೆ.

ಈ ಆದೇಶವನ್ನು ಸಾಮಾಜಿಕ ಜಾಲತಾಣಗಳಲ್ಲೂ ಟ್ರೋಲ್ ಮಾಡಲಾಗುತ್ತಿದೆ. ಹಸಿರು ಬಣ್ಣದ ಹೊರಮೈ ಇರುವ ಪಟಾಕಿಗಳ ಚಿತ್ರಗಳನ್ನು ಹಾಕಿ. ‘ಗ್ರೀನ್‌ ಪಟಾಕಿ’ ಬಳಸಿ ಎಂದು ಹಲವರು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಸುಪ್ರೀಂ ಕೋರ್ಟ್‌ನ ಆದೇಶವನ್ನು ಪಾಲಿಸುವುದು ಕಷ್ಟ ಎಂದು ದೆಹಲಿ ಪೊಲೀಸರೂ ಅಭಿಪ್ರಾಯಪಟ್ಟಿದ್ದಾರೆ.

‘ಯಾವ ಪಟಾಕಿ ಎಷ್ಟು ಡೆಸಿಬಲ್ಸ್‌ನಷ್ಟು ಶಬ್ದ ಉಂಟು ಮಾಡುತ್ತದೆ ಎಂಬುದನ್ನು ಪತ್ತೆ ಮಾಡುವು ಸಲಕರಣೆಗಳು ನಮ್ಮಲ್ಲಿಲ್ಲ. ಹೀಗಿದ್ದ ಮೇಲೆ ಅದನ್ನು ಪತ್ತೆ ಮಾಡಿ, ನಿಷೇಧಿತ ಪಟಾಕಿಗಳ ಮಾರಾಟವನ್ನು ತಡೆಯುವುದು ಹೇಗೆ’ ಎಂದು ದೆಹಲಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

‘ದೇಶದಲ್ಲಿ ಅತಿ ಹೆಚ್ಚು ಪಟಾಕಿ ತಯಾರಾಗುವ ಶಿವಕಾಶಿಯಲ್ಲಿ ಪೆಟ್ರೋಲಿಯಂ ಮತ್ತು ಸ್ಫೋಟಕ ಸುರಕ್ಷತಾ ಸಂಸ್ಥೆ ಈಗಾಗಲೇ ಒಂದು ಕೇಂದ್ರವನ್ನು ಹೊಂದಿದೆ. ಹೀಗಾಗಿ ತಯಾರಿಕೆ ಮಟ್ಟದಲ್ಲೇ ನಿಯಮ ಪಾಲನೆಯಾಗುವಂತೆ ಆ ಸಂಸ್ಥೆಯೇ ಎಚ್ಚರವಹಿಸುವುದು ಹೆಚ್ಚು ಪರಿಣಾಮಕಾರಿ’ ಎಂದು ಪರಿಸರವಾದಿಗಳು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT