ಪ್ರಬಲ ಚಂಡಮಾರುತವಾಗಿ ಗುಜರಾತ್‌ಗೆ ಅಪ್ಪಳಿಸಿದ್ದ ಬಿಪೊರ್‌ಜಾಯ್ ಕ್ರಮೇಣ ದುರ್ಬಲಗೊಂಡು ಸೌರಾಷ್ಟ್ರ ಮತ್ತು ಕಛ್ ಮೂಲಕ ಶುಕ್ರವಾರ ಸಂಜೆ ದಕ್ಷಿಣ ರಾಜಸ್ಥಾನ ಪ್ರವೇಶಿಸಲಿದೆ ಎಂದು ಐಎಂಡಿ ತಿಳಿಸಿದೆ.
ಹವಾಮಾನ ಇಲಾಖೆ ಎಚ್ಚರಿಕೆ ಹಿನ್ನೆಲೆಯಲ್ಲಿ ಜೋಧ್‌ಪುರ ವಿಶ್ವವಿದ್ಯಾಲಯವು ಶುಕ್ರವಾರ ಮತ್ತು ಶನಿವಾರದಂದು ನಡೆಯಬೇಕಿದ್ದ ಪರೀಕ್ಷೆಗಳನ್ನು ಮುಂದೂಡಿದೆ.
ಬಾರ್ಮೆರ್-ಜೋಧ್‌ಪುರ ನಡುವೆ ಸಂಚರಿಸಬೇಕಿದ್ದ ಪ್ಯಾಸೆಂಜರ್ ರೈಲುಗಳನ್ನು ಎರಡು ದಿನ ರದ್ದು ಮಾಡಲಾಗಿದೆ.
ಬಾರ್ಮೆರ್ ಮತ್ತು ಜಾಲೋರ್‌ನಲ್ಲಿ ತಗ್ಗು ಪ್ರದೇಶಗಳಲ್ಲಿ ವಾಸಿಸುತ್ತಿರುವವರಿಗೆ ಬೇರೆಡೆ ತೆರಳುವಂತೆ ಸೂಚನೆ ನೀಡಲಾಗಿದೆ.
ಜೈಸಲ್ಮೇರ್‌ನ ಡಬ್ಲಾ ಗ್ರಾಮದಿಂದ 450 ಜನರನ್ನು ಸ್ಥಳಾಂತರಿಸಲಾಗಿದೆ. ಚಂಡಮಾರುತ ಪೀಡಿತ ಪ್ರದೇಶಗಳಲ್ಲಿ, ನರೇಗಾ ಕಾಮಗಾರಿಗಳನ್ನು ನಿಲ್ಲಿಸಲಾಗಿದೆ.
ಬಾರ್ಮೆರ್, ಜಲೋರ್, ಜೈಸಲ್ಮೇರ್‌ನಲ್ಲಿ ಗುರುವಾರ ಮಧ್ಯಾಹ್ನ ಬಲವಾದ ಗಾಳಿ ಬೀಸುತ್ತಿದ್ದು, ಹಲವೆಡೆ ಸಾಧಾರಣ ಮಳೆಯಾಗಿದೆ. ಬಾರ್ಮೆರ್‌ನ ಗ್ರಾಮೀಣ ಪ್ರದೇಶಗಳಲ್ಲಿ ಗುರುವಾರ ಸಂಜೆಯವರೆಗೆ 20 ಮಿ.ಮೀ ಮಳೆ ದಾಖಲಾಗಿದೆ.