ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಜರಾತ್‌ | ಮನೆಗೆ ನುಗ್ಗಿ ದಲಿತ ದಂಪತಿ ಮೇಲೆ ಹಲ್ಲೆ: ಪತ್ನಿ ಸಾವು, ಪತಿಗೆ ಗಾಯ

Last Updated 10 ಜೂನ್ 2022, 15:25 IST
ಅಕ್ಷರ ಗಾತ್ರ

ಸುರೇಂದ್ರನಗರ್ (ಗುಜರಾತ್‌): ಜಿಲ್ಲೆಯ ಮೆರಾ ಗ್ರಾಮದ ದಲಿತ ದಂಪತಿ ಮನೆಗೆ ಶುಕ್ರವಾರ ನುಗ್ಗಿದ ಅಪರಿಚಿತ ವ್ಯಕ್ತಿಯೊಬ್ಬ,ಹರಿತವಾದ ಆಯುಧದಿಂದ ದಂಪತಿ ಮೇಲೆ ದಾಳಿ ನಡೆಸಿದ್ದಾನೆ. ಪತ್ನಿ ಸ್ಥಳದಲ್ಲೇ ಮೃತಪಟ್ಟಿದ್ದು, ದಾಳಿಕೋರನಿಗೆ ಪ್ರತಿರೋಧ ಒಡ್ಡಿದ ಪತಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ಮೆಹ್ಸಾನ ಪಟ್ಟಣದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

'ಪಾಲಾಭಾಯ್‌ ವಘೇಲಾ ಎಂಬುವವರ ಮನೆಗೆ ಶುಕ್ರವಾರ ಮುಂಜಾನೆ 3 ಗಂಟೆ ಸುಮಾರಿಗೆ ನುಗ್ಗಿರುವ ದಾಳಿಕೋರ, 52 ವರ್ಷದ ಗಮರಾಬೆನ್‌ ವಘೇಲಾ ಅವರ ಕುತ್ತಿಗೆ ಸೀಳಿದ್ದಾನೆ. ಈ ವೇಳೆ ಎಚ್ಚರಗೊಂಡ ಪಾಲಾಭಾಯ್‌, ಆತನೊಂದಿಗೆ ಹೋರಾಡಿದ್ದಾರೆ. ಆದರೆ, ಅವರ ಕುತ್ತಿಗೆ ಮತ್ತು ಕೈಗಳಿಗೂ ಹಂತಕ ಇರಿದಿದ್ದಾನೆ. ಗಾಯಗೊಂಡ ಪಾಲಾಭಾಯ್‌ ಅವರ ಚೀರಾಟ ಕೇಳಿ ನೆರೆಹೊರೆಯವರು ನೆರವಿಗೆ ಧಾವಿಸಿದ್ದಾರೆ. ಅಷ್ಟರಲ್ಲಾಗಲೇ ದಾಳಿಕೋರ ಪರಾರಿಯಾಗಿದ್ದಾನೆ' ಎಂದು ದಸದ ಪೊಲೀಸ್ ಠಾಣೆಯ ಸಬ್‌ ಇನ್‌ಸ್ಪೆಕ್ಟರ್‌ ಎಚ್‌.ಎಲ್‌.ಥಕ್ಕರ್ ತಿಳಿಸಿದ್ದಾರೆ.

'ಗ್ರಾಮಸ್ಥರಿಂದ ವಿಚಾರ ತಿಳಿದು ಸ್ಥಳಕ್ಕೆ ಹೋಗುವಷ್ಟರಲ್ಲಿ ಗಮರಾಬೆನ್‌ ಮೃತಪಟ್ಟಿದ್ದರು. ಗಾಯಗೊಂಡಿದ್ದ ಪಾಲಾಭಾಯ್‌ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.ಎಫ್‌ಎಸ್‌ಎಲ್‌ (ಫೋರೆನ್ಸಿಕ್‌ ಸೈನ್ಸ್‌ ಲ್ಯಾಬೊರೇಟರಿ) ಹಾಗೂ ಶ್ವಾನದಳ ಕರೆಸಿ ತನಿಖೆ ನಡೆಸಿದರೂ, ಯಾವುದೇ ಸುಳಿವು ಸಿಕ್ಕಿಲ್ಲ' ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

'ಅಮಾಯಕರ ಹತ್ಯೆಯಾಗಿದೆ.ಇದು ಇಂಥ ಮೂರನೇ ಪ್ರಕರಣವಾಗಿದ್ದು,ಗ್ರಾಮಸ್ಥರುಆಕ್ರೋಶಗೊಂಡಿದ್ದಾರೆ ಎಂದು ದಸದ ಶಾಸಕ ನೌಸಾದ್ ಸೋಲಂಕಿ ಹೇಳಿದ್ದಾರೆ. ದಾಳಿ ಸಂತ್ರಸ್ತ ವಘೇಲಾ ಅವರ ಕುಟುಂಬಕ್ಕೆ ಗ್ರಾಮದಲ್ಲಿ ಹಾಗೂ ಸಮಾಜದಲ್ಲಿ ಉತ್ತಮ ಹೆಸರಿದೆ. ವಘೇಲಾ ಸುತ್ತಲಿನ ಊರುಗಳಲ್ಲಿ ಭಜನೆ ಕಾರ್ಯಕ್ರಮಗಳನ್ನು ನಡೆಸುತ್ತಿದ್ದರು' ಎಂದು ತಿಳಿಸಿದ್ದಾರೆ.

'ಕೆಲವು ತಿಂಗಳುಗಳ ಹಿಂದೆ ಮುಸ್ಲಿಂ ಸಮುದಾಯದ ಹಿರಿಯ ವ್ಯಕ್ತಿಯೊಬ್ಬರನ್ನು ಹತ್ಯೆಮಾಡಲಾಗಿತ್ತು. ಅವರಿಗೂ ಸಮಾಜದಲ್ಲಿ ಒಳ್ಳೆಯ ಹೆಸರಿತ್ತು ಎಂದು ಸೋಲಂಕಿ ನೆನಪಿಸಿಕೊಂಡಿದ್ದಾರೆ. ಅದೇರೀತಿ, ಯುವಕನೊಬ್ಬನನ್ನು ಆತನ ಮನೆಯಿಂದ ಸ್ವಲ್ಪವೇ ದೂರದಲ್ಲಿ ಕೊಲೆಮಾಡಲಾಗಿತ್ತು. ಈ ಎರಡೂಅಪರಾಧ ಪ್ರಕರಣಗಳು ದಸದ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿಯೇ ನಡೆದಿವೆ. ಎರಡೂ ಪ್ರಕರಣಗಳು ಈವರೆಗೆ ಇತ್ಯರ್ಥವಾಗಿಲ್ಲ' ಎಂದು ಸೋಲಂಕಿ ಕಿಡಿಕಾರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT