ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನೂತನ ಅಪರಾಧ ಕಾನೂನುಗಳ ಅನುಷ್ಠಾನ ಮುಂದೂಡಿ: ಪ್ರಧಾನಿಗೆ ಮಮತಾ ಬ್ಯಾನರ್ಜಿ ಮನವಿ

Published 21 ಜೂನ್ 2024, 12:55 IST
Last Updated 21 ಜೂನ್ 2024, 12:55 IST
ಅಕ್ಷರ ಗಾತ್ರ

ನವದೆಹಲಿ: ‘ಅವಸರದಲ್ಲಿ ಅಂಗೀಕಾರ’ ನೀಡಿರುವ ಮೂರು ಹೊಸ ಅಪರಾಧ ಕಾನೂನುಗಳ ಅನುಷ್ಠಾನ ಮುಂದೂಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಒತ್ತಾಯಿಸಿದ್ದಾರೆ.

‘ಅಪರಾಧ ಕಾನೂನುಗಳ ಅನುಷ್ಠಾನ ಮುಂದೂಡುವುದರಿಂದ, ಸಂಸತ್‌ನಲ್ಲಿ ಅವುಗಳ ಕುರಿತು ಮತ್ತೊಮ್ಮೆ ಪರಾಮರ್ಶೆ ನಡೆಸಲು ಅನುಕೂಲವಾಗಲಿದೆ’ ಎಂದು ಅವರು ಪ್ರಧಾನಿ ಮೋದಿ ಅವರಿಗೆ ಬರೆದ ಪತ್ರದಲ್ಲಿ ವಿವರಿಸಿದ್ದಾರೆ.

ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎ), ಭಾರತೀಯ ಸಾಕ್ಷ್ಯ ಸಂಹಿತೆ (ಬಿಎಸ್‌ಎ)ಹಾಗೂ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (ಬಿಎನ್‌ಎಸ್‌ಎಸ್‌) ಜುಲೈ 1ರಿಂದ ಜಾರಿಗೆ ಬರಲಿವೆ.

‘ಈ ಮೂರು ಕಾನೂನುಗಳನ್ನು ಜಾರಿಗೊಳಿಸುತ್ತಿರುವುದು ಕಳವಳಕಾರಿ. ಅದರಲ್ಲೂ, 146 ಜನ ಸಂಸದರನ್ನು ಸಂಸತ್‌ನಿಂದ ಅಮಾನತು ಮಾಡಿದ್ದ ಸಂದರ್ಭದಲ್ಲಿ ಈ ಮೂರು ಕಾಯ್ದೆಗಳಿಗೆ ಸಂಬಂಧಿಸಿದ ಮಸೂದೆಗಳನ್ನು ಅಂಗೀಕರಿಸಲಾಗಿದೆ’ ಎಂದು ಅವರು ಪತ್ರದಲ್ಲಿ ವಿವರಿಸಿದ್ದಾರೆ.

‘ನಿಮ್ಮ ಸರ್ಕಾರದ ಅಧಿಕಾರ ಅವಧಿ ಮುಗಿಯುತ್ತಿದ್ದ ಸಂದರ್ಭದಲ್ಲಿ ಈ ಮೂರು ನಿರ್ಣಾಯಕ ಮಸೂದೆಗಳನ್ನು ಯಾವುದೇ ಚರ್ಚೆ ಇಲ್ಲದೆಯೇ, ಏಕಪಕ್ಷೀಯವಾಗಿ ಅಂಗೀಕರಿಸಲಾಗಿದೆ. ಲೋಕಸಭೆಯ 100ರಷ್ಟು ಸದಸ್ಯರು ಸೇರಿದಂತೆ ಎರಡೂ ಸದನಗಳ ಒಟ್ಟು 146 ಸಂಸದರನ್ನು ಸಂಸತ್‌ನಿಂದ ಹೊರಗೆ ಹಾಕಿ, ಈ ಮಸೂದೆಗಳನ್ನು ಅಂಗೀಕರಿಸಲಾಗಿದೆ’ ಎಂದು ಮಮತಾ ಬ್ಯಾನರ್ಜಿ ಪತ್ರದಲ್ಲಿ ವಿವರಿಸಿದ್ದಾರೆ.

‘ನೈತಿಕತೆ ಮತ್ತು ವಾಸ್ತವಿಕತೆ ಕಾರಣಗಳಿಂದಾಗಿ ಕನಿಷ್ಠ ಪಕ್ಷ, ಈ ಮೂರು ನೂತನ ಕಾನೂನುಗಳನ್ನು ಅನುಷ್ಠಾನಗೊಳಿಸುವ ದಿನಾಂಕವನ್ನಾದರೂ ಮುಂದೂಡಿ’ ಎಂದು ಅವರು ಪತ್ರದಲ್ಲಿ ಕೋರಿದ್ದಾರೆ. 

ಭೇಟಿ–ಚರ್ಚೆ: ಟಿಎಂಸಿ ಮುಖ್ಯಸ್ಥೆಯೂ ಆಗಿರುವ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಕಾಂಗ್ರೆಸ್‌ನ ಹಿರಿಯ ನಾಯಕ ಪಿ.ಚಿದಂಬರಂ ಅವರನ್ನು ಗುರುವಾರ ಭೇಟಿ ಮಾಡಿ, ಈ ಹೊಸ ಅಪರಾಧ ಕಾನೂನುಗಳ ಕುರಿತು ಚರ್ಚೆ ನಡೆಸಿದರು ಎಂದು ಮೂಲಗಳು ಹೇಳಿವೆ.

ಈ ಮೂರು ಕಾನೂನುಗಳಿಗೆ ಸಂಬಂಧಿಸಿದ ಮಸೂದೆಗಳನ್ನು ಪರಾಮರ್ಶೆ ಮಾಡಿದ ಸಂಸದೀಯ ಸ್ಥಾಯಿ ಸಮಿತಿಯಲ್ಲಿ ಚಿದಂಬರಂ ಇದ್ದರು.

ಚಿದಂಬರಂ ಅಲ್ಲದೇ, ಸಮಿತಿಯ ಇತರ ಸದಸ್ಯರಾಗಿದ್ದ ಟಿಎಂಸಿಯ ಡೆರೆಕ್‌ ಒಬ್ರಿಯಾನ್‌, ಡಿಎಂಕೆಯ ಎನ್‌.ಆರ್‌.ಇಳಂಗೊ ಅವರು ಈ ಮೂರು ಮಸೂದೆಗಳ ಕುರಿತು ತಮ್ಮ ಭಿನ್ನ ನಿಲುವುಗಳನ್ನು ಆಗ ದಾಖಲಿಸಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT