ನವದೆಹಲಿ: ಎಎಪಿ ಶಾಸಕರಿಗೆ ಬಿಜೆಪಿ ನೀಡುತ್ತಿರುವ ಆಮಿಷಗಳ ಕುರಿತು ಚರ್ಚಿಸಲು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಗುರುವಾರ ತಮ್ಮ ನಿವಾಸದಲ್ಲಿ ಮಹತ್ವದ ಸಭೆ ಕರೆದಿದ್ದಾರೆ. ಈ ಸಭೆಗೂ ಮುನ್ನ ಕನಿಷ್ಠ ಹನ್ನೆರಡು ಎಎಪಿ ಶಾಸಕರು ಸಂಪರ್ಕಕ್ಕೆ ಸಿಗುತ್ತಿಲ್ಲವೆಂದು ಮೂಲಗಳು ಹೇಳಿವೆ.
ಇಂದು ಬೆಳಿಗ್ಗೆ 11 ಗಂಟೆಗೆ ಸಭೆ ಕರೆಯಲಾಗಿತ್ತು. ಇದಕ್ಕೂ ಮುನ್ನ ಕನಿಷ್ಠ ಹನ್ನೆರಡು ಶಾಸಕರು ಸಂಪರ್ಕಕ್ಕೆ ಸಿಗುತ್ತಿಲ್ಲವೆಂದು ಪಕ್ಷದ ಮೂಲಗಳು ತಿಳಿಸಿವೆ. ಸಂಪರ್ಕಕ್ಕೆ ಸಿಗದ ಶಾಸಕರ ಹೆಸರನ್ನು ಬಹಿರಂಗಪಡಿಸಲು ಎಎಪಿ ನಿರಾಕರಿಸಿದೆ.
ನಿನ್ನೆ(ಬುಧವಾರ) ಸಂದೇಶವನ್ನು ಕಳುಹಿಸಲಾಗಿದೆ. ಸಂಪರ್ಕಕ್ಕೆ ಸಿಗದ ಶಾಸಕರನ್ನು ಸಂಪರ್ಕಿಸುವ ಪ್ರಯತ್ನ ಜಾರಿಯಲ್ಲಿದೆ. ಎಲ್ಲಾ ಶಾಸಕರು ಸಭೆಯಲ್ಲಿ ಉಪಸ್ಥಿತರಿರುತ್ತಾರೆ ಎಂದು ಎಎಪಿ ಶಾಸಕ ದಿಲೀಪ್ ಪಾಂಡೆ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಎಎಪಿ ಶಾಸಕರಿಗೆ ಬಿಜೆಪಿ ಆಮಿಷ ಒಡ್ಡಿದ್ದು, ಬೆದರಿಕೆ ಹಾಕಲಾಗುತ್ತಿದೆ. ಇದೊಂದು ಗಂಭೀರ ವಿಷಯ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಬುಧವಾರ ಹೇಳಿದ್ದರು.
ಇತ್ತೀಚೆಗೆ ಎಎಪಿ ಪಕ್ಷವನ್ನು ತೊರೆದು ಬಿಜೆಪಿಗೆ ಸೇರಿದರೆ ಸಿಎಂ ಸ್ಥಾನ ಹಾಗೂ ಸಿಬಿಐ ಹಾಗೂ ಇ.ಡಿ ಪ್ರಕರಣ ಕೈಬಿಡುವುದಾಗಿ ತಮಗೆ ಬಿಜೆಪಿ ಆಮಿಷ ಒಡ್ಡಿರುವುದಾಗಿ ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಆರೋಪಿದ್ದರು.
ಶಾಸಕರಾದ ಅಜಯ್ ದತ್, ಸಂಜೀವ್ ಜಾ, ಸೋಮನಾಥ ಭಾರತಿ ಮತ್ತು ಕುಲದೀಪ್ ಅವರನ್ನು ಬಿಜೆಪಿ ನಾಯಕರು ಸಂಪರ್ಕಿಸಿದ್ದಾರೆ ಎಂದು ಎಎಪಿಯ ರಾಷ್ಟ್ರೀಯ ವಕ್ತಾರ ಹಾಗೂ ರಾಜಸಭಾ ಸಂಸದ ಸಂಜಯ್ ಸಿಂಗ್ ಆರೋಪಿಸಿದ್ದರು.
ಬಿಜೆಪಿಗೆ ಸೇರಿದರೆ ತಲಾ ₹20 ಕೋಟಿ ಮತ್ತು ಇತರೆ ಶಾಸಕರನ್ನು ಕರೆತಂದರೆ ₹25 ಕೋಟಿ ನೀಡುವ ಆಮಿಷ ಒಡ್ಡಿರುವುದಾಗಿ ಸಿಂಗ್ ಹೇಳಿದ್ದರು.