ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸರ್ವಾಧಿಕಾರದ ವಿರುದ್ಧ ಧ್ವನಿ ಎತ್ತಿದ್ದಕ್ಕಾಗಿ ಜೈಲಿಗೆ: ಕೇಜ್ರಿವಾಲ್‌

Published 2 ಜೂನ್ 2024, 16:43 IST
Last Updated 2 ಜೂನ್ 2024, 16:43 IST
ಅಕ್ಷರ ಗಾತ್ರ

ನವದೆಹಲಿ: ‘ನಾನು ಮತ್ತೆ ಜೈಲಿಗೆ ಹೋಗುತ್ತಿರುವುದು ಭ್ರಷ್ಟಾಚಾರದಲ್ಲಿ ತೊಡಗಿದ್ದಕ್ಕಾಗಿ ಅಲ್ಲ. ಬದಲಿಗೆ ಸರ್ವಾಧಿಕಾರದ ವಿರುದ್ಧ ಧ್ವನಿ ಎತ್ತಿದ್ದಕ್ಕಾಗಿ’ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರು ಭಾನುವಾರ ಹೇಳಿದ್ದಾರೆ.

ತಿಹಾರ್‌ ಜೈಲಿಗೆ ಶರಣಾಗಲು ಹೋಗುವುದಕ್ಕೂ ಮುನ್ನ ಅವರು ಎಎಪಿಯ ಮುಖ್ಯ ಕಚೇರಿಯಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.

‘ಸುಪ್ರೀಂ ಕೊರ್ಟ್‌ ನನಗೆ 21 ದಿನಗಳ ಮಧ್ಯಂತರ ಜಾಮೀನು ನೀಡಿತ್ತು. ಈ ದಿನಗಳು ನನ್ನ ಜೀವನದ ಅವಿಸ್ಮರಣೀಯ ಕ್ಷಣಗಳಾಗಿದ್ದು, ಒಂದು ನಿಮಿಷವನ್ನೂ ವ್ಯರ್ಥ ಮಾಡಿಲ್ಲ. ದೇಶವನ್ನು ಉಳಿಸಲಿಕ್ಕಾಗಿ ಪ್ರಚಾರ ಮಾಡಿದ್ದೇನೆ. ನಮಗೆ ಎಎಪಿಗಿಂತ ದೇಶವೇ ಮೊದಲು’ ಎಂದು ಅವರು ತಿಳಿಸಿದರು.

‘ಚುನಾವಣೆಯಲ್ಲಿ ಭಾರಿ ಬಹುಮತದೊಂದಿಗೆ ಗೆದ್ದ ಮುಖ್ಯಮಂತ್ರಿಯನ್ನು ಸಾಕ್ಷ್ಯಾಧಾರಗಳಿಲ್ಲದೆಯೂ ಬಂಧಿಸಲಾಗಿದೆ. ಮುಂದೆ ಇತರರಿಗೂ ಇದೇ ಹಾದಿ ಕಾದಿದೆ ಎಂಬುದರ ಸಂದೇಶ ಇದಾಗಿದೆ’ ಎಂದು ಅವರು ಹೇಳಿದರು.

ಸಮೀಕ್ಷೆಗಳು ನಕಲಿ

‘ಮತಗಟ್ಟೆ ಸಮೀಕ್ಷೆಗಳು ನಕಲಿ ಎಂಬುದನ್ನು ನಾನು ಲಿಖಿತವಾಗಿ ಬರೆದುಕೊಡಬಲ್ಲೆ. ರಾಜಸ್ಥಾನದಲ್ಲಿ 25 ಲೋಕಸಭಾ ಕ್ಷೇತ್ರಗಳಿವೆ. ಆದರೆ ಸಮೀಕ್ಷೆಯೊಂದು ಅವರಿಗೆ 33 ಸ್ಥಾನಗಳನ್ನು ನೀಡಿದೆ. ಇಂಥ ನಕಲಿ ಸಮೀಕ್ಷೆಗಳ ಫಲಿತಾಂಶಗಳನ್ನು ಪ್ರಕಟಿಸುವ ಉದ್ದೇಶವೇನು’ ಎಂದು ಅವರು ಪ್ರಶ್ನಿಸಿದರು.

‘ಯಾವುದೇ ಕಾರಣಕ್ಕೂ ಜೂನ್‌ 4ರಂದು ಬಿಜೆಪಿ ಸರ್ಕಾರ ರಚಿಸುವುದಿಲ್ಲ. ಈ ಸಮೀಕ್ಷೆಗಳ ಮೂಲಕ ನಮ್ಮ ಕಾರ್ಯಕರ್ತರನ್ನು ಖಿನ್ನರನ್ನಾಗಿಸುವ ಯತ್ನ ನಡೆದಿದೆಯಷ್ಟೆ’ ಎಂದು ಅವರು ಬೇಸರ ವ್ಯಕ್ತಪಡಿಸಿದರು. 

ಇದಕ್ಕೂ ಮುನ್ನ ಎಎಪಿಯ ರಾಜಕೀಯ ವ್ಯವಹಾರಗಳ ಸಮಿತಿ ಸಭೆಯನ್ನು ನಡೆಸಿದ್ದ ಕೇಜ್ರಿವಾಲ್‌ ಅವರು ಒಗ್ಗಟ್ಟಿನಿಂದ ಇರುವಂತೆ ನಾಯಕರಿಗೆ ತಿಳಿಸಿದರು. 

ಕೇಜ್ರಿವಾಲ್‌ ಅವರು ತಿಹಾರ್‌ ಜೈಲಿಗೆ ಬರುವುದಕ್ಕೂ ಮುನ್ನ ಜೈಲಿನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಂಚಾರ ದಟ್ಟಣೆಯನ್ನು ನಿರ್ಬಂಧಿಸಲಾಗಿತ್ತು. ಹೆಚ್ಚುವರಿ ಪೊಲೀಸ್‌ ಸಿಬ್ಬಂದಿಯನ್ನು ನಿಯೋಜಿಸಿ ಭದ್ರತಾ ವ್ಯವಸ್ಥೆ ಕಲ್ಪಿಸಲಾಗಿತ್ತು.

ಮಕ್ಕಳನ್ನು ಅಪ್ಪಿಕೊಂಡು ವಿದಾಯ

ತಿಹಾರ್‌ ಜೈಲಿಗೆ ಮರಳುವುದಕ್ಕೂ ಮುನ್ನ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರು ತಮ್ಮ ಮಕ್ಕಳಾದ ಪುಲಕಿತ್‌ ಹರ್ಷಿತಾ ಅವರನ್ನು ಅಪ್ಪಿಕೊಂಡು ಭಾವಪೂರ್ಣವಾಗಿ ವಿದಾಯ ಹೇಳಿದರು. ಬಳಿಕ ಪೋಷಕರ ಪಾದ ಸ್ಪರ್ಶಿಸಿ ಆಶೀರ್ವಾದ ಪಡೆದರು. ಪೋಷಕರ ಆಶೀರ್ವಾದ ಪಡೆದ ಫೋಟೊಗಳನ್ನು ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿರುವ ಎಎಪಿ ‘ದೇಶದ ಹೆಮ್ಮೆಯ ಪುತ್ರ ಅರವಿಂದ ಕೇಜ್ರಿವಾಲ್ ಅವರು ಪ್ರಜಾಪ್ರಭುತ್ವವನ್ನು ಉಳಿಸಲು ಜೈಲಿಗೆ ಹೋಗುವ ಮುನ್ನ ತಮ್ಮ ಪೋಷಕರ ಆಶೀರ್ವಾದ ಪಡೆದರು ಮತ್ತು ಮಕ್ಕಳನ್ನು ಅಪ್ಪಿಕೊಂಡರು’ ಎಂದು ಹೇಳಿದೆ. ‘ಕೇಜ್ರಿವಾಲ್‌ ಅವರು ಸರ್ವಾಧಿಕಾರಕ್ಕೆ ತಲೆಬಾಗುವುದಿಲ್ಲ. ಅವರ ಈ ಭಾವನೆಯೇ ಸರ್ವಾಧಿಕಾರಿಯನ್ನು ಹೆದರಿಸುತ್ತದೆ’ ಎಂದು ಎಎಪಿ ಹೇಳಿದೆ. ‌

ಬಿಜೆಪಿ ಪ್ರತಿಭಟನೆ

ಕೇಜ್ರಿವಾಲ್‌ ಅವರು ರಾಜ್‌ಘಾಟ್‌ಗೆ ಹೋಗುವುದನ್ನು ವಿರೋಧಿಸಿ ಬಿಜೆಪಿಯ ದೆಹಲಿ ಘಟಕದ ಅಧ್ಯಕ್ಷ ವೀರೇಂದ್ರ ಸಚ್‌ದೇವ ಅವರ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಅಬಕಾರಿ ಹಗರಣದಲ್ಲಿ ಜೈಲು ಸೇರಿರುವ ವ್ಯಕ್ತಿಯೊಬ್ಬರು ಮಹಾತ್ಮ ಗಾಂಧಿ ಅವರಿಗೆ ಗೌರವ ಸಲ್ಲಿಸಲು ರಾಜ್‌ಘಾಟ್‌ಗೆ ಹೋಗುವುದು ಸರಿಯಲ್ಲ ಎಂದು ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದರು. ವೀರೇಂದ್ರ ಸೇರಿದಂತೆ ಪ್ರತಿಭಟನಕಾರರನ್ನು ಬಂಧಿಸಿದ ಪೊಲೀಸರು ನಂತರ ಎಚ್ಚರಿಕೆ ನೀಡಿ ಬಿಡುಗಡೆ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT