ಶುಕ್ರವಾರ, 24 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂತ್ರಸ್ತೆ ಪ್ರತಿಕೂಲ ಸಾಕ್ಷ್ಯನುಡಿದರೂ ಅಪರಾಧ ಸಾಬೀತು: ದೆಹಲಿಯ ನ್ಯಾಯಾಲಯ

Published 16 ಮೇ 2024, 16:24 IST
Last Updated 16 ಮೇ 2024, 16:24 IST
ಅಕ್ಷರ ಗಾತ್ರ

ನವದೆಹಲಿ: ಸರಿಸುಮಾರು 10 ವರ್ಷಗಳ ಹಿಂದೆ, 12 ವರ್ಷ ವಯಸ್ಸಿನ ಬಾಲಕಿಯೊಬ್ಬಳ ಮೇಲೆ ಅತ್ಯಾಚಾರ ನಡೆಸಿದ್ದ ಆರೋಪಕ್ಕೆ ಗುರಿಯಾಗಿದ್ದ ವ್ಯಕ್ತಿಯೊಬ್ಬನನ್ನು ದೆಹಲಿಯ ನ್ಯಾಯಾಲಯವೊಂದು ಅಪರಾಧಿ ಎಂದು ಘೋಷಿಸಿದೆ. ಅತ್ಯಾಚಾರಕ್ಕೆ ಗುರಿಯಾಗಿದ್ದವಳು ಪ್ರತಿಕೂಲ ಸಾಕ್ಷ್ಯ ನುಡಿದಿದ್ದರೂ, ಡಿಎನ್‌ಎ ಹಾಗೂ ವಿಧಿವಿಜ್ಞಾನ ವರದಿಗಳು ಆರೋಪಿಯು ತಪ್ಪು ಮಾಡಿರುವುದನ್ನು ತೋರಿಸಿದ ಕಾರಣಕ್ಕೆ ನ್ಯಾಯಾಲಯದ ಈ ನಿರ್ಣಯಕ್ಕೆ ಬಂದಿದೆ.

ಸಾಮಾನ್ಯ ಸಂದರ್ಭಗಳಲ್ಲಿ ಲೈಂಗಿಕ ದೌರ್ಜನ್ಯದ ಪ್ರಕರಣಗಳಲ್ಲಿ, ಸಂತ್ರಸ್ತೆ ನೀಡುವ ಹೇಳಿಕೆಯನ್ನು ಪ್ರಮುಖ ಸಾಕ್ಷ್ಯವಾಗಿ ಪರಿಗಣಿಸಲಾಗುತ್ತದೆ. ಸಂತ್ರಸ್ತೆಯು ಆರೋಪಿಗೆ ‘ಕ್ಲೀನ್ ಚಿಟ್’ ನೀಡಿದಲ್ಲಿ, ಆರೋಪಿಯು ಶಿಕ್ಷೆಯಿಂದ ಪಾರಾಗುತ್ತಾನೆ.

2014ರ ಅಕ್ಟೋಬರ್‌ನಲ್ಲಿ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪ ಎದುರಿಸುತ್ತಿದ್ದ ವ್ಯಕ್ತಿಯ ಪ್ರಕರಣದ ವಿಚಾರಣೆ ನಡೆಸಿದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಅಮಿತ್ ಸಹ್ರಾವತ್ ಅವರು, ‘ಸಂತ್ರಸ್ತೆಯು ಪ್ರತಿಕೂಲ ಸಾಕ್ಷ್ಯ ನುಡಿದಿದ್ದರೂ, ಡಿಎನ್‌ಎ ಮತ್ತು ವಿಧಿವಿಜ್ಞಾನ ಪ್ರಯೋಗಾಲಯದ ವರದಿಗಳು ಸತ್ಯವನ್ನು ದಾಖಲಿಸಿವೆ’ ಎಂದು ಹೇಳಿದ್ದಾರೆ.

ಸಂತ್ರಸ್ತೆಯು ವೈದ್ಯರು, ಪೊಲೀಸ್ ಮತ್ತು ಮ್ಯಾಜಿಸ್ಟ್ರೇಟ್ ಎದುರು, ಈ ಪುರುಷ ತನ್ನೊಂದಿನ ದೈಹಿಕ ಸಂಪರ್ಕ ಹೊಂದಿದ್ದ ಎಂಬುದಾಗಿ ಹೇಳಿದ್ದಳು. ಆದರೆ ಆಕೆ ಕೋರ್ಟ್‌ನಲ್ಲಿ ಹೇಳಿಕೆ ನೀಡುವಾಗ ಪ್ರತಿಕೂಲ ಸಾಕ್ಷ್ಯ ನುಡಿದಿದ್ದಳು ಎಂದು ಆದೇಶದಲ್ಲಿ ಹೇಳಲಾಗಿದೆ.

‘ಸಂತ್ರಸ್ತರು ಹಾಗೂ ಇತರ ಸಾಕ್ಷಿಗಳು ಆರಂಭಿಕ ಹೇಳಿಕೆಗಳಲ್ಲಿ ಪ್ರಾಸಿಕ್ಯೂಷನ್ ಪರವಾಗಿ ಇರುತ್ತಾರೆ. ಆದರೆ ಕೋರ್ಟ್‌ ಮುಂದೆ ಹೇಳಿಕೆ ನೀಡುವ ಸಂದರ್ಭದಲ್ಲಿ ಅವರು ಪ್ರತಿಕೂಲ ಸಾಕ್ಷ್ಯ ನುಡಿಯುತ್ತಾರೆ ಎಂಬುದನ್ನು ಈ ನ್ಯಾಯಾಲಯ ಗಮನಿಸಿದೆ. ಹೀಗೆ ಪ್ರತಿಕೂಲ ಸಾಕ್ಷ್ಯ ನುಡಿಯುವುದಕ್ಕೆ ಕುಟುಂಬದ ಒಳಗೆ ನಡೆಯುವ ರಾಜಿಗಳು, ಬೆದರಿಕೆಗಳು ಅಥವಾ ಪ್ರಭಾವಗಳು ಸೇರಿದಂತೆ ಹಲವು ಕಾರಣಗಳು ಇರಬಹುದು’ ಎಂದು ಕೋರ್ಟ್ ಹೇಳಿದೆ.

ಆದರೆ ಸತ್ಯವನ್ನು ಅರಸುವುದು ಹಾಗೂ ಆರೋಪಿಗಳು ನ್ಯಾಯಾಂಗವನ್ನೇ ಅಣಕಿಸುವುದಕ್ಕೆ ಅವಕಾಶ ನೀಡದೆ ಇರುವುದು  ಕೋರ್ಟ್‌ನ ಕರ್ತವ್ಯ ಎಂದು ನ್ಯಾಯಾಧೀಶರು ಹೇಳಿದ್ದಾರೆ. ಆರೋಪಿಯು ಸಂತ್ರಸ್ತೆಯ ಜೊತೆ ದೈಹಿಕ ಸಂಪರ್ಕ ಹೊಂದಿದ್ದ ಎಂಬುದನ್ನು ಡಿಎನ್‌ಎ ಹಾಗೂ ಎಫ್‌ಎಸ್‌ಎಲ್‌ ವರದಿಗಳು ಸಾಬೀತುಮಾಡಿವೆ ಎಂದು ಕೋರ್ಟ್ ಹೇಳಿದೆ.

ಸಾಕ್ಷಿಯು ಸುಳ್ಳು ಹೇಳಬಹುದು. ಆದರೆ ವೈಜ್ಞಾನಿಕ ಸಾಕ್ಷ್ಯಗಳು ಸುಳ್ಳು ಹೇಳುವುದಿಲ್ಲ. ಈ ಸಾಕ್ಷ್ಯಗಳನ್ನು ಕೈಬಿಡಲು ಆಗುವುದಿಲ್ಲ ಎಂದು ಅದು ಹೇಳಿದೆ. ಸಂತ್ರಸ್ತೆಯ ಮೇಲೆ ಪ್ರಭಾವ ಬೀರಲಾಗಿತ್ತು ಅಥವಾ ಆಕೆಯನ್ನು ಬೆದರಿಸಲಾಗಿತ್ತು. ಈ ಕಾರಣಕ್ಕೆ ಆಕೆಯು ಸತ್ಯವನ್ನು ಹೇಳಲಿಲ್ಲ ಎಂಬುದು ಕೂಡ ಸಾಬೀತಾಗಿದೆ ಎಂದು ಅದು ಹೇಳಿದೆ. ಅಪರಾಧಿಗೆ ಶಿಕ್ಷೆ ಏನು ಎಂಬ ಬಗ್ಗೆ ವಾದ–ಪ್ರತಿವಾದಗಳು ನಡೆಯಬೇಕಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT